ನವದೆಹಲಿ(ಜೂ.04): ಕೊರೋನಾ ಲಾಕ್‌ಡೌನ್‌ನಿಂದಾಗಿ ದೆಹಲಿಯಲ್ಲಿ ಸಿಲುಕಿ, ಸಂಕಷ್ಟದಲ್ಲಿರುವ ಪಟನಾ ಮೂಲದ 33 ವಲಸೆ ಕಾರ್ಮಿಕರನ್ನು ಸಂಸದರ ಕೋಟಾದಡಿ ತಮಗೆ ಲಭ್ಯವಿರುವ ವಿಮಾನ ಟಿಕೆಟ್‌ಗಳನ್ನು ಬಳಸಿ ತವರಿಗೆ ಕಳುಹಿಸಲು ಆಮ್‌ ಆದ್ಮಿ ಪಕ್ಷದ ಸಂಸದ ಸಂಜಯ್‌ ಸಿಂಗ್‌ ನಿರ್ಧರಿಸಿದ್ದಾರೆ.

ಸಂಸದರ ಕೋಟಾದಡಿ ವಾರ್ಷಿಕ 34 ವಿಮಾನ ಟಿಕೆಟ್‌ಗಳನ್ನು ಪ್ರತಿ ಸಂಸದನಿಗೆ ಸರ್ಕಾರ ನೀಡುತ್ತದೆ. ಈ ಸೌಲಭ್ಯವನ್ನು ಮಾನವೀಯ ಕಾರ‍್ಯಕ್ಕೆ ಬಳಸಿಕೊಳ್ಳುತ್ತಿರುವ ಸಂಜಯ್‌ ಸಿಂಗ್‌ 33 ವಲಸೆ ಕಾರ್ಮಿರನ್ನು ತವರಿಗೆ ಕಳುಹಿಸಲು ನಿರ್ಧರಿಸಿದ್ದಾರೆ. ಗುರುವಾರ ಸಂಜೆ ವಿಮಾನದ ಮೂಲಕ ಕಾರ್ಮಿಕರು ತಮ್ಮ ತವರು ಸೇರಲಿದ್ದಾರೆ.

ಸಂಜಯ್‌ ಸಿಂಗ್‌ ಅವರ ಈ ಕಾರ‍್ಯವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ‘ನಿಮ್ಮ ಈ ಕೆಲಸ ಎಲ್ಲರಿಗೂ ಮಾದರಿ’ ಪ್ರಶಂಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸಂಜಯ್‌ ಸಿಂಗ್‌, ‘ನಿಮ್ಮ ರಾಜಕೀಯ ಸಂಗಡದಿಂದ ಕಲಿತ ಪಾಠ ಇದು’ ಎಂದು ಹೇಳಿ ಧನ್ಯವಾದ ಅರ್ಪಿಸಿದ್ದಾರೆ.