* ರಾಜ್ಯದಲ್ಲಿ ಕೋವಿಡ್ ಕಾಟದಿಂದ ರಾಜ್ಯದ ಆರ್ಥಿಕ ಸ್ಥಿತಿ ಸಂಕಷ್ಟ* ಸಚಿವರ ಮನೆ ರಿಪೇರಿಗೆ 2ವರ್ಷಕ್ಕೆ 42 ಕೋಟಿ* ಕೋವಿಡ್‌ನಿಂದ ಆರ್ಥಿಕ ಸಂಕಷ್ಟವಿದ್ದರೂ ಭರ್ಜರಿ ಹಣ ವಿನಿಯೋಗ
ವಿಧಾನ ಪರಿಷತ್(ಡಿ.23): ರಾಜ್ಯದಲ್ಲಿ ಕೋವಿಡ್ ಕಾಟದಿಂದ ರಾಜ್ಯದ ಆರ್ಥಿಕ ಸ್ಥಿತಿ ಸಂಕಷ್ಟದಲ್ಲಿದ್ದರೂ ಸಹ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಮುಖ್ಯಮಂತ್ರಿ ಸೇರಿದಂತೆ ಕೆಲವು ಸಚಿವರು, ಉನ್ನತ ಸ್ಥಾನದಲ್ಲಿ ಇರುವವರ ನಿವಾಸಗಳಿಗೆ 42 ಕೋಟಿ ರು.ಗಿಂತ ಹೆಚ್ಚು ವೆಚ್ಚ ಮಾಡಿ ದುರಸ್ತಿಗೊಳಿಸಲಾಗಿದೆ. ನಿವಾಸಗಳಿಗೆ ಸುಣ್ಣಬಣ್ಣ, ಹೊಸ ಟೈಲ್ ಅಳವಡಿಕೆ ,ಶೌಚಾಲಯಗಳ ದುರಸ್ತಿ, ಅತ್ಯಾಧುನಿಕ ಮಾಡ್ಯುಲರ್ ಕಿಚನ್ ಅಳವಡಿಕೆ, ವಿವಿಧ ಸೌಲಭ್ಯ, ಸುಂದರಗೊಳಿಸಲು ಲಕ್ಷಾಂತರ ರು. ವೆಚ್ಚ ಮಾಡಲಾಗಿದೆ.
ಪ್ರಮುಖವಾಗಿ ಕುಮಾರಕೃಪ ರಸ್ತೆಯಲ್ಲಿರುವ ‘ಕಾವೇರಿ’ ನಿವಾಸ ದುರಸ್ತಿಗೆ 2021-21ನೇ ಸಾಲಿನಲ್ಲಿ 49.80 ಲಕ್ಷ ರು. ವೆಚ್ಚ ಮಾಡಲಾಗಿದೆ. ಅದೇ ರೀತಿ ಸ್ಯಾಂಕಿ ರಸ್ತೆಯಲ್ಲಿರುವ ನಂ 31 ನಿವಾಸಕ್ಕೆ 2020-21ನೇ ಸಾಲಿನಲ್ಲಿ 49.89 ಲಕ್ಷ ವೆಚ್ಚ ಮಾಡಲಾಗಿದೆ. ರೇಸ್ ಕೋರ್ಸ್ ರಸ್ತೆಯಲ್ಲಿರುವ ರೇಸ್ ವ್ಯೂ ಕಾಟೇಜ್‌ನ ಮೂರು ನಿವಾಸಗಳಿಗೆ 2020-21ನೇ ಸಾಲಿನಲ್ಲಿ ಕ್ರಮವಾಗಿ 34.96 ಲಕ್ಷ ರು. 14.90 ಲಕ್ಷ ಹಾಗೂ 44.50 ಲಕ್ಷ ವೆಚ್ಚ ಮಾಡಲಾಗಿದೆ.
ಕಾಂಗ್ರೆಸ್ ಸದಸ್ಯ ಆರ್,ಬಿ. ತಿಮ್ಮಾಪುರ ಅವರ ಪ್ರಶ್ನೆಗೆ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ನೀಡಿರುವ ಲಿಖಿತ ಉತ್ತರದಲ್ಲಿ ಈ ವಿವರ ನೀಡಲಾಗಿದೆ. ಗಾಂಧಿ ಭವನ ಕುಮಾರಕೃಪಾ ರಸ್ತೆಯಲ್ಲಿರುವ ಮತ್ತೊಂದು ಸರ್ಕಾರಿ ನಿವಾಸಕ್ಕೆ (ಕೆಕೆ-2 ದಕ್ಷಿಣ) 2020-21ನೇ ಸಾಲಿನಲ್ಲಿ 41 ಲಕ್ಷ ರು. ವೆಚ್ಚ ಮಾಡಲಾಗಿದೆ. ಕಟ್ಟಡಕ್ಕೆ ಹೊಸ ಬಣ್ಣ, ಸೀಲಿಂಗ್‌ಗೆ ಹೊಸ ಬಣ್ಣ, ವಾರ್ಡ್‌ರೋಬ್ ಪೇಂಟಿಂಗ್, ಕಾಪೌಂಡ್ ಗೋಡೆ, ಸಿಬ್ಬಂದಿಗಳ ವಸತಿ ಗೃಹ, ಓಡಾಡಲು ಹೊಸ ಪಾದಚಾರಿ ಮಾರ್ಗ ನಿರ್ಮಿಸಲು ಇಷ್ಟೊಂದು ಪ್ರಮಾಣದಲ್ಲಿ ವೆಚ್ಚ ಮಾಡಲಾಗಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.
ಉಳಿದಂತೆ ಸ್ಯಾಂಕಿ ರಸ್ತೆಯ ನಂ 31 ನಿವಾಸಕ್ಕೆ 2019-20ನೇ ಸಾಲಿನಲ್ಲಿ 21.50 ಲಕ್ಷ ರು. 2020-21ನೇ ಸಾಲಿನಲ್ಲಿ ಕ್ರೆಸೆಂಟ್ ರಸ್ತೆಯಲ್ಲಿರುವ ಕೆಕೆ-1 ದಕ್ಷಿಣ ನಿವಾಸಕ್ಕೆ 16 ಲಕ್ಷ ರು. ಸಚಿವರ ವಸತಿ ಗೃಹಗಳು ಇರುವ ಕೆಕೆ ದಕ್ಷಿಣ (3) ನಿವಾಸಕ್ಕೆ 14.65 ಲಕ್ಷ ರು. ರೇಸ್ ಕೋರ್ಸ್ ರಸ್ತೆಯ ಕೆಎಚ್‌ಬಿ-4 ನಿವಾಸಕ್ಕೆ 14.98 ಲಕ್ಷ ರು., ಕ್ರೆಸೆಂಟ್ ರಸ್ತೆಯ ಕೆಎಚ್‌ಬಿ 3 ನಿವಾಸಕ್ಕೆ 23 ಲಕ್ಷ ರು., ರೇಸ್ ಕೋರ್ಸ್ ರಸ್ತೆಯಲ್ಲಿರುವ ರೇಸ್ ವ್ಯೂ ಕಾಂಪೌಂಡ್‌ನಲ್ಲಿರುವ ನಿವಾಸಕ್ಕೆ 15.89 ಲಕ್ಷ ರು. ವೆಚ್ಚ ಮಾಡಿ ವಿವಿಧ ಬಗೆಯ ದುರಸ್ತಿ ಮಾಡಲಾಗಿದೆ.
ಯಾವ್ಯಾವುದಕ್ಕೆ ಹಣ ಬಳಕೆ?
ಮನೆಗೆ ಹೊಸ ಬಣ್ಣ, ಹೊಸ ಟೈಲ್ಸ್, ಶೌಚಾಲಯ ದುರಸ್ತಿ, ಅತ್ಯಾಧುನಿಕ ಮಾಡ್ಯುಲರ್ ಕಿಚನ್, ಮನೆಗಳ ಸೌಂದರ್ಯ ಹೆಚ್ಚಿಸುವುದು, ವಾರ್ಡ್‌ರೋಬ್ ಪೇಂಟಿಂಗ್, ಕಾಂಪೌಂಡ್ ನಿರ್ಮಾಣ, ಹೊಸ ಪಾದಚಾರಿ ಮಾರ್ಗ
