ಉಗ್ರರ ಹಣದ ಮಾರ್ಗ ಬಂದ್‌ಗೆ ಪಾಕಿಸ್ತಾನಕ್ಕೆ 4 ತಿಂಗಳ ಗಡುವು| ‘ಗ್ರೇ ಲಿಸ್ಟ್‌’ನಲ್ಲೇ ಮುಂದುವರಿಸಿದ ಎಫ್‌ಎಟಿಎಫ್| ಜೂನ್‌ ಒಳಗೆ 8 ಅಂಶ ಜಾರಿಯಾಗಿದ್ದರೆ ಕಪ್ಪು ಪಟ್ಟಿಗೆ

ನವದೆಹಲಿ[ಫೆ.22]: ಲಷ್ಕರ್‌ ಎ ತೊಯ್ಬಾ ಹಾಗೂ ಜೈಷ್‌ ಎ ಮೊಹಮ್ಮದ್‌ನಂತಹ ಉಗ್ರಗಾಮಿ ಸಂಘಟನೆಗಳಿಗೆ ಹೋಗುತ್ತಿರುವ ಹಣಕ್ಕೆ ಕಡಿವಾಣ ಹಾಕಲು ಪಾಕಿಸ್ತಾನಕ್ಕೆ ಹೊಸದಾಗಿ 4 ತಿಂಗಳ ಗಡುವನ್ನು ನೀಡಿರುವ ಉಗ್ರರ ಹಣಕಾಸು ಜಾಲದ ಮೇಲಿನ ಕಣ್ಗಾವಲು ಸಂಸ್ಥೆಯಾದ ಜಾಗತಿಕ ಹಣಕಾಸು ಕ್ರಿಯಾ ಕಾರ್ಯಪಡೆ (ಎಫ್‌ಎಟಿಎಫ್‌), ಇದರಲ್ಲಿ ವಿಫಲವಾದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದೆ. ಇದೇ ವೇಳೆ, ಪಾಕಿಸ್ತಾನವನ್ನು ‘ಗ್ರೇ ಲಿಸ್ಟ್‌’ (ಬೂದು ಬಣ್ಣದ ಪಟ್ಟಿ)ನಲ್ಲೇ ಮುಂದುವರಿಸಲು ನಿರ್ಧರಿಸಿದೆ. ಇದರಿಂದಾಗಿ ‘ಕಪ್ಪು ಪಟ್ಟಿ’ ಸೇರ್ಪಡೆಯಿಂದ ಸ್ವಲ್ಪದರಲ್ಲೇ ಪಾಕಿಸ್ತಾನ ಪಾರಾಗಿದೆ.

39 ರಾಷ್ಟ್ರಗಳ ಸದಸ್ಯತ್ವ ಹೊಂದಿರುವ ಎಫ್‌ಎಟಿಎಫ್‌ನ ಮಹಾಧಿವೇಶನ ಪ್ಯಾರಿಸ್‌ನಲ್ಲಿ ಶುಕ್ರವಾರ ನಡೆಯಿತು. ಉಗ್ರರಿಗೆ ಹೋಗುತ್ತಿರುವ ಹಣಕಾಸಿಗೆ ಕಡಿವಾಣ ಹಾಕಲು ಪಾಕಿಸ್ತಾನ ಈವರೆಗೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲನೆ ನಡೆಸಿತು. ಹಿಂದಿನ ಸಭೆಯಲ್ಲಿ ಪಾಕಿಸ್ತಾನ 27 ಕ್ರಿಯಾ ಯೋಜನೆಗಳನ್ನು ಜಾರಿಗೆ ತರುವುದಾಗಿ ಭರವಸೆ ನೀಡಿತ್ತು. ಆ ಪೈಕಿ 13 ಕ್ರಿಯಾ ಯೋಜನೆ ಜಾರಿಯಲ್ಲಿ ವಿಫಲವಾಗಿರುವುದಕ್ಕೆ ಎಫ್‌ಎಟಿಫ್‌ ಸಭೆ ತೀವ್ರ ರೀತಿಯ ಕಳವಳ ವ್ಯಕ್ತಪಡಿಸಿತು. ಮತ್ತೊಂದು ಗಡುವನ್ನು ಪಾಕಿಸ್ತಾನ ಮೀರಿದೆ ಎಂದು ಆತಂಕ ವ್ಯಕ್ತಪಡಿಸಿ, 8 ಅಂಶಗಳನ್ನು ಜಾರಿಗೆ ತರಲು ಪಾಕಿಸ್ತಾನಕ್ಕೆ ಸೂಚಿಸಿತು. ನಾಲ್ಕು ತಿಂಗಳ ಬಳಿಕ ಅಂದರೆ ಜೂನ್‌ನಲ್ಲಿ ಮತ್ತೆ ಪರಾಮರ್ಶೆ ನಡೆಯಲಿದ್ದು, ಈ ಅಂಶಗಳ ಜಾರಿಯಲ್ಲಿ ವಿಫಲವಾದರೆ ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಲಾಗುತ್ತದೆ ಎಂಬ ಎಚ್ಚರಿಕೆ ನೀಡಿತು ಎಂದು ವರದಿಗಳು ತಿಳಿಸಿವೆ.

ಅಕ್ರಮ ಹಣ ವರ್ಗಾವಣೆ ಹಾಗೂ ಭಯೋತ್ಪಾದನೆಗೆ ಹಣಕಾಸಿನ ಹರಿವು ತಡೆಯುವ ಕಾಯ್ದೆಗಳು ಮತ್ತು ಅದರ ಜಾರಿಯಲ್ಲಿ ಪಾಕ್‌ನ ಲೋಪಗಳನ್ನು ಮನಗಂಡಿದ್ದ ಎಫ್‌ಎಟಿಎಫ್‌ 2018ರ ಜೂನ್‌ನಲ್ಲಿ ಪಾಕಿಸ್ತಾನವನ್ನು ಗ್ರೇ ಲಿಸ್ಟ್‌ಗೆ ಸೇರಿಸಿತ್ತು. 27 ಕ್ರಿಯಾ ಯೋಜನೆಗಳನ್ನು ಸಿದ್ಧಗೊಳಿಸಿ ಅದರ ಜಾರಿಗೆ 15 ತಿಂಗಳ ಕಾಲಾವಕಾಶ ನೀಡಿತ್ತು.

ಒಂದು ವೇಳೆ ಪಾಕಿಸ್ತಾನವನ್ನು ಎಫ್‌ಎಟಿಎಫ್‌ ಕಪ್ಪು ಪಟ್ಟಿಗೆ ಏನಾದರೂ ಸೇರಿಸಿದರೆ, ಕಠೋರ ದಿಗ್ಬಂಧನಗಳನ್ನು ಹೇರಲಾಗುತ್ತದೆ. ಆ ದೇಶದ ಹಣಕಾಸು ವಹಿವಾಟಿನ ಮೇಲೆ ತೀವ್ರ ನಿಗಾ ಇಡಲಾಗುತ್ತದೆ. ಜತೆಗೆ ಜಾಗತಿಕ ರೇಟಿಂಗ್‌ ಕುಸಿಯಲಿದ್ದು, ಸಾಲ ಅಲಭ್ಯವಾಗುತ್ತದೆ. ಸದ್ಯ ಇರಾನ್‌ ಹಾಗೂ ಉತ್ತರ ಕೊರಿಯಾ ಮಾತ್ರ ಕಪ್ಪು ಪಟ್ಟಿಯಲ್ಲಿವೆ.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"