ನವದೆಹಲಿ(ಸೆ.03): ದೇಶದಲ್ಲಿ ಕೊರೋನಾ ವೈರಸ್‌ ಯಾವ ರೀತಿಯಲ್ಲಿ ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ ಮತ್ತು ಯಾವ್ಯಾವ ವಯೋಮಾನದವರಲ್ಲಿ ಹೇಗೆ ಹರಡುತ್ತಿದೆ ಎಂಬ ಕುತೂಹಲಕರ ಅಂಕಿ-ಅಂಶಗಳನ್ನು ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ. ಅದರ ಪ್ರಕಾರ, ದೇಶದಲ್ಲಿ ಆ.22ರವರೆಗೆ ಕೋವಿಡ್‌ನಿಂದ ಸಾವನ್ನಪ್ಪಿದವರಲ್ಲಿ ಶೇ.90ರಷ್ಟುಜನರು 40 ವರ್ಷಕ್ಕಿಂತ ಹಿರಿಯರು. ಹಾಗೆಯೇ, ಮೃತರಲ್ಲಿ ಶೇ.69ರಷ್ಟುಪುರುಷರು ಮತ್ತು ಶೇ.31ರಷ್ಟುಮಹಿಳೆಯರು.

ಅಂದರೆ, ಮಹಿಳೆಯರ ಎರಡು ಪಟ್ಟು ಪುರುಷರೇ ಈ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಇದರರ್ಥ ಕೊರೋನಾ ವಿರುದ್ಧ ಪುರುಷರಿಗಿಂತ ಮಹಿಳೆಯರಲ್ಲೇ ರೋಗನಿರೋಧಕ ಶಕ್ತಿ ಹೆಚ್ಚು. ಜಾಗತಿಕ ಮಟ್ಟದಲ್ಲೂ ಇದೇ ಟ್ರೆಂಡ್‌ ಇದೆ.

ಇನ್ನು, ವಯೋವೃದ್ಧರಿಗೇ ಕೊರೋನಾ ತಗಲುವ ಸಾಧ್ಯತೆ ಜಾಸ್ತಿ ಎಂಬ ನಂಬಿಕೆಯನ್ನು ಅಂಕಿ-ಅಂಶಗಳು ಸುಳ್ಳಾಗಿಸಿವೆ. ಏಕೆಂದರೆ, ಇಲ್ಲಿಯವರೆಗೆ ದೇಶದಲ್ಲಿ ಕೊರೋನಾ ಸೋಂಕು ಅಂಟಿಸಿಕೊಂಡವರಲ್ಲಿ ಶೇ.54ರಷ್ಟುಜನರು 18ರಿಂದ 44 ವರ್ಷದ ಒಳಗಿನವರು ಎಂದು ಆರೋಗ್ಯ ಇಲಾಖೆಯ ವರದಿ ಹೇಳಿದೆ.

ಕುತೂಹಲಕರ ಸಂಗತಿಗಳು:

ಕೊರೋನಾದಿಂದ ಸಾವನ್ನಪ್ಪಿರುವವರಲ್ಲಿ ಹೆಚ್ಚಿನವರು 61ರಿಂದ 70 ವರ್ಷದ ಒಳಗಿನವರಾಗಿದ್ದಾರೆ. 20ಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಸಾವಿನ ಪ್ರಮಾಣ ಯುವಕ ಮತ್ತು ಯುವತಿಯರಲ್ಲಿ ಸಮಾನವಾಗಿದೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಕೊರೋನಾದಿಂದ ಸಾವನ್ನಪ್ಪುವ ಸಾಧ್ಯತೆ ತೀರಾ ಕಡಿಮೆ ಇದೆ. ಒಟ್ಟು ಸಾವಿನಲ್ಲಿ 90 ವರ್ಷಕ್ಕಿಂತ ಮೇಲಿನವರ ಪ್ರಮಾಣ ಶೇ.0.5 ಮಾತ್ರವೇ ಇದೆ ಎಂದು ತಿಳಿಸಿದೆ.

ಇತರೆ ವಿವರ

- ಒಟ್ಟು ಸಾವಿನಲ್ಲಿ 85 ವರ್ಷಕ್ಕಿಂತ ಮೇಲ್ಪಟ್ಟವರ ಪ್ರಮಾಣ ಶೇ.3.4

- ಒಟ್ಟು ಸಾವಿನಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರ ಪ್ರಮಾಣ ಶೇ.51

- ಒಟ್ಟು ಸಾವಿನಲ್ಲಿ 45-60 ವಯೋಮಾನದವರ ಪ್ರಮಾಣ ಶೇ.36

- ಒಟ್ಟು ಸಾವಿನಲ್ಲಿ 26-44 ವಯೋಮಾನದವರ ಪ್ರಮಾಣ ಶೇ.11

- ಒಟ್ಟು ಸಾವಿನಲ್ಲಿ 18-25 ವಯೋಮಾನದವರ ಪ್ರಮಾಣ ಶೇ.1

- ಒಟ್ಟು ಸಾವಿನಲ್ಲಿ 17 ವರ್ಷಕ್ಕಿಂತ ಕೆಳಗಿನವರ ಪ್ರಮಾಣ ಶೇ.1

- ದೇಶದಲ್ಲೀಗ ಕೊರೋನಾ ಸೋಂಕಿತರ ಸಾವಿನ ದರ ಶೇ.1.7. ಜಾಗತಿಕ ಸರಾಸರಿ ಶೇ.3.3.