ಶ್ರೀನಗರ[ಮಾ.09]: ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ, ಹೊಸದೊಂದು ರಾಜಕೀಯ ಪಕ್ಷ ಸ್ಥಾಪನೆಯಾಗಿದೆ.

ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರ ಆಪ್ತ ಮತ್ತು ಹಣಕಾಸು ಸಚಿವರಾಗಿಯೂ ಸೇವೆ ಸಲ್ಲಿಸಿದ್ದ ಅಲ್ತಾಫ್‌ ಬುಖಾರಿ, ‘ಜಮ್ಮು ಕಾಶ್ಮೀರ್‌ ಅಪ್ನಿ ಪಾರ್ಟಿ’ ಎಂಬ ಹೊಸ ಪ್ರಾದೇಶಿಕ ಪಕ್ಷ ಸ್ಥಾಪನೆ ಕುರಿತು ಭಾನುವಾರ ಘೋಷಣೆ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ಮರಳಿಸುವುದು, ಸ್ಥಳೀಯರಿಗೆ ಭೂಮಿ ಮತ್ತು ಉದ್ಯೋಗದಲ್ಲಿ ಈ ಹಿಂದೆ ಇದ್ದ ಹಕ್ಕನ್ನು ಮರಳಿ ಸ್ಥಾಪಿಸುವುದು ತಮ್ಮ ಪಕ್ಷದ ಮುಖ್ಯ ಗುರಿ ಎಂದು ಅಲ್ತಾಫ್‌ ಘೋಷಿಸಿದ್ದಾರೆ. ಪಕ್ಷದಲ್ಲಿ ಪಿಡಿಪಿ ಮತ್ತು ನ್ಯಾಷನಲ್‌ ಕಾನ್ಫರೆನ್ಸ್‌ ಸೇರಿದಂತೆ ಇತರೆ ಕೆಲ ಪಕ್ಷಗಳಿಗೆ ಸೇರಿದ 40ಕ್ಕೂ ಹೆಚ್ಚು ಮಾಜಿ ಶಾಸಕರು ಇದ್ದಾರೆ.