Asianet Suvarna News Asianet Suvarna News

Asaduddin Owaisi: ಪಿಎಫ್‌ಐನ ಬ್ಯಾನ್‌ ಸರಿಯಲ್ಲ, ಬಲಪಂಥೀಯ ಸಂಘಟನೆಗಳನ್ನ ಯಾಕೆ ನಿಷೇಧಿಸಿಲ್ಲ?

ನಾವು ಈಗಾಗಲೇ ಪಿಎಫ್‌ಐ ಸಂಘಟನೆಯ ಯೋಚನೆಗಳನ್ನು ವಿರೋಧಿಸಿದ್ದೆವು. ಹಾಗಂತೆ ಇಡೀ ಪಿಎಫ್‌ಐ ಸಂಘಟನೆಯನ್ನೇ ಸರ್ಕಾರ ಬ್ಯಾನ್‌ ಮಾಡಿದ್ದು ಸರಿಯಲ್ಲ, ಬಲಪಂಥೀಯ ಸಂಘಟನೆಯನ್ನು ಸರ್ಕಾರ ಬ್ಯಾನ್‌ ಮಾಡೋದು ಯಾವಾಗ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ ಪ್ರಶ್ನೆ ಮಾಡಿದ್ದಾರೆ.

Asaduddin Owaisi Attacks Central Government thinking of PFI is not right but the ban on it is wrong san
Author
First Published Sep 28, 2022, 3:14 PM IST

ನವದೆಹಲಿ (ಸೆ. 28): ಪಾಪ್ಯುಲರ್‌ ಫ್ರಂಟ್ ಆಫ್‌ ಇಂಡಿಯಾ ಅದರ 8 ವಿವಿಧ ಅಂಗಗಳನ್ನು ಕೇಂದ್ರ ಸರ್ಕಾರ ಭಯೋತ್ಪಾದನೆ ಚಟುವಟಿಕೆಗಳಲ್ಲಿ ಪಾಲ್ಗೊಂಡ ಆರೋಪದ ಮೇಳೆ ಯುಎಪಿಎ ಕಾಯ್ದೆಯಡಿ ಐದು ವರ್ಷ ನಿಷೇಧ ಹೇರಿದೆ. ಆದರೆ, ಪಿಎಫ್‌ಐ ಸಂಘಟನೆಯನ್ನು ಬ್ಯಾನ್‌ ಮಾಡಿದ ಬೆನ್ನಲ್ಲಿಯೇ, ರಾಜಕಾರಣ ಕೂಡ ತೀವ್ರಗೊಂಡಿದೆ. ಕೇರಳದಲ್ಲಿ ಕಮ್ಯುನಿಸ್ಟ್‌ ಪಾರ್ಟಿ ಈಗಾಗಲೇ ಈ ಕುರಿತಾಗಿ ಪ್ರಶ್ನೆ ಎತ್ತಿದೆ. ಪಿಎಫ್‌ಐ ಬ್ಯಾನ್‌ ಮಾಡಿದ್ದಾಯ್ತು, ಆರೆಸ್ಸೆಸ್‌ ಅನ್ನು ಯಾವಾಗ ಬ್ಯಾನ್‌ ಮಾಡ್ತೀರಿ ಎಂದು ಹೇಳಿದೆ. ಈ ನಡುವೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್‌ ಓವೈಸಿ, ಪಿಎಫ್‌ಐ ಬ್ಯಾನ್‌ ವಿಚಾರವಾಗಿ ಕಟು ಶಬ್ದಗಳಲ್ಲಿ ಟೀಕೆ ಮಾಡಿದ್ದಾರೆ. ಪಿಎಫ್‌ಐ ಚಿಂತನೆಯನ್ನು ನಾವು ಹಿಂದಿನಿಂದಲೂ ವಿರೋಧಿಸುತ್ತಾ ಬಂದಿದ್ದೇವೆ, ಆದರೆ ಅದರ ಮೇಲಿನ ನಿಷೇಧವು ಸಂಪೂರ್ಣವಾಗಿ ತಪ್ಪು ಎಂದು ಅವರು ಹೇಳಿದ್ದಾರೆ. ಅಪರಾಧ ಎಸಗಿದ ಕೆಲ ವ್ಯಕ್ತಿಗಳ ಕೃತ್ಯಗಳಿಗೆ ಸಂಘಟನೆಯನ್ನೇಕೆ ನಿಷೇಧಿಸಬೇಕು? ಇದು ಸರಿಯಲ್ಲ ಎಂದರು. ಬಲಪಂಥೀಯ ಬಹುಸಂಖ್ಯಾತ ಸಂಘಟನೆಗಳನ್ನು ಸರ್ಕಾರ ಯಾವಾಗ ನಿಷೇಧಿಸುತ್ತದೆ? ಅವರನ್ನು ಏಕೆ ಸರ್ಕಾರ ರಕ್ಷಣೆ ಮಾಡುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ಈ ರೀತಿಯ ನಿಷೇಧ ಅಪಾಯಕಾರಿ ಎಂದು ಓವೈಸಿ ಹೇಳಿದ್ದಾರೆ. ತನ್ನ ಅಭಿಪ್ರಾಯವನ್ನು ಹೇಳಲು ಬಯಸುವ ಪ್ರತಿಯೊಬ್ಬ ಮುಸಲ್ಮಾನನ ಮೇಲೆ ಇದು ನಿಷೇಧವಾಗಿದೆ. ಭಾರತದ ಕರಾಳ ಕಾನೂನು ಯುಎಪಿಎ ಅಡಿಯಲ್ಲಿ ಈಗ ಪ್ರತಿಯೊಬ್ಬ ಮುಸ್ಲಿಂ ಯುವಕನನ್ನು ಪಿಎಫ್‌ಐ ಹೆಸರಿನಲ್ಲಿ ಬಂಧಿಸಲಾಗುತ್ತದೆ ಎಂದು ಅವರು ಹೇಳಿದರು. ನಾನು ಯುಎಪಿಎಯನ್ನು ವಿರೋಧಿಸಿದ್ದೇನೆ ಮತ್ತು ಯುಎಪಿಎ ಅಡಿಯಲ್ಲಿರುವ ಎಲ್ಲಾ ಕ್ರಮಗಳನ್ನು ಯಾವಾಗಲೂ ವಿರೋಧಿಸುತ್ತೇನೆ. ಈ ನಿಷೇಧವು ಸಂವಿಧಾನದ ಮೂಲ ರಚನೆಯ ಭಾಗವಾಗಿರುವ ಸ್ವಾತಂತ್ರ್ಯದ ತತ್ವವನ್ನು ಉಲ್ಲಂಘಿಸುತ್ತದೆ ಎಂದು ಓವೈಸಿ (Asaduddin Owaisi) ಹೇಳಿದ್ದಾರೆ.


PFI ಎಂದರೇನು ಗೊತ್ತಾ?: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಅನ್ನು 17 ಫೆಬ್ರವರಿ 2007 ರಂದು ರಚಿಸಲಾಯಿತು. ದಕ್ಷಿಣ ಭಾರತದ ಮೂರು ಮುಸ್ಲಿಂ ಸಂಘಟನೆಗಳನ್ನು ವಿಲೀನಗೊಳಿಸಿ ಈ ಸಂಘಟನೆಯನ್ನು ರಚಿಸಲಾಯಿತು. ಇವುಗಳಲ್ಲಿ ನ್ಯಾಶನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಕೇರಳ (ಎನ್‌ಡಿಎಫ್‌ಕೆ), ಕರ್ನಾಟಕ ಫೋರಂ ಫಾರ್ ಡಿಗ್ನಿಟಿ (ಕೆಎಫ್‌ಡಿ) ಮತ್ತು ತಮಿಳುನಾಡಿನ ಮನಿತ ನೀತಿ ಪಸರೈ ಸೇರಿದ್ದವು. ಪ್ರಸ್ತುತ ಈ ಸಂಘಟನೆಯು ದೇಶದ 23 ರಾಜ್ಯಗಳಲ್ಲಿ ಸಕ್ರಿಯವಾಗಿದೆ ಎಂದು ಪಿಎಫ್‌ಐ ಹೇಳಿಕೊಂಡಿದೆ. ದೇಶದಲ್ಲಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ (ಸಿಮಿ) ನಿಷೇಧದ ನಂತರ, ಪಿಎಫ್‌ಐ ವೇಗವಾಗಿ ವಿಸ್ತರಿಸಿದೆ. ಈ ಸಂಘಟನೆಯು ಕರ್ನಾಟಕ, ಕೇರಳದಂತಹ ದಕ್ಷಿಣ ಭಾರತದ ರಾಜ್ಯಗಳಲ್ಲಿ ಸಾಕಷ್ಟು ಹಿಡಿತ ಹೊಂದಿದೆ ಎನ್ನಲಾಗಿದೆ. ಇದು ಅನೇಕ ಶಾಖೆಗಳನ್ನು ಸಹ ಹೊಂದಿದೆ. ಅದರ ರಚನೆಯಾದಾಗಿನಿಂದ, ಪಿಎಫ್‌ಐ ಮೇಲೆ ಸಮಾಜ ವಿರೋಧಿ ಮತ್ತು ದೇಶ ವಿರೋಧಿ ಚಟುವಟಿಕೆಗಳ ಆರೋಪಗಳಿವೆ.

PFI Ban: ಇನ್ನು ಶುರು ಕಾನೂನು ಹೋರಾಟ, ಪಿಎಫ್‌ಐ ಮುಂದೆ ಇರೋ ದಾರಿ ಏನು?

ಈ ಸಂಸ್ಥೆಯ ಮೇಲಿನ ಆರೋಪಗಳೇನು?: ಪಿಎಫ್‌ಐ (Popular Front Of India) ಒಂದು ಮೂಲಭೂತವಾದದ ಸಂಘಟನೆಯಾಗಿದೆ. 2017ರಲ್ಲಿ ಎನ್‌ಐಎ ಈ ಸಂಘಟನೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ಗೃಹ ಸಚಿವಾಲಯಕ್ಕೆ ಪತ್ರ ಬರೆದಿತ್ತು. ಹಿಂಸಾತ್ಮಕ ಮತ್ತು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವ ಸಂಘಟನೆಯ ಬಗ್ಗೆ ಎನ್‌ಐಎ ತನಿಖೆ ಆಗ ಮುನ್ನೆಲೆಗೆ ಬಂದಿತ್ತು. ಎನ್ಐಎ ದಾಖಲೆಯ ಪ್ರಕಾರ, ಈ ಸಂಘಟನೆಯು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿದೆ. ಈ ಸಂಘಟನೆಯು ಮುಸ್ಲಿಮರ ಮೇಲೆ ಧಾರ್ಮಿಕ ಮತಾಂಧತೆಯನ್ನು ಹೇರಿ ಅವರನ್ನು ಮತಾಂತರಕ್ಕೆ ಒತ್ತಾಯಿಸುವ ಕೆಲಸ ಮಾಡುತ್ತದೆ. ಪಿಎಫ್‌ಐ ಶಸ್ತ್ರಾಸ್ತ್ರ ನಿರ್ವಹಣೆಗಾಗಿ ತರಬೇತಿ ಶಿಬಿರ ನಡೆಸುತ್ತಿದೆ ಎಂದು ಎನ್‌ಐಎ ಆರೋಪಿಸಿದೆ. ಅಷ್ಟೇ ಅಲ್ಲ, ಈ ಸಂಘಟನೆ ಯುವಕರನ್ನು ಮತಾಂಧರನ್ನಾಗಿಸಿ ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರೇರೇಪಿಸುತ್ತದೆ.

PFI Ban: ಮುಸ್ಲಿಂ ಮೂಲಭೂತವಾದಿ ಸಂಘಟನೆಯ ರಕ್ತಸಿಕ್ತ ಇತಿಹಾಸ..!

ನಿಷೇಧವಾಗಿರುವ ಸಂಘಟನೆಗಳು: ಪಿಎಫ್‌ಐ (PFI), ರಿಹಾಬ್‌ ಫೌಂಡೇಷನ್‌ ಇಂಡಿಯಾ ( Rehab India Foundation), ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ (Campus Front Of India), ನ್ಯಾಷನಲ್‌ ವುಮೆನ್ಸ್‌ ಫ್ರಂಟ್‌ (National Women's Front), ಆಲ್‌ ಇಂಡಿಯಾ ಇಮಾಮ್ಸ್ ಕೌನ್ಸಿಲ್‌ (All India Imams Council), ಜೂನಿಯರ್ ಫ್ರಂಟ್‌ (Junior Front), ಎಂಪವರ್‌ ಇಂಡಿಯಾ ಫೌಂಡೇಷನ್‌ (Empower India Foundation), ರಿಹಾಬ್‌ ಫೌಂಡೇಷನ್‌ ಕೇರಳ (Rehab Foundation Kerala), ನ್ಯಾಷನಲ್‌ ಕಾನ್ಫೆಡರೇಷನ್‌ ಆಫ್‌ ಹ್ಯೂಮನ್‌ ರೈಟ್ಸ್‌ ಆರ್ಗನೈಜೇಷನ್‌ (National Confederation of Human Rights Organization) ಸಂಘಟನೆಯನ್ನು ಬ್ಯಾನ್‌ ಮಾಡಲಾಗಿದೆ.

Follow Us:
Download App:
  • android
  • ios