ನವದೆಹಲಿ(ಅ.25): 2021ರ ಮಧ್ಯಭಾಗದಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆ ಇರುವ ಕೊರೊನಾ ಲಸಿಕೆಯ ಬಗ್ಗೆ ಶೇ.61 ಜನರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಲಸಿಕೆಯನ್ನು ತೆಗೆದುಕೊಳ್ಳುವ ಬದಲು ಕಾಯಲು ಸಿದ್ಧ ಇರುವುದಾಗಿ ತಿಳಿಸಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.

‘ಲೋಕಲ್‌ ಸರ್ಕಲ್ಸ್‌’ ಎಂಬ ಸಂಸ್ಥೆ ಈ ಸಮೀಕ್ಷೆ ನಡೆಸಿದೆ. ‘ಮುಂದಿನ ವರ್ಷ ಕೊರೋನಾ ಲಸಿಕೆ ಲಭಿಸಿದರೆ ನೀವು ಅದನ್ನು ತೆಗೆದುಕೊಳ್ಳುತ್ತೀರಾ? ಈ ಮೂಲಕ ಕೋವಿಡ್‌ ಪೂರ್ವ ಜೀವನ ಶೈಲಿಗೆ ಮರಳಲು ಇಚ್ಛಿಸುತ್ತೀರಾ?’ ಎಂದು ಪ್ರಶ್ನಿಸಲಾಗಿತ್ತು.

ಈ ಪ್ರಶ್ನೆಗೆ 225 ಜಿಲ್ಲೆಗಳ 8312 ಜನರಿಂದ ಪ್ರತಿಕ್ರಿಯೆ ಸಂಗ್ರಹಿಸಲಾಗಿದೆ. ಇವರಲ್ಲಿ ಶೇ.61ರಷ್ಟುಜನರು, ‘2021ರಲ್ಲಿ ಕೊರೋನಾ ಲಸಿಕೆ ಲಭ್ಯವಾದರೂ ತಕ್ಷಣವೇ ಅದನ್ನು ಪಡೆಯಲು ನಮಗೆ ಇಷ್ಟವಿಲ್ಲ. ಏಕೆಂದರೆ ಲಸಿಕೆ ಬಗ್ಗೆ ನಮಗೆ ಅನುಮಾನಗಳಿವೆ’ ಎಂದು ಉತ್ತರಿಸಿದ್ದಾರೆ.

ಕೇವಲ ಶೇ.12 ಜನರು ಮಾತ್ರ, ‘ನಾನು ಲಸಿಕೆ ಪಡೆದು ಕೋವಿಡ್‌ಪೂರ್ವ ಜೀವನ ಶೈಲಿಗೆ ಮರಳುವೆ’ ಎಂದು ಉತ್ತರಿಸಿದ್ದರೆ, ಶೇ.25 ಜನರು ‘ನಾನು ಲಸಿಕೆ ಹಾಕಿಸಿಕೊಂಡರೂ ಕೋವಿಡ್‌ಪೂರ್ವ ಜೀವನಶೈಲಿಗೆ ಮರಳಲು ಆಗದು’ ಎಂದಿದ್ದಾರೆ.

ಲಾಕ್‌ಡೌನ್‌ನಲ್ಲಿ ಚಿಂತೆಯ ಸ್ಥಿತಿ:

‘ಕೊರೋನಾ ಬಂದು ಈಗ 8 ತಿಂಗಳಾಗಿದ್ದು, ಲಾಕ್‌ಡೌನ್‌ ವೇಳೆಯ ಮನಸ್ಥಿತಿ ಹೇಗಿತ್ತು’ ಎಂಬ ಪ್ರಶ್ನೆಗೆ ಬಹುಪಾಲು ಜನರು ‘ಚಿಂತೆ’ಯ ಭಾವನೆ ವ್ಯಕ್ತಪಡಿಸಿದ್ದಾರೆ.

ಶೇ.33 ಜನರು ‘ನನಗೆ ಚಿಂತೆ ಆಗಿದೆ’ ಎಂದಿದ್ದರೆ, ಶೇ.19 ಜನರು ‘ಸಂತೋಷದಿಂದ ಇದ್ದೆ ಹಾಗೂ ನಿರಾಳನಾಗಿದ್ದೆ’ ಎಂದಿದ್ದಾರೆ. ಶೇ.13 ಜನರು ‘ಖಿನ್ನತೆ’, ಶೇ.5 ಜನರು ‘ಉತ್ಸಾಹ’ ಹಾಗೂ ಶೇ.20 ಜನರು ‘ಧನ್ಯತಾಭಾವ’ ವ್ಯಕ್ತಪಡಿಸಿದ್ದಾರೆ. ಶೇ.10 ಜನರು ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ.

ಕೊರೋನಾ ನಿರ್ಬಂಧಗಳಿಗೆ ಸಹಮತ:

ಶೇ.38ರಷ್ಟುಜನರು ಕೊರೋನಾ ನಂತರದ ಯುಗದ ‘ನಿರ್ಬಂಧಿತ ಜೀವನಶೈಲಿ’ಗೆ ಸಹಮತ ವ್ಯಕ್ತಪಡಿಸಿದ್ದಾರೆ. ಶೇ.23 ಜನರು ‘ನಿರ್ಬಂಧಗಳಿಂದ ಸಾಕಾಗಿದೆ’ ಎಂದಿದ್ದರೆ, ಶೇ.14 ಜನರು ‘ಡಿ.31ವರೆಗೆ ಕಾಯುತ್ತೇವೆ’ ಎಂದು, ಶೇ.6 ಜನರು ‘ಮಾ.31ರವರೆಗೆ ಕಾಯುತ್ತೇವೆ’ ಎಂದು ಪ್ರತಿಕ್ರಿಯಿಸಿದ್ದಾರೆ.