ಮುಂಬೈ[ಫೆ.19]: ‘26/11’ ಎಂದೇ ಜನಮಾನಸದಲ್ಲಿ ಬೇರೂರಿರುವ 2008ರ ಮುಂಬೈ ಮೇಲಿನ ದಾಳಿಯನ್ನು ಬೆಂಗಳೂರಿನ ನಿವಾಸಿಯೊಬ್ಬ ನಡೆಸಿದ ಹಿಂದು ಭಯೋತ್ಪಾದನೆ ಎಂದು ಬಿಂಬಿಸಲು ಪಾಕಿಸ್ತಾನ ಮೂಲದ ಕುಖ್ಯಾತ ಉಗ್ರಗಾಮಿ ಸಂಘಟನೆ ಲಷ್ಕರ್‌ ಎ ತೊಯ್ಬಾ ಪ್ರಯತ್ನಿಸಿತ್ತು ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.

"

166 ಮಂದಿಯನ್ನು ಬಲಿ ಪಡೆದ ಈ ದಾಳಿ ಹಿಂದು ಉಗ್ರರು ನಡೆಸಿದ ಕೃತ್ಯ ಎಂದು ಕತೆ ಕಟ್ಟುವ ಉದ್ದೇಶವನ್ನು ಲಷ್ಕರ್‌ ಹೊಂದಿತ್ತು. ಇದೇ ಕಾರಣಕ್ಕೆ ಬಂದೂಕು ಹಿಡಿದು ಮನಸೋಇಚ್ಛೆ ದಾಳಿ ನಡೆಸಿದ, ಬಳಿಕ ಪೊಲೀಸರ ಕೈಗೆ ಸಿಕ್ಕಿ ಗಲ್ಲು ಶಿಕ್ಷೆಗೆ ಒಳಗಾದ ಅಮೀರ್‌ ಅಜ್ಮಲ್‌ ಕಸಬ್‌ಗೆ ಹಿಂದುಗಳ ರೀತಿ ಬಲಗೈಗೆ ಕೆಂಪು ದಾರ ಕಟ್ಟಿಕಳುಹಿಸಿತ್ತು ಎಂಬ ಸಂಗತಿಯನ್ನು 26/11 ಪ್ರಕರಣದ ತನಿಖೆ ನಡೆಸಿದ್ದ ಮುಂಬೈ ಪೊಲೀಸ್‌ ನಿವೃತ್ತ ಆಯುಕ್ತ ರಾಕೇಶ್‌ ಮಾರಿಯಾ ಅವರು ಬಹಿರಂಗಪಡಿಸಿದ್ದಾರೆ.

‘ಲೆಟ್‌ ಮಿ ಸೇ ಇಟ್‌ ನೌ’ ಎಂಬ ಆತ್ಮಕಥನ ಬರೆದಿರುವ ಮಾರಿಯಾ ಅವರು ಅದರಲ್ಲಿ ಮುಂಬೈ ದಾಳಿಗೆ ಸಂಬಂಧಿಸಿದ ಹಲವು ಕುತೂಹಲಕಾರಿ ಸಂಗತಿಗಳನ್ನು ಹೊರೆಗೆಡವಿದ್ದಾರೆ.

ದಾಳಿಕೋರ ಅಮೀರ್‌ ಅಜ್ಮಲ್‌ ಕಸಬ್‌ನನ್ನು ಬೆಂಗಳೂರಿನ ಸಮೀರ್‌ ದಿನೇಶ್‌ ಚೌಧರಿ ಎಂದು ಬಿಂಬಿಸುವುದು, ಇಡೀ ಮುಂಬೈ ದಾಳಿ ಹಿಂದು ಭಯೋತ್ಪಾದನೆ ಪ್ರಕರಣ ಎಂದು ಕತೆ ಕಟ್ಟುವುದು ಪಾಕಿಸ್ತಾನದ ಲಷ್ಕರ್‌ ಎ ತೊಯ್ಬಾ ಉದ್ದೇಶವಾಗಿತ್ತು. ಇದೇ ಕಾರಣಕ್ಕಾಗಿ ಭಯೋತ್ಪಾದಕರ ಬಳಿ ಭಾರತೀಯ ವಿಳಾಸ ಹೊಂದಿರುವ ನಕಲಿ ಗುರುತಿನ ಚೀಟಿಗಳನ್ನು ಲಷ್ಕರ್‌ ಸಂಘಟನೆ ಇಟ್ಟಿತ್ತು. ಈ ಯೋಜನೆ ಸಾಕಾರಗೊಂಡಿದ್ದರೆ, ಕಸಬ್‌ ಬೆಂಗಳೂರಿನ ಸಮೀರ್‌ ದಿನೇಶ್‌ ಚೌಧರಿಯಾಗಿ ಮರಣ ಹೊಂದುತ್ತಿದ್ದ. ಮಾಧ್ಯಮಗಳು ಮುಂಬೈ ದಾಳಿಗೆ ಹಿಂದು ಭಯೋತ್ಪಾದನೆಯೇ ಕಾರಣ ಎಂದು ದೂಷಿಸುತ್ತಿದ್ದವು. ದೊಡ್ಡ ದೊಡ್ಡ ಟೀವಿ ಪತ್ರಕರ್ತರು ಬೆಂಗಳೂರಿಗೆ ದೌಡಾಯಿಸಿ ಆತನ ಕುಟುಂಬ ಹಾಗೂ ನೆರೆಹೊರೆಯವರ ಸಂದರ್ಶನ ಪಡೆಯಲು ಯತ್ನಿಸುತ್ತಿದ್ದರು. ಆದರೆ ಕಸಬ್‌ ಸಿಕ್ಕಿಬಿದ್ದಿದ್ದರಿಂದ ಅದೆಲ್ಲಾ ಆಗಲಿಲ್ಲ. ಅಜ್ಮಲ್‌ ಕಸಬ್‌ ಪಾಕಿಸ್ತಾನದ ಫರೀದ್‌ಕೋಟ್‌ನವನು ಎಂಬ ಸಂಗತಿ ಗೊತ್ತಾಯಿತು ಎಂದು ವಿವರಿಸಿದ್ದಾರೆ.

ಕಸಬ್‌ ಹತ್ಯೆಗೆ ದಾವೂದ್‌ಗೆ ಸುಪಾರಿ:

ಮುಂಬೈ ದಾಳಿಗೆ ಸಂಬಂಧಿಸಿದಂತೆ ಕಸಬ್‌ ಏಕೈಕ ಜೀವಂತ ಸಾಕ್ಷಿಯಾಗಿದ್ದ. ಆತನನ್ನು ಮುಗಿಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಹಾಗೂ ಲಷ್ಕರ್‌ ಉಗ್ರರು ತೀವ್ರ ಪ್ರಯತ್ನ ನಡೆಸಿದ್ದರು. ಕಸಬ್‌ ಕೊಲ್ಲುವ ಹೊಣೆಗಾರಿಕೆಯನ್ನು ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಗ್ಯಾಂಗ್‌ಗೆ ವಹಿಸಲಾಗಿತ್ತು ಎಂದಿದ್ದಾರೆ.

ಭಾರತದಲ್ಲಿ ನಮಾಜ್‌ ಇಲ್ಲ ಎಂದು ಭಾವಿಸಿದ್ದ:

ಆರಂಭದಲ್ಲಿ ಕಸಬ್‌ಗೂ ಜಿಹಾದ್‌ಗೂ ಸಂಬಂಧವಿರಲಿಲ್ಲ. ಕಳ್ಳತನ ಮಾಡುವ ಉದ್ದೇಶದಿಂದ ಶಸ್ತ್ರಾಸ್ತ್ರ ಗಳಿಸಲು ಹಾಗೂ ತರಬೇತಿ ಪಡೆಯಲು ಲಷ್ಕರ್‌ ಎ ತೊಯ್ಬಾ ಸಂಘಟನೆಯನ್ನು ಆತ ಸೇರಿಕೊಂಡಿದ್ದ. ಭಾರತದಲ್ಲಿ ಮುಸ್ಲಿಮರಿಗೆ ನಮಾಜ್‌ ಮಾಡಲು ಅವಕಾಶ ನೀಡುವುದಿಲ್ಲ, ಅಧಿಕಾರಿಗಳು ಮಸೀದಿಗಳಿಗೆ ಬೀಗ ಜಡಿದಿದ್ದಾರೆ ಎಂದು ಬಹುವಾಗಿ ಕಸಬ್‌ ನಂಬಿಕೊಂಡಿದ್ದ. ತನ್ನ ಲಾಕಪ್‌ನಲ್ಲಿ ದಿನಕ್ಕೆ ಐದು ಬಾರಿ ಆಜಾನ್‌ ಕೇಳಿಸುವುದು ಬರೀ ಕಲ್ಪನೆ ಎಂದು ಭಾವಿಸಿದ್ದ. ಈ ವಿಷಯ ಗೊತ್ತಾಗುತ್ತಿದ್ದಂತೆ, ಆತನನ್ನು ಮೆಟ್ರೋ ಸಿನಿಮಾ ಬಳಿ ಇರುವ ಮಸೀದಿ ಸನಿಹಕ್ಕೆ ಕರೆದೊಯ್ದಿದ್ದೆವು. ನಮಾಜ್‌ ನಡೆಯುತ್ತಿರುವುದನ್ನು ನೋಡಿ ಆತ ಚಕಿತಗೊಂಡಿದ್ದ ಎಂದು ವಿವರಿಸಿದ್ದಾರೆ.

26/11ಗೆ 1.25 ಲಕ್ಷ ರೂ. ಪಡೆದಿದ್ದ:

ಮುಂಬೈ ದಾಳಿಗೂ ಮುನ್ನ ಕಸಬ್‌ಗೆ 1.25 ಲಕ್ಷ ನೀಡಿದ್ದ ಲಷ್ಕರ್‌ ಸಂಘಟನೆ, ಒಂದು ವಾರ ರಜೆ ನೀಡಿ ಕಳುಹಿಸಿತ್ತು. ಆ ಹಣವನ್ನು ಆತ ತನ್ನ ತಂಗಿಯ ವಿವಾಹಕ್ಕೆ ಕೊಟ್ಟಿದ್ದ ಎಂದು ಪುಸ್ತಕದಲ್ಲಿ ಮಾರಿಯಾ ಬರೆದುಕೊಂಡಿದ್ದಾರೆ.

2008ರ ನ.26ರಂದು ಮುಂಬೈ ಮೇಲೆ 10 ಬಂದೂಕುದಾರಿ ಉಗ್ರರು ದಾಳಿ ನಡೆಸಿದ್ದರು. ದೇಶ ಕಂಡ ಅತ್ಯಂತ ಘೋರವಾದ ಈ ಭಯೋತ್ಪಾದಕ ದಾಳಿಯಲ್ಲಿ 166 ಮಂದಿ ಹತರಾಗಿದ್ದರು. ಕಸಬ್‌ನನ್ನು ತುಕಾರಾಮ್‌ ಓಂಬ್ಳೆ ಎಂಬ ಪೊಲೀಸ್‌ ಪೇದೆ ಸೆರೆ ಹಿಡಿದು ಹುತಾತ್ಮರಾಗಿದ್ದರು. 2012ರ ನ.21ರಂದು ಕಸಬ್‌ನನ್ನು ನೇಣಿಗೇರಿಸಲಾಗಿತ್ತು.

ಏನಿದು ಬೆಂಗಳೂರು ಲಿಂಕ್‌?

- 2008ರ ನ.26ರಂದು ಮುಂಬೈ ನಗರದ ಮೇಲೆ ದಾಳಿ ನಡೆಸಿದ್ದ ಪಾಕ್‌ನ ಲಷ್ಕರ್‌ ಉಗ್ರರು

- ಕಾರಾರ‍ಯಚರಣೆ ವೇಳೆ ಕಸಬ್‌ ಎಂಬಾತ ಸಜೀವವಾಗಿ ಸೆರೆ. ಆತನ ಬಳಿ ನಕಲಿ ಗುರುತಿನ ಚೀಟಿ

- ಗುರುತಿನ ಚೀಟಿಯಲ್ಲಿ ಸಮೀರ್‌ ದಿನೇಶ್‌ ಚೌಧರಿ ಎಂಬ ಹೆಸರು. ಬೆಂಗಳೂರಿನ ವಿಳಾಸ

- ಅಲ್ಲದೆ, ಬಲಗೈಗೆ ಕೆಂಪುದಾರ ಕಟ್ಟಿಕೊಂಡಿದ್ದ ಕಸಬ್‌. ಇವೆಲ್ಲವೂ ಲಷ್ಕರ್‌ ಮಾಸ್ಟರ್‌ಪ್ಲಾನ್‌

- ಕಸಬ್‌ ಸತ್ತರೆ ಆತ ಹಿಂದು ಉಗ್ರ, ದಾಳಿ ಹಿಂದು ಉಗ್ರವಾದ ಎಂದು ಬಿಂಬಿಸಲು ಸಂಚು