Asianet Suvarna News Asianet Suvarna News

ವಾಯುಮಾಲಿನ್ಯ: ಭಾರತೀಯರ ಜೀವಿತಾವಧಿ 5 ವರ್ಷ ಇಳಿಕೆ

* ವಾಯು ಗುಣಮಟ್ಟ ಜೀವಿತಾವಧಿ ಸೂಚ್ಯಂಕ ಬಿಡುಗಡೆ

* ವಾಯುಮಾಲಿನ್ಯ: ಭಾರತೀಯರ ಜೀವಿತಾವಧಿ 5 ವರ್ಷ ಇಳಿಕೆ

* ಹೆಚ್ಚು ಮಾಲಿನ್ಯದ ದಿಲ್ಲಿ ಜನರ ಜೀವಿತಾವಧಿ 10 ವರ್ಷ ಇಳಿಕೆ

 

Air pollution biggest health risk in India cuts 5 years in life expectancy Study pod
Author
Bangalore, First Published Jun 15, 2022, 9:28 AM IST

ನವದೆಹಲಿ(ಜೂ.14): ವಾಯುಮಾಲಿನ್ಯವು ಭಾರತೀಯರ ಪಾಲಿಗೆ ಅತ್ಯಂತ ಗಂಭೀರ ಅಪಾಯವಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ಮಾನದಂಡವನ್ನು ಪಾಲಿಸದೇ ಹೋದಲ್ಲಿ ಪ್ರತಿ ಭಾರತೀಯನ ಜೀವಿತಾವಧಿ 5 ವರ್ಷದಷ್ಟು ಇಳಿಕೆಯಾಗಲಿದೆ. ಅದರಲ್ಲೂ ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಮಾಲಿನ್ಯ ಹೊಂದಿರುವ ಮೆಟ್ರೋ ನಗರಿ ಎಂಬ ಕುಖ್ಯಾತಿ ಹೊಂದಿರುವ ನವದೆಹಲಿಯಲ್ಲಿ ಜನರ ಜೀವಿತಾವಧಿ 10 ವರ್ಷದಷ್ಟುಇಳಿಕೆಯಾಗಲಿದೆ ಎಂದು ಸಂಶೋಧನಾ ವರದಿಯೊಂದು ಗಂಭೀರ ಎಚ್ಚರಿಕೆ ನೀಡಿದೆ.

ಷಿಕಾಗೋ ವಿಶ್ವವಿದ್ಯಾಲಯದ ‘ಇಂಧನ ನೀತಿ ಸಂಸ್ಥೆ’ ಮಂಗಳವಾರ ಬಿಡುಗಡೆ ಮಾಡಿರುವ ‘ವಾಯುಗುಣಮಟ್ಟಜೀವಿತಾವಧಿ ಸೂಚ್ಯಂಕ’ದಲ್ಲಿ ಈ ಗಂಭೀರ ಎಚ್ಚರಿಕೆ ನೀಡಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ ಕಳೆದ ವರ್ಷ ಬಿಡುಗಡೆ ಮಾಡಿದ್ದ ಮಾರ್ಗಸೂಚಿಗಳ ಅನ್ವಯ, ನಾವು ಇರುವ ಪರಿಸರದಲ್ಲಿ ಪ್ರತಿ ಕ್ಯುಬಿಕ್‌ ಮೀಟರ್‌ ಪ್ರದೇಶದಲ್ಲಿ ಮಾಲಿನ್ಯಕ್ಕೆ ಕಾರಣವಾಗುವ ಪಿಎಂ 2.5 ಸೂಕ್ಷ್ಮಾಣು ಕಣಗಳ ಪ್ರಮಾಣ 5 ಮೈಕ್ರೋಗ್ರಾಂಗಿಂತ ಹೆಚ್ಚಿಗೆ ಇರಬಾರದು. ಆದರೆ ಭಾರತದಲ್ಲಿ ಈ ಪ್ರಮಾಣ 56 ಮೈಕ್ರೋಗ್ರಾಂನಷ್ಟಿದೆ. ಅಂದರೆ ನಿಗದಿತ ಮಾನದಂಡಕ್ಕಿಂತ 11 ಪಟ್ಟು ಹೆಚ್ಚು. ಇನ್ನು ದಿಲ್ಲಿಯಲ್ಲಿ ಈ ಪ್ರಮಾಣ 107 ಮೈಕ್ರೋಗಾಂನಷ್ಟಿದೆ. ಅಂದರೆ ನಿಗದಿತ ಮಾನದಂಡಕ್ಕಿಂತ 21 ಪಟ್ಟು ಹೆಚ್ಚು.

130 ಕೋಟಿ ಜನ ಅಪಾಯದಲ್ಲಿ:

ಭಾರತದ ಎಲ್ಲಾ 130 ಕೋಟಿ ಜನರೂ ವಿಶ್ವ ಆರೋಗ್ಯ ಸಂಸ್ಥೆ ನಿಗದಿ ಪಡಿಸಿರುವ ಮಾಲಿನ್ಯ ಪ್ರಮಾಣಕ್ಕಿಂತ ಹೆಚ್ಚಿನ ಮಾಲಿನ್ಯ ಇರುವ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಇನ್ನು ಶೇ.63ರಷ್ಟುಜನರು ಸ್ವತಃ ಭಾರತ ಸರ್ಕಾರವೇ ನಿಗದಿ ಮಾಡಿರುವ 40 ಮೈಕ್ರೋಗ್ರಾಂಗಿಂತ ಹೆಚ್ಚಿನ ಪಿಎಂ2.5 ಇರುವ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ವಾಯುಮಾಲಿನ್ಯಕ್ಕೆ ಸಂಬಂಧಿಸಿದಂತೆ ಮಾನದಂಡವನ್ನು ಪಾಲನೆ ಮಾಡಿದರೆ ಉತ್ತರಪ್ರದೇಶದ ಜನರ ಜೀವಿತಾವಧಿ 8.2 ವರ್ಷ, ಬಿಹಾರದ ಜನರ ಜೀವಿತಾವಧಿ 7.9 ವರ್ಷ, ಪಶ್ಚಿಮ ಬಂಗಾಳದ ಜನರ ಜೀವಿತಾವಧಿ 5.9 ವರ್ಷ ಮತ್ತು ರಾಜಸ್ಥಾನದ ಜನರ ಜೀವಿತಾವಧಿ 4.8 ವರ್ಷ ಹೆಚ್ಚಿಸಬಹುದು ಎಂದು ವರದಿ ಹೇಳಿದೆ.

ಡೇಂಜರ್‌ ಭಾರತ:

2013ರ ನಂತರದಲ್ಲಿ ವಿಶ್ವದಲ್ಲಿ ದಾಖಲಾದ ಮಾಲಿನ್ಯದಲ್ಲಿ ಶೇ.44ರಷ್ಟುಭಾರತದಿಂದಲೇ ಬಂದಿದೆ. 1998ರ ಬಳಿಕ ಭಾರತದಲ್ಲಿ ವಾರ್ಷಿಕ ಸರಾಸರಿ ಮಾಲಿನ್ಯದ ಪ್ರಮಾಣದಲ್ಲಿ ಶೇ.61.4ರಷ್ಟುಏರಿಕೆ ದಾಖಲಾಗುತ್ತಿದೆ. ಈ ಮೂಲಕ ಜನರ ಜೀವಿತಾವಧಿಯಲ್ಲಿ 2.1 ವರ್ಷದಷ್ಟುಇಳಿಕೆಗೆ ಕಾರಣವಾಗಿದೆ ಎಂದು ವರದಿ ಹೇಳಿದೆ.

ಜಾಗತಿಕ ಮಟ್ಟದಲ್ಲಿ 2.2 ವರ್ಷ ಇಳಿಕೆ

ಜಾಗತಿಕ ಮಟ್ಟದಲ್ಲಿ ಜನರ ಸರಾಸರಿ ಜೀವಿತಾವಧಿಯಲ್ಲಿ 2.2 ವರ್ಷ ಇಳಿಕೆಯಾಗಲಿದೆ. ವಿಶ್ವದ ಎಲ್ಲಾ ದೇಶಗಳಿಗೆ ಹೋಲಿಸಿದರೆ ವಾಯುಮಾಲಿನ್ಯದಿಂದ ಹೆಚ್ಚಿಗೆ ತೊಂದರೆಗೆ ಒಳಗಾಗುವ ದೇಶಗಳಲ್ಲಿ ಭಾರತ ಅತ್ಯಂತ ಮುಂಚೂಣಿಯಲ್ಲಿದೆ. ವಿಶ್ವದ 740 ಕೋಟಿ ಜನರು ಅಂದರೆ ಒಟ್ಟು ಜನಸಂಖ್ಯೆಯ ಶೇ.97.3ರಷ್ಟುಜನರು ವಿಶ್ವ ಆರೋಗ್ಯಸಂಸ್ಥೆ ನಿಗದಿಪಡಿಸಿರುವ ಮಾನದಂಡಕ್ಕಿಂತ ಹೆಚ್ಚಿನ ಮಾಲಿನ್ಯ ಇರುವ ಪ್ರದೇಶಗಳಲ್ಲಿ ವಾಸ ಮಾಡುತ್ತಿದ್ದಾರೆ. ಜೀವಿತಾವಧಿ ನಷ್ಟದಲ್ಲಿ ದಕ್ಷಿಣ ಏಷ್ಯಾ ದೇಶಗಳೇ ಹೆಚ್ಚಿನ ತೊಂದರೆಗೊಳಗಾಗಲಿವೆ. ಜಾಗತಿಕ ಜನಸಂಖ್ಯೆಯಲ್ಲಿ ಶೇ.25ರಷ್ಟುಪಾಲು ಹೊಂದಿರುವ ಭಾರತ, ಪಾಕಿಸ್ತಾನ, ಬಾಂಗ್ಲಾ, ನೇಪಾಳ ಅತಿಹೆಚ್ಚು ಮಾಲಿನ್ಯ ಉಂಟುಮಾಡುವ ಟಾಪ್‌ 5 ದೇಶಗಳಾಗಿವೆ.ವಿಶ್ವ ಆರೋಗ್ಯ ಸಂಸ್ಥೆ ಮಾನದಂಡಗಳನ್ನು ಕಡ್ಡಾಯವಾಗಿ ಪಾಲನೆ ಮಾಡಿದರೆ ಈ ದೇಶಗಳಲ್ಲಿ ಜನರ ಜೀವಿತಾವಧಿ 5 ವರ್ಷ ಹೆಚ್ಚಾಗಲಿದೆ ಎಂದು ವರದಿ ಹೇಳಿದೆ.

50 ಕೋಟಿ ಉತ್ತರ ಭಾರತೀಯರ ಜೀವಿತಾವಧಿ 7.6 ವರ್ಷ ಇಳಿಕೆ

ದೇಶದಲ್ಲಿ ಅತ್ಯಂತ ಹೆಚ್ಚು ವಾಯುಮಾಲಿನ್ಯ ಹೊಂದಿರುವ ಉತ್ತರ ಭಾರತದ ರಾಜ್ಯಗಳಲ್ಲಿನ 50 ಕೋಟಿ ಜನರು, ಮಾಲಿನ್ಯದ ಪರಿಣಾಮ ತಮ್ಮ 7.6 ವರ್ಷ ಜೀವಿತಾವಧಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ವರದಿ ಹೇಳಿದೆ. ಭಾರತದ ಒಟ್ಟು ಜನಸಂಖ್ಯೆಯ ಪೈಕಿ ಶೆ.40ರಷ್ಟುಜನರು ಅಂದರೆ 51 ಕೋಟಿ ಜನರು ಸಿಂಧೂ-ಗಂಗಾ ನದಿಯ ತಟದಲ್ಲಿ ವಾಸಿಸುತ್ತಿದ್ದಾರೆ. ಈ ರಾಜ್ಯಗಳಲ್ಲಿ ಈಗಿನ ವಾಯುಮಾಲಿನ್ಯ ಪರಿಸ್ಥಿತಿಯೇ ಮುಂದುವರೆದರೆ ಈ 51 ಕೋಟಿ ಜನರು ತಮ್ಮ ಜೀವಿತಾವಧಿಯಲ್ಲಿ 7.6 ವರ್ಷಗಳನ್ನು ಕಳೆದುಕೊಳ್ಳಲಿದ್ದಾರೆ.

==

ಕರ್ನಾಟಕದ ಜನತೆ ಜೀವಿತಾವಧಿ 2.2 ವರ್ಷ ಇಳಿಕೆ

ಕರ್ನಾಟಕದಲ್ಲಿ ಸರಾಸರಿ ವಾಯುಮಾಲಿನ್ಯ ಪ್ರಮಾಣ 27.4ರಷ್ಟಿದೆ. ಇದು ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ಮಾನದಂಡಕ್ಕಿಂತ 5 ಪಟ್ಟು ಹೆಚ್ಚು. ಪರಿಣಾಮ ಸ್ಥಳೀಯ ಜನರ ಜೀವಿತಾವಧಿಯಲ್ಲಿ 2.2 ವರ್ಷದಷ್ಟುಇಳಿಕೆಯಾಗುತ್ತಿದೆ. ಜಾಗತಿಕ ಮಾನದಂಡ ಪಾಲಿಸಿದರೆ ಜನರ ಜೀವಿತಾವಧಿ 2.2 ವರ್ಷದಷ್ಟುಹೆಚ್ಚಿಸಬಹುದು ಎಂದು ವರದಿ ಹೇಳಿದೆ.

Close

Follow Us:
Download App:
  • android
  • ios