ತಿರುವನಂತಪುರಂ(ಜ.26): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟ ಚುರುಕಾಗಿರುವ ಕೇರಳದಲ್ಲಿ, ರಾಜ್ಯದ ಎಲ್ಲಾ ಮಸೀದಿಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ನಿರ್ಣಯ ಕೈಗೊಳ್ಳಲಾಗಿದೆ.

ಈ ಕುರಿತು ಕೇರಳ ವಕ್ಫ್ ಬೋರ್ಡ್ ಮಾಹಿತಿ ನೀಡಿದ್ದು, ಗಣರಾಜ್ಯೋತ್ಸವ ಅಂಗವಾಗಿ  ರಾಜ್ಯದ ಎಲ್ಲಾ ಮಸೀದಿಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವುದು ಕಡ್ಡಾಯ ಎಂದು ತಿಳಿಸಿದೆ.

ಗಣರಾಜ್ಯೋತ್ಸವ ದಿನದಂದು ಎಲ್ಲ ಮಸೀದಿಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಹಾಗೂ ಸಂವಿಧಾನದ ಪೂರ್ವ ಪೀಠಿಕೆಯ ಪಠಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು  ಕೇರಳ ವಕ್ಫ್ ಬೋರ್ಡ್ ಹೇಳಿದೆ.

ರಾಜ್ಯಪಾಲರ ವಿರುದ್ಧವೇ ಕೇರಳದಲ್ಲಿ ಗೊತ್ತುವಳಿ?

ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ NRC ವಿರೋಧಿ ಹೋರಾಟಗಾರರನ್ನು ದೇಶದ್ರೋಹಿಗಳೆಂದ ಬಿಂಬಿಸಲಾಗುತ್ತಿದೆ. ಆದರೆ ಸಿಎಎ ವಿರೋಧಿ ಹೋರಾಟಗಾರರು ದೇಶದ್ರೋಹಿಗಳಲ್ಲ ಎಂದು ಸಾರಲು ಈ ನಿರ್ಣಯ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ದೇಶ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಈ ಸಂದರ್ಭದಲ್ಲಿ ನಾವೆಲ್ಲರೂ ಒಂದು ಎಂಬ ಸಂದೇಶ ಸಾರಲು ತ್ರಿವರ್ಣ ಧ್ವಜ ಹಾರಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ವಕ್ಫ್ ಬೋರ್ಡ್ ಹೇಳಿದೆ.

ಇನ್ನು ಗಣರಾಜ್ಯೋತ್ಸವದ ಅಂಗವಾಗಿ ಕೇರಳದ ಎಡರಂಗ ಸರ್ಕಾರ  ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ರಾಜ್ಯದ 14 ಜಿಲ್ಲೆಗಳ ಪೈಕಿ 10 ಜಿಲ್ಲೆಗಳಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ ಏಕತೆಯ ಸಂದೇಶ ಸಾರಲು ಮುಂದಾಗಿದೆ.