ಬಂಗಾಳ: ಕಾಂಗ್ರೆಸ್‌ ನಿರ್ಧಾರಕ್ಕೆ ಕಾಂಗ್ರೆಸ್‌ ಆಕ್ಷೇಪ| ಕೋಮುವಾದಿ’ ಪಕ್ಷದ ಜತೆ ಮೈತ್ರಿಗೆ ಆನಂದ್‌ ಶರ್ಮಾ ಆಕ್ಷೇಪ| ಇದು ಬಿಜೆಪಿಯ ಮತ ಧ್ರುವೀಕರಣದ ತಂತ್ರ: ಅಧೀರ್‌ ಚೌಧರಿ

ಕೋಲ್ಕತಾ(ಫೆ.03): ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಎಡರಂಗ ಮೈತ್ರಿಕೂಟವು ಕೋಮುವಾದಿ ಪಕ್ಷ ಎಂದು ಹೇಳಲಾದ ಐಎಸ್‌ಎಫ್‌ (ಇಂಡಿಯನ್‌ ಸೆಕ್ಯುಲರ್‌ ಫ್ರಂಟ್‌) ಜತೆ ಮೈತ್ರಿ ಮಾಡಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ಇದು ಕಾಂಗ್ರೆಸ್‌ ಹಾಗೂ ಎಡರಂಗಗಳಲ್ಲಿ ತೀವ್ರ ಒಡಕು ಸೃಷ್ಟಿಸಿದೆ.

ಐಎಸ್‌ಎಫ್‌ ಮುಖಂಡ ಹಾಗೂ ಮುಸ್ಲಿಂ ಮೌಲ್ವಿ ಅಬ್ಬಾಸ್‌ ಸಿದ್ದಿಕಿ ಅವರ ಜತೆ ಮೈತ್ರಿ ಮಾಡಿಕೊಂಡಿದ್ದನ್ನು ಹಾಗೂ ಇತ್ತೀಚಿನ ಸಮಾವೇಶದಲ್ಲಿ ವೇದಿಕೆ ಹಂಚಿಕೊಂಡಿದ್ದನ್ನು ಕಾಂಗ್ರೆಸ್‌ ಮುಖಂಡ ಆನಂದ್‌ ಶರ್ಮಾ ಪ್ರಶ್ನಿಸಿದ್ದಾರೆ. ‘ಇದು ನೆಹರು ಹಾಕಿಕೊಟ್ಟಜಾತ್ಯತೀತ ಮೌಲ್ಯಗಳಿಗೆ ತಿಲಾಂಜಲಿ ಕೊಟ್ಟಂತೆ. ಕೋಮುವಾದಿಗಳ ಜತೆ ಮೈತ್ರಿ ಮಾಡಿಕೊಳ್ಳುವ ವಿಷಯದಲ್ಲಿ ಸಿಡಬ್ಲುಸಿಯನ್ನು ಕೇಳದೇ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಅಧೀರ್‌ ರಂಜನ್‌ ಚೌಧರಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದೇಕೆ?’ ಎಂದಿದ್ದಾರೆ. ಜೊತೆಗೆ ಕೋಮುವಾದಿಗಳ ವಿರುದ್ಧ ಹೋರಾಟ ನಡೆಸುವ ವಿಷಯದಲ್ಲಿ ಬೇಕಾದ್ದನ್ನಷ್ಟೇ ಆಯ್ದುಕೊಳ್ಳುವುದು ಸರಿಯಲ್ಲ ಎನ್ನುವ ಮೂಲಕ ಬಿಜೆಪಿಗೊಂದು ನೀತಿ, ಐಎಸ್‌ಎಫ್‌ಗೊಂದು ನೀತಿ ಸರಿಯಲ್ಲ ಎಂದಿದ್ದಾರೆ.

ಆದರೆ, ‘ಎಲ್ಲ ಯೋಚನೆ ಮಾಡಿಯೇ ಐಎಸ್‌ಎಫ್‌ ಜತೆ ಮೈತ್ರಿ ಮಾಡಿಕೊಳ್ಳಲಾಗಿದೆ. ಕಾಂಗ್ರೆಸ್‌ ವರಿಷ್ಠರನ್ನು ತೃಪ್ತಿಪಡಿಸಲು ಶರ್ಮಾ ಹೇಳಿಕೆ ನೀಡಿದ್ದಾರೆ. ಇದು ಬಿಜೆಪಿಗೆ ಅನುಕೂಲ ಕಲ್ಪಿಸುತ್ತದೆ’ ಎಂದು ಚೌಧರಿತಿರುಗೇಟು ನೀಡಿದ್ದಾರೆ.