ಚೆನ್ನೈ/ಕೋಲ್ಕ​ತಾ(ಫೆ.27): ಪಂಚ ರಾಜ್ಯ​ಗಳ ವಿಧಾ​ನ​ಸಭೆ ಚುನಾ​ವ​ಣೆ ಘೋಷ​ಣೆಗೆ ಕೆಲವೇ ತಾಸು ಮುನ್ನ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಮತದಾರರಿಗೆ ಭರ್ಜರಿ ಕೊಡುಗೆಗಳನ್ನು ಆಯಾ ರಾಜ್ಯ ಸರ್ಕಾರಗಳು ಪ್ರಕಟಿಸಿವೆ. ತಮಿಳುನಾಡಿನಲ್ಲಿ ಚಿನ್ನದ ಸಾಲ ಮನ್ನಾ ಮಾಡಿದ್ದರೆ, ಬಂಗಾಳದಲ್ಲಿ ಕಾರ್ಮಿಕರ ಕನಿಷ್ಠ ಕೂಲಿ ಹೆಚ್ಚಿಸಲಾಗಿದೆ.

"

ತಮಿಳುನಾಡಿನಲ್ಲಿ ಚುನಾವಣಾ ಕೊಡುಗೆಯಲ್ಲಿ ಹೊಸ ‘ರಾಜಕೀಯ ಅನ್ವೇಷಣೆ’ ಮಾಡಲಾಗಿದೆ. ಇಷ್ಟುಕಾಲ ಕೃಷಿಗೆ ಸೀಮಿತವಾಗಿದ್ದ ಸಾಲ ಮನ್ನಾವನ್ನು ಇದೀಗ ಚಿನ್ನದ ಸಾಲಕ್ಕೂ ವಿಸ್ತರಿಸಲಾಗಿದೆ. ತಮಿಳುನಾಡಿನಲ್ಲಿ ಸ​ಹ​ಕಾರಿ ಬ್ಯಾಂಕ್‌​ಗ​ಳಲ್ಲಿ ಚಿನ್ನ​ವನ್ನು ಅಡ​ವಿಟ್ಟು ರೈತರು ಮತ್ತು ಬಡ​ವರು ಮಾಡಿದ್ದ ಸಾಲ​ವನ್ನು ಮನ್ನಾ ಮಾಡು​ವು​ದಾಗಿ ಮುಖ್ಯ​ಮಂತ್ರಿ ಎಡಪ್ಪಾಡಿ ಪಳ​ನಿ​ಸ್ವಾಮಿ ಘೋಷಿ​ಸಿ​ದ್ದಾರೆ. 6 ಸವರನ್‌(48 ಗ್ರಾಂ) ವರೆಗೆ ಚಿನ್ನ ಅಡವಿಟ್ಟು ಸಾಲ ಪಡೆದಿದ್ದರೆ ಅದು ಮನ್ನಾ ಆಗಿ, ಅಡವಿಟ್ಟವರಿಗೆ ಚಿನ್ನ ಮರಳಿ ಸಿಗಲಿದೆ. ಜೊತೆಗೆ, ಸಹಕಾರ ಬ್ಯಾಂಕ್‌ಗಳ ಮೂಲಕ ಸ್ವಸಹಾಯ ಸಂಘಗಳು ಪಡೆದ ಸಾಲ ಕೂಡ ಮನ್ನಾ ಆಗಲಿದೆ.

ಇದರೊಂದಿಗೆ ತಮಿಳುನಾಡಿನಲ್ಲಿ ರಾಜಕೀಯ ಪಕ್ಷಗಳು ಮಿಕ್ಸಿ, ಮೊಬೈಲ್‌, ಸ್ಕೂಟರ್‌, ಟೀವಿ, ಅಮ್ಮ ಕ್ಯಾಂಟೀನ್‌, ಅಮ್ಮ ಬೇಬಿ ಕೇರ್‌, ಅಮ್ಮ ವಾಟರ್‌, ಅಮ್ಮ ಲ್ಯಾಪ್‌ಟಾಪ್‌ ಮುಂತಾಗಿ ಪ್ರಕಟಿಸುತ್ತಿದ್ದ ಉಚಿತ ಕೊಡುಗೆಗಳ ಪಟ್ಟಿಗೆ ಹೊಸದೊಂದು ಸೇರ್ಪಡೆಯಾಗಿದೆ.

ಪ.ಬಂಗಾಳದಲ್ಲೂ ಕೊಡುಗೆ:

ಪಶ್ಚಿಮ ಬಂಗಾಳದಲ್ಲಿ ಚುನಾ​ವಣೆ ನೀತಿ ಸಂಹಿತೆ ಜಾರಿಗೆ ಬರುವ ಮುಂಚಿ​ತ​ವಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದಿನ​ಗೂಲಿ ಕಾರ್ಮಿ​ಕರ ಕನಿಷ್ಠ ವೇತನ ಏರಿಕೆ ಸೇರಿ​ದಂತೆ ಹಲವು ಹೊಸ ಯೋಜ​ನೆ​ಗ​ಳನ್ನು ಘೋಷಣೆ ಮಾಡಿ​ದ್ದಾರೆ. ತನ್ಮೂ​ಲಕ ಪಶ್ಚಿಮ ಬಂಗಾ​ಳ​ದಲ್ಲಿ ಅಧಿ​ಕಾ​ರದ ಗದ್ದು​ಗೆ​ಗೇ​ರಲು ಯತ್ನಿ​ಸು​ತ್ತಿ​ರುವ ಬಿಜೆ​ಪಿಯನ್ನು ಕಟ್ಟಿ​ಹಾ​ಕಲು ಮಮತಾ ಯೋಜನೆ ರೂಪಿ​ಸಿ​ದ್ದಾರೆ.