ನವದೆಹಲಿ(ಫೆ.15): ಕೇಂದ್ರ ಸರ್ಕಾರದ ಎಲ್ಲಾ ಸಿಬ್ಬಂದಿಗಳು ಇನ್ನು ಮುಂದೆ ಎಲ್ಲಾ ಕರ್ತವ್ಯದ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಚೇರಿಗೆ ಹಾಜರಾಗಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಈ ಮೂಲಕ ಕೋವಿಡ್‌ ಲಾಕ್ಡೌನ್‌ ವೇಳೆ ಸೀಮಿತ ಸಂಖ್ಯೆಯಲ್ಲಿ ಹಾಜರಾತಿಗೆ ನೀಡಿದ್ದ ಅನುಮತಿಯನ್ನು ಹಿಂದಕ್ಕೆ ಪಡೆದಿದೆ. ಆದರೆ ಕಂಟೇನ್ಮೆಂಟ್‌ ಪ್ರದೇಶಗಳಲ್ಲಿ ಹಿಂದಿನಂತೆಯೇ ಸಿಬ್ಬಂದಿ ಹಾಜರಾತಿ ಮುಂದುವರೆಸಬಹುದು ಎಂದು ಸ್ಪಷ್ಟನೆ ನೀಡಿದೆ.

ಕಳೆದ ಮೇ ತಿಂಗಳ ಬಳಿಕ ಕೇಂದ್ರ ಸರ್ಕಾರ, ತನ್ನ ಕಚೇರಿಗಳಲ್ಲಿ ಶೇ.50ರಷ್ಟುಮಾತ್ರವೇ ಸಿಬ್ಬಂದಿ ಹಾಜರಾತಿಗೆ ಅವಕಾಶ ಕೊಟ್ಟಿತ್ತು. ಜೊತೆಗೆ ಸೋಂಕು ಪ್ರಸರಣ ತಡೆಯಲು ಬೇರೆ ಬೇರೆ ಸಮಯದಲ್ಲಿ ಕಾರ್ಯನಿರ್ವಹಣೆಗೆ ಅವಕಾಶ ಕಲ್ಪಿಸಿತ್ತು. ಆದರೆ ಇದೀಗ ಸೋಂಕಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ವಯೋಮಾನದ ಸಿಬ್ಬಂದಿ, ಯಾವುದೇ ವಿನಾಯಿತಿ ಇಲ್ಲದೆ ಪೂರ್ಣ ಪ್ರಮಾಣದಲ್ಲಿ ಕಚೇರಿಗೆ ಹಾಜರಾಗಬೇಕು ಎಂದು ಸೂಚಿಸಿದೆ.

ಜೊತೆಗೆ ಸಭೆಗಳನ್ನು ಆದಷ್ಟುಆನ್‌ಲೈನ್‌ ಮೂಲಕವೇ ನಡೆಸಬೇಕು, ತೀರಾ ಅಗತ್ಯವಿಲ್ಲದ ಹೊರತಾಗಿ ಸಾರ್ವಜನಿಕರ ಜೊತೆಗೆ ಮುಖಾಮುಖಿ ಭೇಟಿ ತಡೆಯಬಹುದು, ಕಚೇರಿ ಕ್ಯಾಂಟಿನ್‌ ತೆರೆಯಬಹುದು ಎಂದು ತಿಳಿಸಿದೆ.