ನವದೆಹಲಿ[ಮಾ.18]: ಭಾರತೀಯ ಭೂಸೇನೆಯಲ್ಲಿ ಮಹಿಳೆಯರಿಗೂ ಅಧಿಕಾರಿ ಶ್ರೇಣಿಯ ಅಧಿಕಾರ ನೀಡಬೇಕು ಎಂದು ಆದೇಶಿಸಿದ್ದ ಸುಪ್ರೀಂ ಕೋರ್ಟ್‌, ಇದೀಗ ನೌಕಾಪಡೆಗಳಲ್ಲೂ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗ ಕಲ್ಪಿಸಲು ಅಸ್ತು ನೀಡಿದೆ.

ಅಲ್ಲದೆ, ಈ ಸಂಬಂಧ 3 ತಿಂಗಳ ಗಡುವಿನೊಳಗೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸರ್ವೋಚ್ಚ ನ್ಯಾಯಾಲಯ ಸೂಚನೆ ನೀಡಿದೆ. ಹೀಗಾಗಿ, ನೌಕಾಪಡೆಯಲ್ಲೂ ಇನ್ನು ಮುಂದಿನ ದಿನಗಳಲ್ಲಿ ಮಹಿಳೆಯರು ಪೂರ್ಣಾವಧಿ ಅಧಿಕಾರಗಳನ್ನು ವಹಿಸಿಕೊಳ್ಳುವ ಹಾದಿ ಸುಗಮವಾಗಿದೆ.

ಈ ಬಗ್ಗೆ ಮಂಗಳವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ನ್ಯಾ.ಡಿ.ವೈ. ಚಂದ್ರಚೂಡ್‌ ನೇತೃತ್ವದ ಪೀಠ, ಸೇನಾ ಪಡೆಗಳಲ್ಲಿ ಲಿಂಗ ತಾರತಮ್ಯ ತಡೆ ನಿಟ್ಟಿನಲ್ಲಿ ನೂರೊಂದು ನೆಪ ಹೇಳುವುದು ಸರಿಯಲ್ಲ. ಅಲ್ಲದೆ, ದೇಶಕ್ಕಾಗಿ ದುಡಿಯುವ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗ ರಚನೆ ಮಾಡದೇ ಇರುವುದು ನ್ಯಾಯಾಂಗದ ಅತಿದೊಡ್ಡ ವೈಫಲ್ಯವಾಗಲಿದೆ ಎಂದು ಹೇಳಿದೆ.

ರಷ್ಯಾ ಮೂಲದ ತಮ್ಮ ಹಡುಗುಗಳಲ್ಲಿ ಮಹಿಳೆಯರಿಗೆ ಶೌಚಾಲಯಗಳಿಲ್ಲ ಎಂಬ ಕಾರಣಕ್ಕೆ ಮಹಿಳಾ ಅಧಿಕಾರಿಗಳಿಗೆ ನೌಕಾಯಾನ ಕರ್ತವ್ಯಕ್ಕೆ ನಿಯೋಜನೆ ಮಾಡಿಕೊಳ್ಳಲಾಗದು ಎಂಬ ಕೇಂದ್ರದ ವಾದವನ್ನು ಸುಪ್ರೀಂ ತಿರಸ್ಕರಿಸಿತು.