ಮಣಿಪುರ ಹಿಂಸಾಚಾರ ವಿಷಯ ಮುಂದಿಟ್ಟುಕೊಂಡು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ವಿಪಕ್ಷ ನಾಯಕರು ಸರ್ಕಾರದ ವಿರುದ್ಧ ಮಾಡಿದ ಗಂಭೀರ ಆರೋಪಗಳಿಗೆ ಲೋಕಸಭೆಯಲ್ಲಿ ಎಳೆಎಳೆಯಾಗಿ ತಿರುಗೇಟು ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ದೇಶದಲ್ಲಿ ಅತಿ ಹೆಚ್ಚು ಹಿಂಸಾಚಾರ ನಡೆದಿದ್ದೇ ಜವಾಹರ ಲಾಲ್‌ ನೆಹರೂ, ಇಂದಿರಾ ಮತ್ತು ರಾಜೀವ್‌ ಗಾಂಧಿ ಕಾಲದಲ್ಲಿ ಎಂದು ಅಂಕಿ-ಅಂಶ ಸಮೇತ ಉದಾಹರಿಸಿದ್ದಾರೆ.

  • ರಾಹುಲ್ ಗಾಂಧಿ ಮಣಿಪುರ ಹೈ ಡ್ರಾಮಾ: ಅಮಿತ್ ಷಾ ತಿರುಗೇಟು
  • ದೇಶದಲ್ಲಿ ಅತಿ ಹೆಚ್ಚು ಹಿಂಸಾಚಾರ ನಡೆದಿದ್ದೇ ನೆಹರು, ಇಂದಿರಾ, ರಾಜೀವ್‌ ಕಾಲದಲ್ಲಿ
  • ನಗ್ನ ಪರೇಡ್‌ ವಿಡಿಯೋವನ್ನು ಅಧಿವೇಶನ ಆರಂಭದ ಮುನ್ನಾ ದಿನ ಬಹಿರಂಗಪಡಿಸಿದ್ದೇಕೆ?
  • ಮಣಿಪುರದಲ್ಲಿ ನಡೆದಿದ್ದು ನಾಚಿಕೆಗೇಡು. ಆದರೆ ಆ ಬಗ್ಗೆ ರಾಜಕೀಯ ಮತ್ತೂ ನಾಚಿಕೆಗೇಡು
  • ರಾಹುಲ್‌ ಈ ಹಿಂದೆ ಕಲಾವತಿ ಬಗ್ಗೆ ಹೇಳಿದ್ದರು. ಆಕೆಗೆ ಹಣ, ಮನೆ ನೀಡಿದ್ದು ಮೋದಿ ಸರ್ಕಾರ
  • ನಾಯಕರೊಬ್ಬರನ್ನು ರಾಜಕೀಯದಲ್ಲಿ ಮುಂದೆ ತರಲು 13 ಯತ್ನ ನಡೆದವು. ಎಲ್ಲವೂ ಫೇಲಾಗಿವೆ

ನವದೆಹಲಿ: ಮಣಿಪುರ ಹಿಂಸಾಚಾರ ವಿಷಯ ಮುಂದಿಟ್ಟುಕೊಂಡು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ವಿಪಕ್ಷ ನಾಯಕರು ಸರ್ಕಾರದ ವಿರುದ್ಧ ಮಾಡಿದ ಗಂಭೀರ ಆರೋಪಗಳಿಗೆ ಲೋಕಸಭೆಯಲ್ಲಿ ಎಳೆಎಳೆಯಾಗಿ ತಿರುಗೇಟು ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ದೇಶದಲ್ಲಿ ಅತಿ ಹೆಚ್ಚು ಹಿಂಸಾಚಾರ ನಡೆದಿದ್ದೇ ಜವಾಹರ ಲಾಲ್‌ ನೆಹರೂ, ಇಂದಿರಾ ಮತ್ತು ರಾಜೀವ್‌ ಗಾಂಧಿ ಕಾಲದಲ್ಲಿ ಎಂದು ಅಂಕಿ-ಅಂಶ ಸಮೇತ ಉದಾಹರಿಸಿದ್ದಾರೆ.

ಜೊತೆಗೆ ರಾಹುಲ್‌ ಗಾಂಧಿ ಅವರ ಇತ್ತೀಚಿನ ಮಣಿಪುರ (Manipur) ಭೇಟಿ ಹೈಡ್ರಾಮಾ. ಮಣಿಪುರಕ್ಕೆ ತೆರಳಿದ ವೇಳೆ ಭದ್ರತಾ ದೃಷ್ಟಿಯಿಂದ ಕಾಪ್ಟರ್‌ ನೀಡಿದರೂ ರಾಹುಲ್‌ 3 ಗಂಟೆ ರಾಜಕೀಯ ಮಾಡಿದರು ಎಂದು ಟೀಕಿಸಿರುವ ಶಾ, ಮಣಿಪುರದಲ್ಲಿ ನಡೆದ ಸರಣಿ ಹಿಂಸಾಚಾರ ನಾಚಿಕೆಗೇಡಿನದ್ದು. ಆದರೆ ಹಿಂಸಾಚಾರ ಮುಂದಿಟ್ಟುಕೊಂಡು ಮಾಡುತ್ತಿರುವ ರಾಜಕೀಯ ಅದಕ್ಕಿಂತಲೂ ನಾಚಿಕೆಗೇಡಿನದ್ದು ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ ರಾಹುಲ್‌ ಗಾಂಧಿ (Rahul Gandhi) ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಅಮಿತ್‌ ಶಾ, 2008ರಲ್ಲಿ ರಾಹುಲ್‌ ಮಹಾರಾಷ್ಟ್ರದ (Maharashtra) ಯವತ್ಮಾಲ್‌ ಜಿಲ್ಲೆಯಲ್ಲಿ ಕಲಾವತಿ ಎಂಬ ಬಡ ಮಹಿಳೆಯ ವಿಷಯವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿ ದೊಡ್ಡ ಗದ್ದಲ ಎಬ್ಬಿಸಿದ್ದರು. ಆದರೆ ಅವರಿಗೆ ಕಾಂಗ್ರೆಸ್‌ ಏನೂ ನೆರವು ನೀಡಲಿಲ್ಲ. ಆಕೆಗೆ ಹಣ, ಮನೆ ಎಲ್ಲಾ ನೀಡಿದ್ದು ಮೋದಿ ಸರ್ಕಾರ ಎಂದರು. ಜೊತೆಗೆ ವಿಪಕ್ಷ ನಾಯಕನೊಬ್ಬನನ್ನು ರಾಜಕೀಯದಲ್ಲಿ ಮುಂದೆ ತರುವ 13 ಪ್ರಯತ್ನಗಳು ನಡೆದವು. ಆದರೆ ಎಲ್ಲವೂ ವಿಫಲವಾದವು ಎಂದು ಹೆಸರು ಹೇಳದೆಯೇ ರಾಹುಲ್‌ ವಿರುದ್ಧ ವ್ಯಂಗ್ಯವಾಡಿದರು.

ಶಿವರಾತ್ರಿ ಮುಂಚೆ ಚುನಾವಣೆ ನಡೆದ್ರೆ ಮಾತ್ರ ಮೋದಿ ಪ್ರಧಾನಿ, ಇಲ್ದಿದ್ರೆ ಮಹಿಳೆಗೆ ಪ್ರಧಾನಿ ಪಟ್ಟ!

ಜೊತೆಗೆ ಮಣಿಪುರದ ಎರಡೂ ಸಮುದಾಯಗಳು ತಕ್ಷಣವೇ ಹಿಂಸಾಚಾರ ನಿಲ್ಲಿಸಿ ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆಗೆ ಮುಂದಾಗಬೇಕು ಎಂದು ಕೈಮುಗಿದು ಕೇಳಿಕೊಳ್ಳುವೆ ಎಂದು ಶಾ ಮನವಿ ಮಾಡಿದರು.

ವಾಕ್‌ ಪ್ರಹಾರ :

ಅವಿಶ್ವಾಸ ಗೊತ್ತುವಳಿ (No vote of confidence) ವಿರುದ್ಧ ಲೋಕಸಭೆಯಲ್ಲಿ (Loksabha) ಬುಧವಾರ ಸುದೀರ್ಘವಾಗಿ ಮಾತನಾಡಿದ ಅಮಿತ್‌ ಶಾ, ‘ಮೇ 4ರಂದು ಇಬ್ಬರು ಮಹಿಳೆಯರ ನಗ್ನ ಪರೇಡ್‌ ಘಟನೆ ಬೆಳಕಿಗೆ ಬಂದಿದ್ದೇ ಜು.19ರಂದು. ಅಲ್ಲಿಯವರೆಗೂ ಸರ್ಕಾರಕ್ಕೂ ಆ ವಿಷಯ ಗೊತ್ತಿರಲಿಲ್ಲ. ಇಂಥ ವಿಡಿಯೋಗಳನ್ನು ಜಾಲತಾಣದಲ್ಲಿ ಹಂಚಿಕೊಳ್ಳುವ ಬದಲು, ಪೊಲೀಸರಿಗೆ ನೀಡಿದ್ದರೆ ತಕ್ಷಣವೇ ತಪ್ಪಿತಸ್ಥರನ್ನು ಬಂಧಿಸಬಹುದಿತ್ತು. ಜೊತೆಗೆ ಸಂಸತ್‌ ಅಧಿವೇಶನ ಆರಂಭಕ್ಕೂ ಮುನ್ನಾ ದಿನ ಇಂಥ ವಿಡಿಯೋ ಬಹಿರಂಗವಾದ ಮರ್ಮವಾದರೂ ಏನು’ ಎಂದು ಪ್ರಶ್ನಿಸಿದರು.

‘ಮಣಿಪುರದಲ್ಲಿ ನಡೆದ ಸರಣಿ ಹಿಂಸಾಚಾರ ಒಪ್ಪಲಾಗದು ಎಂಬ ವಿಪಕ್ಷಗಳ ಮಾತಿಗೆ ನನ್ನ ಸಹಮತವಿದೆ. ಅಲ್ಲಿ ಏನಾಯಿತೋ ಅದು ನಾಚಿಕೆಗೇಡಿನದ್ದು. ಆದರೆ ಈ ವಿಷಯದಲ್ಲಿ ರಾಜಕೀಯ ಮಾಡುವುದು ಅದಕ್ಕಿಂತಲೂ ನಾಚಿಕೆಗೇಡಿನ ವಿಷಯ. ಮಣಿಪುರ ಹಿಂಸಾಚಾರಕ್ಕೆ ಈವರೆಗೆ 152 ಜನರು ಬಲಿಯಾಗಿದ್ದು, 14898 ಜನರನ್ನು ಬಂಧಿಸಲಾಗಿದೆ. 1106 ಎಫ್‌ಐಆರ್‌ ದಾಖಲಿಸಲಾಗಿದೆ. ಜೊತೆಗೆ ರಾಜ್ಯದಲ್ಲಿ ಹಿಂಸಾಚಾರ ನಿಯಂತ್ರಣಕ್ಕೆ ಕೇಂದ್ರ ಮತ್ತು ರಾಜ್ಯ ಎರಡೂ ಸರ್ಕಾರಗಳು ಸಾಧ್ಯವಿರುವ ಎಲ್ಲಾ ಪ್ರಯತ್ನ ಕೈಗೊಂಡಿವೆ. ಸ್ವತಃ ನಾನೇ ಮಣಿಪುರಕ್ಕೆ ತೆರಳಿ 3 ಹಗಲು, ರಾತ್ರಿ ಕಳೆದಿದ್ದೇನೆ. ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್‌ ರಾಯ್‌ (Nithyananda Roy) 23 ದಿನ ಅಲ್ಲೇ ಉಳಿದು ಪರಿಸ್ಥಿತಿ ನಿಯಂತ್ರಣಕ್ಕೆ ಶ್ರಮಿಸಿದ್ದಾರೆ’ ಎಂದು ಹೇಳಿದರು.

Watch: ಲೋಕಸಭೆಯಲ್ಲೇ ಮಹಿಳಾ ಸಂಸದರಿಗೆ ಫ್ಲೈಯಿಂಗ್‌ ಕಿಸ್‌ ನೀಡಿದ ರಾಹುಲ್‌ ಗಾಂಧಿ!

ಹಿಂಸೆಗೆ ಕಾರಣ

ರಾಜ್ಯದಲ್ಲಿ ಹಿಂಸೆಗೆ ಕಾರಣವೇನು ಎಂಬುದರ ಬಗ್ಗೆ ಮಾಹಿತಿ ನೀಡಿದ ಶಾ ‘2021ರಲ್ಲಿ ಮ್ಯಾನ್ಮಾರ್‌ ಸರ್ಕಾರ (Myanmar Govt) ಬಂಡುಕೋರರ ವಿರುದ್ಧ ಕ್ರಮ ಆರಂಭಿಸಿದ ಬಳಿಕ ಮಣಿಪುರಕ್ಕೆ ಕುಕಿ ವಲಸಿಗರ (Cookie immigrants) ವಲಸೆ ಹೆಚ್ಚಾಯಿತು. ಅವರೆಲ್ಲಾ ಮಣಿಪುರದ ಕಣಿವೆ ಪ್ರದೇಶದ ಅರಣ್ಯದಲ್ಲಿ ವಾಸಿಸಲು ಆರಂಭಿಸಿದರು. ಅದರ ಬೆನ್ನಲ್ಲೇ ವಲಸಿಗರ ಪ್ರದೇಶಗಳನ್ನು ಹಳ್ಳಿಗಳೆಂದು ಘೋಷಿಸಲಾಗುವುದು ಎಂಬ ವದಂತಿ ಹಬ್ಬಿತು. ಇದು ಸಹಜವಾಗಿಯೇ ಮತ್ತೊಂದು ಸಮುದಾಯದ ಜನರಲ್ಲಿ ಆತಂಕಕ್ಕೆ ಕಾರಣವಾಯ್ತು. ಅದರ ಬೆನ್ನಲ್ಲೇ ಮೈತೇಯಿ ಸಮುದಾಯವನ್ನು ಪರಿಶಿಷ್ಟಪಂಗಡಕ್ಕೆ ಸೇರಿಸಬೇಕೆಂಬ ಹೈಕೋರ್ಟ್‌ ಆದೇಶ ಕೂಡಾ ಬೆಂಕಿಗೆ ತುಪ್ಪ ಸುರಿದಂತಾಗಿ ಹಿಂಸಾಚಾರ ಆರಂಭವಾಯಿತು. ಇದರ ಜೊತೆಗೆ ಮ್ಯಾನ್ಮಾರ್‌ನಿಂದ ಮಣಿಪುರಕ್ಕೆ ಭಾರೀ ಪ್ರಮಾಣದ ಮಾದಕ ವಸ್ತು ಕಳ್ಳಸಾಗಣೆ ಕೂಡಾ ಹಿಂಸಾಚಾರಕ್ಕೆ ಪ್ರಮುಖ ಕಾರಣವಾಯ್ತು’ ಎಂದು ಹೇಳಿದರು.

ನಿಯಂತ್ರಣಕ್ಕೆ ಕ್ರಮ

ರಾಜ್ಯದಲ್ಲಿ ಹಿಂಸಾಚಾರ ನಿಯಂತ್ರಣಕ್ಕಾಗಿ ಕುಕಿ (Kuki) ಮತ್ತು ಮೈತೇಯಿ (Maithei) ಸಮುದಾಯದ ಪ್ರದೇಶಗಳ ನಡುವೆ ಬಫರ್‌ ಜೋನ್‌ ನಿರ್ಮಿಸಿ ಅಲ್ಲಿಗೆ 36000 ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. 16 ಬಾರಿ ಮಣಿಪುರ ಸಿಎಂ ಜೊತೆ ವಿಡಿಯೋ ಕಾನ್ಫರೆನ್ಸ್‌ ನಡೆಸಲಾಗಿದೆ. ರಾಜ್ಯದ ಮುಖ್ಯ ಕಾರ್ಯದರ್ಶಿ, ಡಿಜಿಪಿ ಮತ್ತು ಸಿಎಂ ಸಲಹೆಗಾರರನ್ನು ಬದಲಾಗಿದೆ. ಆದರೂ ಎರಡೂ ಸಮುದಾಯದ ಆಕ್ರೋಶ ತಣ್ಣಗಾಗಿಲ್ಲ, ಆದರೆ ಇದೀಗ ಹಿಂಸಾಚಾರ ಇಳಿಕೆಯಾಗಿದೆ ಎಂದು ಶಾ ಹೇಳಿದರು.

ಶಾಲೆ ಆರಂಭ

ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಲೇ ರಾಜ್ಯದಲ್ಲಿ ಶೈಕ್ಷಣಿಕ ಚಟುವಟಿಕೆಗಳು ಪುನಾರಂಭವಾಗಿದೆ. ಶೇ.98ರಷ್ಟು ಶಾಲೆಗಳು ತೆರೆದಿವೆ, ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಶೇ.80ರಷ್ಟಿದೆ. ಆನ್‌ಲೈನ್‌ ತರಗತಿಗಳು ಕೂಡಾ ಆರಂಭವಾಗಿದೆ. ಜೊತೆಗೆ ಜನತೆಗೆ ಅಗತ್ಯ ಪ್ರಮಾಣದ ಅಕ್ಕಿ ಮತ್ತು ಔಷಧಗಳನ್ನು ಪೂರೈಸಲಾಗಿದೆ ಎಂದು ಸದನದ ಗಮನಕ್ಕೆ ತಂದರು.

ಮಣಿಪುರದಲ್ಲಿ ಶಾಂತಿ ಕಾಪಾಡಲು ಲೋಕಸಭೇಲಿ ಗೊತ್ತುವಳಿ ಅಂಗೀಕಾರ

3 ತಿಂಗಳಿನಿಂದ ಜನಾಂಗೀಯ ಘರ್ಷಣೆಗೆ ತುತ್ತಾಗಿರುವ ಮಣಿಪುರದಲ್ಲಿ ಶಾಂತಿಗೆ ಮನವಿ ಮಾಡಿ ಲೋಕಸಭೆಯಲ್ಲಿ ಗೊತ್ತುವಳಿಯನ್ನು ಅಂಗೀಕರಿಸಲಾಯಿತು. ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಬಳಿಕ ಕೇಂದ್ರ ಗೃಹ ಸಚಿವ ಅಮಿತ್‌ ಶಾ (amit shah), ಮಣಿಪುರದಲ್ಲಿ ಶಾಂತಿ ಮರುಸ್ಥಾಪಿಸುವ ವಾಗ್ದಾನವನ್ನು ನಾವು ಮಾಡುತ್ತೇವೆ. ಈ ಗೊತ್ತುವಳಿಯನ್ನು ಸ್ಪೀಕರ್‌ ಅವರು ಓದಬೇಕು ಎಂದು ಶಾ ಮನವಿ ಮಾಡಿದರು. ಇದಕ್ಕೆ ಆಡಳಿತ ಪಕ್ಷದ ಹಲವು ಸಂಸದರು ಹಾಗೂ ವಿಪಕ್ಷಗಳ ಸಂಸದರೂ ಬೆಂಬಲ ಸೂಚಿಸಿದರು. ಮೊದಲಿಗೆ ಗೊತ್ತುವಳಿಯ ಕರಡು ಪ್ರತಿಯನ್ನು ಎಲ್ಲರಿಗೂ ನೀಡಬೇಕು. ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇದಕ್ಕೆ ಅಂಗೀಕಾರ ನೀಡಬೇಕು ಎಂದು ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಆಗ್ರಹಿಸಿದರು.