ಸೋಂಕು ಹಬ್ಬುವ ಪ್ರಮಾಣ ತೀವ್ರ ಏರಿಕೆ| ಕಳೆದ ಏಪ್ರಿಲ್‌ನಲ್ಲಿ ಹರಡುವಿಕೆ ಪ್ರಮಾಣ ಶೇ.1ರಷ್ಟಿತ್ತು| ಈಗ ಒಬ್ಬ ಸೋಂಕಿತರಿಂದ ಸರಾಸರಿ 1.32 ಜನರಿಗೆ ಹರಡುವಿಕೆ| ಇಷ್ಟೊಂದು ಏರಿದ್ದು ಕಳವಳಕಾರಿ: ತಜ್ಞರು

ನವದೆಹಲಿ(ಮಾ.24): ದೇಶದ ವಿವಿಧ ರಾಜ್ಯಗಳಲ್ಲಿ ಕೊರೋನಾ 2ನೇ ಅಲೆಯ ನಡುವೆಯೇ, ಒಬ್ಬರಿಂದ ಇತರರಿಗೆ ಸೋಂಕು ಹಬ್ಬುವ ಪ್ರಮಾಣವೂ ಆತಂಕಕಾರಿ ಮಟ್ಟಕ್ಕೆ ತಲುಪಿದೆ ಎಂದು ಕಂಡುಬಂದಿದೆ.

‘ಆರ್‌’ ಫ್ಯಾಕ್ಟರ್‌ ಅಥವಾ ‘ರೀಪ್ರೊಡಕ್ಷನ್‌ ರೇಟ್‌’ ಆಧಾರದಲ್ಲೇ ವಿಶ್ವದಾದ್ಯಂತ ಸೋಂಕಿನ ಗತಿಯ ಮೇಲೆ ಕಣ್ಣಿಡಲಾಗುತ್ತದೆ. ಸೋಂಕು ಎಷ್ಟುವೇಗವಾಗಿ ಹರಡುತ್ತಿದೆ? ಸೋಂಕಿನ ತೀವ್ರತೆ ಎಷ್ಟಿದೆ ಎಂಬುದನ್ನು ಪತ್ತೆಮಾಡುವಲ್ಲಿ ‘ಆರ್‌’ ಫ್ಯಾಕ್ಟರ್‌ ಅತ್ಯಂತ ಮಹತ್ವದ್ದು.

ಕಳೆದ ಏಪ್ರಿಲ್‌ನಲ್ಲಿ ದೇಶದಲ್ಲಿ ಒಟ್ಟಾರೆ ಸೋಂಕಿತರ ಪ್ರಮಾಣ 27000ದ ಆಸುಪಾಸಿನಲ್ಲಿದ್ದ ವೇಳೆ ‘ಆರ್‌’ ಫ್ಯಾಕ್ಟರ್‌ ಶೇ.1ರಷ್ಟಿತ್ತು. ಅಂದರೆ ಒಬ್ಬ ಸೋಂಕಿತ ವ್ಯಕ್ತಿಯಿಂದ ಇನ್ನು ಒಬ್ಬರಿಗೆ ಮಾತ್ರವೇ ಸೋಂಕು ಹಬ್ಬುತ್ತಿದೆ ಎಂದರ್ಥ. ಹರಡುವಿಕೆ ಪ್ರಮಾಣ ಶೇ.1ರಷ್ಟಿದ್ದರೆ ಅದು ಉತ್ತಮ ಎಂದೇ ಪರಿಗಣಿಸಲಾಗುತ್ತದೆ. ಆದರೆ ಕಳೆದ ಸೋಮವಾರ ಈ ಪ್ರಮಾಣ ಶೇ.1.32ಕ್ಕೆ ತಲುಪಿದೆ. ಅಂದರೆ ಒಬ್ಬ ಸೋಂಕಿತ ಸರಾಸರಿ ಶೇ.1.32 ಜನರಿಗೆ ಸೋಂಕು ಹಬ್ಬಿಸುತ್ತಿದ್ದಾನೆ. ಇದು ಕಳೆದ 1 ವರ್ಷದಲ್ಲೇ ಗರಿಷ್ಠ ಪ್ರಮಾಣವಾಗಿದ್ದು ಆತಂಕಕ್ಕೆ ಕಾರಣವಾಗಿದೆ ಎಂದು ತಜ್ಞರು ಹೇಳಿದ್ದಾರೆ.

‘ಆರ್‌’ ಫ್ಯಾಕ್ಟರ್‌ ಶೇ.1ಕ್ಕಿಂತ ಕಡಿಮೆ ಇದ್ದರೆ, ಶೀಘ್ರವೇ ಸೋಂಕು ಹರಡುವಿಕೆ ಪ್ರಮಾಣ ಕಡಿಮೆಯಾಗಲಿದೆ. ಏಕೆಂದರೆ ಅದು ತನ್ನ ತೀವ್ರತೆಯನ್ನು ಕಳೆದುಕೊಂಡಿದೆ ಎಂದು ಪರಿಗಣಿಸಲಾಗುತ್ತದೆ. ಕಳೆದ ನವೆಂಬರ್‌ನಲ್ಲಿ ದೇಶದಲ್ಲಿ ‘ಆರ್‌’ ಫ್ಯಾಕ್ಟರ್‌ ಶೇ.1ಕ್ಕಿಂತ ಕಡಿಮೆ ಇತ್ತು. ಹೀಗಾಗಿಯೇ ನವೆಂಬರ್‌ ತಿಂಗಳಲ್ಲಿ ನಿತ್ಯ ದೃಢಪಡುತ್ತಿದ್ದ 90000 ಕೇಸುಗಳ ಪ್ರಮಾಣ ಫೆಬ್ರವರಿ ಮೊದಲ ವಾರಕ್ಕೆ ಕೇವಲ 10000ಕ್ಕೆ ಇಳಿದಿತ್ತು. ಆದರೆ ನಂತರದಲ್ಲಿ ಸೋಂಕಿನ ಪ್ರಮಾಣದಲ್ಲಿ ಮರಳಿ ಏರಿಕೆಯಾಗಿದ್ದು, ಕಳೆದ ಸೋಮವಾರ ಸಕ್ರಿಯ ಸೋಂಕಿತರ ಸಂಖ್ಯೆ 3.34 ಲಕ್ಷಕ್ಕೆ ತಲುಪಿದೆ. ಇದು ಹಿಂದಿನ ವಾರಕ್ಕಿಂತ ಶೇ.150ರಷ್ಟುಹೆಚ್ಚು.