ಕಾರೈಕಲ್‌/ಪುದುಚೇರಿ(ಅ.25): ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಗೆದ್ದರೆ ಕೊರೋನಾ ಲಸಿಕೆಯನ್ನು ಉಚಿತವಾಗಿ ವಿತರಿಸುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್‌ ಆಡಳಿತದ ಪುದುಚೇರಿ ಸಹ ಇಂಥದ್ದೇ ಘೋಷಣೆ ಮಾಡಿದೆ.

‘ಕೇಂದ್ರ ಸರ್ಕಾರ ಅನುದಾನ ನೀಡಲಿ ಅಥವಾ ನೀಡದಿರಲಿ ಪುದುಚೇರಿ ಕೇಂದ್ರಾಡಳಿತ ಪ್ರದೇಶದ ಪ್ರತಿಯೊಬ್ಬರಿಗೂ ಉಚಿತವಾಗಿ ಕೊರೋನಾ ಲಸಿಕೆ ವಿತರಿಸುತ್ತೇವೆ. ಇದು ನಮ್ಮ ವಾಗ್ದಾನ’ ಎಂದು ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ಶುಕ್ರವಾರ ಘೋಷಿಸಿದ್ದಾರೆ.

ಪುದುಚೇರಿಯಲ್ಲಿ ಈವರೆಗೆ 33,986 ಜನರಿಗೆ ಕೊರೋನಾ ದೃಢಪಟ್ಟಿದೆ. ತಮಿಳುನಾಡು, ಮಧ್ಯಪ್ರದೇಶ ಸರ್ಕಾರಗಳು ಕೊರೋನಾ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಈಗಾಗಲೇ ಘೋಷಿಸಿವೆ.