ನವದೆಹಲಿ(ಏ.21): ದೇಶಾದ್ಯಂತ ಕೊರೋನಾ ಅಟ್ಟಹಾಸ ಮಿತಿ ಮೀರಿದೆ. ಈ ಮಹಾಮಾರಿಯನ್ನು ತಡೆಯಲು ಸರ್ಕಾರಗಳು ಎಲ್ಲಾ ಯತ್ನಗಳನ್ನು ನಡೆಸುತ್ತಿದೆ. ಹೀಗಿದ್ದರೂ ಕೊರೋನಾ ಹಾವಳಿ ದಿನೇ ದಿನೇ ಹೆಚ್ಚುತ್ತಿದೆ. ಅದರಲ್ಲೂ ವಿಶೇಷವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ನಾಲ್ಕನೇ ಅಲೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಹೀಗಿರುವಾಗಲೇ ಸದ್ಯ ಸಿಎಂ ಅರವಿಂದ ಕೇಜ್ರೀವಾಲ್‌ ಪತ್ನಿ ಸುನಇತಾ ಕೇಜ್ರೀವಾಲ್‌ಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆ ದೆಹಲಿ ಸಿಎಂ ಕೇಜ್ರೀವಾಲ್ ಹೋಂ ಕ್ವಾರಂಟೈನ್ ಆಗಿದ್ದಾರೆ.

ಕೇಜ್ರಿವಾಲ್ ತಮ್ಮ ವಯಸ್ಸಾದ ತಂದೆ, ತಾಯಿ ಮತ್ತು ಇಬ್ಬರು ಮಕ್ಕಳ ಜೊತೆಗೆ ವಾಸಿಸುತ್ತಿದ್ದಾರೆ. ಹೀಗಿರುವಾಗಲೇ ಪತ್ನಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅಲ್ಲದೇ ಅತ್ತ ಕೆಲವು ಆಪ್‌ ಶಾಸಕರಿಗೂ ಸೋಂಕು ತಗುಲಿದೆ. ಇವೆಲ್ಲಾ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕಾ ಕ್ರಮವಾಗಿ ಸಿಎಂ ಕೇಜ್ರೀವಾಲ್ ಸ್ವಯಂ ಕ್ವಾರಂಟೈನ್ ಆಗಿದ್ದಾರೆ. ಅಲ್ಲದೇ ದೆಹಲಿಯಲ್ಲಿ ಕೊರೋನಾ ನಿಯಂತ್ರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳೊಡನೆ ವಿಡಿಯೋ ಕಾನ್ಫರೆನ್ಸ್‌ ಮೂಲಕವೇ ಸಭೆ ನಡೆಸುತ್ತಿದ್ದಾರೆ.

ಇನ್ನು ದೆಹಲಿಯಲ್ಲಿ ಕಳೆದ ಇಪ್ಪತ್ನಾಲ್ಕು ಗಂಟೆಯಲ್ಲಿ 28,395 ಕೊರೋನಾ ಪ್ರಕರಣಗಳು ದಾಖಲಾಗಿದ್ದು, ರಾಜ್ಯದ ಜನತೆಯನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಅಲ್ಲದೇ ಅತ್ತ ಸಿಎಂ ಕೇಜ್ರೀವಾಲ್‌ ಕೂಡಾ ದೆಹಲಿಯ ಆಸ್ಪತ್ರೆಗಳು ಆಮ್ಲಜನಕ ಕೊರತೆ ಎದುರಿಸುತ್ತಿದ್ದು, ಶೀಘ್ರವಾಗಿ ಆಕ್ಸಿಜನ್ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.