ನವದೆಹಲಿ(ಏ.26): ಲಾಕ್‌ಡೌನ್‌ ಘೋಷಣೆಯಿಂದ ಕೊರೋನಾ ಸೋಂಕು ಹರಡುವ ಪ್ರಮಾಣ ದೇಶದಲ್ಲಿ ಕಡಿಮೆಯಾಗಿದ್ದರೂ, ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಶೇ.8ರಷ್ಟುಹೆಚ್ಚಾಗುತ್ತಿದೆ. ಇದೇ ವೇಗ ಮುಂದಿನ ದಿನಗಳಲ್ಲೂ ಮುಂದುವರಿದರೆ ಮೇ ಅಂತ್ಯದ ವೇಳೆಗೆ ಭಾರತದಲ್ಲಿ ಸೋಂಕಿತರ ಸಂಖ್ಯೆ 2.5 ಲಕ್ಷಕ್ಕೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗುತ್ತಿದೆ.

"

ಪ್ರಧಾನಿ ನರೇಂದ್ರ ಮೋದಿ ಅವರು ಮಾ.24ರಂದು ಲಾಕ್‌ಡೌನ್‌ ಘೋಷಣೆ ಮಾಡಿದಾಗ ದೇಶದಲ್ಲಿ 500 ಕೊರೋನಾ ಕೇಸ್‌ಗಳಿದವು. ಅಂದು ದಿನದಿಂದ ದಿನಕ್ಕೆ ಸೋಂಕು ಹೆಚ್ಚಳವಾಗುವ ವೇಗ ಶೇ.21.6ರಷ್ಟಿತ್ತು. ಆದರೆ ಈಗ ಅದು ಶೇ.8.1ಕ್ಕೆ ಇಳಿಕೆ ಕಂಡಿದೆ. ಒಂದು ವೇಳೆ, ಶೇ.21.6ರ ವೇಗದಲ್ಲೇ ಪ್ರಕರಣಗಳು ಹೆಚ್ಚಾಗಿದ್ದರೆ, ಇಷ್ಟೊತ್ತಿಗಾಗಲೇ ದೇಶದಲ್ಲಿ ಕೊರೋನಾಪೀಡಿತರ ಸಂಖ್ಯೆ 2 ಲಕ್ಷ ದಾಟುತ್ತಿತ್ತು ಎಂದು ವಿಶ್ಲೇಷಿಸಲಾಗಿದೆ.

ಬಿಹಾರ ಕಾರ್ಮಿಕನಿಂದ ಸಮುದಾಯಕ್ಕೆ ಸೋಂಕು?

ಈಗ ಸೋಂಕು ಹೆಚ್ಚಳ ಪ್ರಮಾಣ ಶೇ.8.1ಕ್ಕೆ ಇಳಿಕೆಯಾಗಿದ್ದರೂ, ಅದೇನು ಕಡಿಮೆ ಅಲ್ಲ. ಸದ್ಯ ವಿಶ್ವದ ಕೊರೋನಾ ಹಾಟ್‌ಸ್ಪಾಟ್‌ ದೇಶಗಳಾದ ಅಮೆರಿಕ (ಶೇ.4.8) ಹಾಗೂ ಜರ್ಮನಿ (ಶೇ.2)ಗೆ ಹೋಲಿಸಿದರೆ ಇದು ತೀರಾ ಅಧಿಕ. ಒಂದು ವೇಳೆ ಮುಂದಿನ ದಿನಗಳಲ್ಲೂ ಶೇ.8.1ರ ವೇಗದಲ್ಲೇ ದೇಶದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಾ ಹೋದರೆ ಮುಂದಿನ ವಾರದ ಅಂತ್ಯದ ವೇಳೆಗೆ ಸೋಂಕಿತರ ಸಂಖ್ಯೆ 40 ಸಾವಿರಕ್ಕೆ, 15 ದಿನಗಳಲ್ಲಿ 70 ಸಾವಿರಕ್ಕೆ, ಮೇ ಅಂತ್ಯದ ವೇಳೆಗೆ 2.5 ಲಕ್ಷಕ್ಕೆ ಹೆಚ್ಚಳವಾಗಲಿವೆ ಎಂದು ವರದಿಗಳು ತಿಳಿಸಿವೆ.

ದೇಶದಲ್ಲಿ ಶೇ.8.1ರ ವೇಗದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿದ್ದರೂ, ಕೇರಳದಲ್ಲಿ ಈ ಪ್ರಮಾಣ ಶೇ.1.8ರಷ್ಟಿದೆ. ಇದು ಜರ್ಮನಿಗಿಂತಲೂ ಕಡಿಮೆ.