ನವದೆಹಲಿ[ಮಾ.01]: ಪಾಕಿಸ್ತಾನ ಎಲ್ಲಿವರೆಗೂ ಉಗ್ರರಿಗೆ ಆಶ್ರಯ, ಬೆಂಬಲ ನೀಡುತ್ತದೋ ಅಲ್ಲಿವರೆಗೂ ನಾವು ಅಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡುತ್ತಿರುತ್ತೇವೆ ಎಂದು ಭೂಸೇನೆಯ ಮೇಜರ್‌ ಜನರಲ್‌ ಸುರೇಂದ್ರ ಸಿಂಗ್‌ ಮಹಲ್‌ ಎಚ್ಚರಿಕೆ ನೀಡಿದರು.

ಉದ್ದೇಶಪೂರ್ವಕವಾಗಿ ಖಾಲಿ ಪ್ರದೇಶದ ಮೇಲೆ ದಾಳಿ ಮಾಡಿದ್ದೇವೆ ಎಂದು ಪಾಕಿಸ್ತಾನ ಹೇಳಿಕೊಳ್ಳುತ್ತಿದೆ. ಆದರೆ ಅವರು ಮಿಲಿಟರಿ ನೆಲೆಯನ್ನೇ ಗುರಿಯಾಗಿಸಿಕೊಂಡಿದ್ದರು ಎಂಬುದು ನಮಗೆ ಗೊತ್ತಿದೆ. ನಮ್ಮ ಸೇನಾ ನೆಲೆಗಳ ಬಳಿಯೇ ಅವರು ಬಾಂಬ್‌ ಹಾಕಿ ಹೋಗಿದ್ದಾರೆ. ಆದರೆ ನಮ್ಮ ಪಡೆಗಳ ಕ್ಷಿಪ್ರ ಪ್ರತಿಕ್ರಿಯೆಯಿಂದಾಗಿ ಭಾರಿ ಹಾನಿ ಮಾಡಲು ಅವರಿಂದ ಆಗಿಲ್ಲ. ಬುಧವಾರ ನಮ್ಮ ಪೈಲಟ್‌ ಅನ್ನು ಪಾಕಿಸ್ತಾನ ಬಿಡುಗಡೆ ಮಾಡಲಿದೆ ಎಂಬ ಸುದ್ದಿ ಬಂದಿದೆ. ಪೈಲಟ್‌ ಬಿಡುಗಡೆ ಸಂತೋಷದ ವಿಷಯ. ಸ್ವಾಗತಿಸುತ್ತೇವೆ ಎಂದರು.

ಭಯೋತ್ಪಾದಕರ ಮೇಲೆ ನಾವು ದಾಳಿ ಮಾಡಿದ ಬಳಿಕ ಪಾಕಿಸ್ತಾನ ಸೇನೆ ಮೊದಲು ಗಡಿಯಾಚೆಯಿಂದ ಸುಂದರ್‌ಬನಿ, ಬಿಂಬೆರ್‌, ನೌಶೆರಾ ಹಾಗೂ ಕೃಷ್ಣಾ ಘಾಟಿಯಲ್ಲಿ ಅಪ್ರಚೋದಿತ ದಾಳಿ ನಡೆಸಿತು. ಅದಕ್ಕೆ ನಾವು ತಕ್ಕ ಉತ್ತರ ಕೊಟ್ಟಿದ್ದೇವೆ ಎಂದು ಹೇಳಿದರು.