ನವದೆಹಲಿ (ಫೆ.06): ವೈದ್ಯರು, ನರ್ಸ್‌ಗಳು ಹಾಗೂ ಕೊರೋನಾ ವಿರುದ್ಧದ ಮುಂಚೂಣಿ ಕಾರ್ಯಕರ್ತರಿಗೆ ನೀಡಲಾಗುತ್ತಿರುವ ಲಸಿಕೆ ಭಾಗ್ಯವು ಮಾಚ್‌ರ್‍ನಿಂದಲೇ 50 ವರ್ಷ ಮೇಲ್ಪಟ್ಟಹಿರಿಯ ನಾಗರಿಕರು ಸೇರಿದಂತೆ ಇನ್ನಿತರರಿಗೆ ಲಭ್ಯವಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಶುಕ್ರವಾರ ಲೋಕಸಭೆ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಈ ಕುರಿತಾಗಿ ಕೇಳಲಾದ ಪ್ರಶ್ನೆಗೆ ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್‌ ಅವರು, ‘ಮಾರ್ಚಲ್ಲಿ 3ನೇ ಹಂತದ ಲಸಿಕೆ ಅಭಿಯಾನ ಶುರುವಾಗುವ ಸಾಧ್ಯತೆಯಿದೆ. ಈ ಹಂತದಲ್ಲಿ ಹಿರಿಯ ನಾಗರಿಕರು ಹಾಗೂ ಇತರೆ ಕಾಯಿಲೆಗಳನ್ನು ಒಳಗೊಂಡ ಒಟ್ಟು 27 ಕೋಟಿ ಜನಕ್ಕೆ ಲಸಿಕೆ ನೀಡಲಾಗುತ್ತದೆ. ಆದರೆ 3ನೇ ಹಂತದ ಲಸಿಕೆ ಅಭಿಯಾನ ಯಾವಾಗ ಆರಂಭವಾಗಲಿದೆ ಎಂಬ ಖಚಿತ ದಿನ ಹೇಳಲಾಗದು’ ಎಂದರು.

ಕೊರೋನಾ ನಿಯಂತ್ರಣಕ್ಕೆ ಭಾರತದ ಸಿಂಪಲ್ ಟೆಕ್ನಿಕ್ಸ್: ಭೇಷ್ ಎಂದ WHO

‘ದೇಶಾದ್ಯಂತ ಈಗಾಗಲೇ ಕೊರೋನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಸುಮಾರು 50 ಲಕ್ಷ ಮಂದಿಗೆ ಕೊರೋನಾ ಲಸಿಕೆ ನೀಡಲಾಗಿದೆ. ಕೊರೋನಾ ವಿರುದ್ಧದ ಮುಂಚೂಣಿ ಕಾರ್ಯಕರ್ತರಿಗೆ ಇದೇ ವಾರದಲ್ಲಿ ಲಸಿಕೆ ಅಭಿಯಾನ ಆರಂಭವಾಗಿದೆ’ ಎಂದರು.

ಜನವರಿ 16ರಂದು ದೇಶಾದ್ಯಂತ ಕೊರೋನಾ ಲಸಿಕೆ ಅಭಿಯಾನ ಆರಂಭವಾಗಿತ್ತು.