6 ರಾಜ್ಯಗಳಿಗೆ ಮಿಡತೆ ಸೇನೆ ದಾಳಿ!
6 ರಾಜ್ಯಗಳಿಗೆ ಮಿಡತೆ ದಾಳಿ ಕಾಟ| ರಾಜಸ್ಥಾನ, ಹರ್ಯಾಣ, ಗುಜರಾತ್, ಮ.ಪ್ರ., ಪಂಜಾಬ್ ಬಳಿಕ ಮಹಾರಾಷ್ಟ್ರಕ್ಕೆ ಲಗ್ಗೆ| ಉ.ಪ್ರ, ದಿಲ್ಲಿಗೂ ದಾಳಿಯ ಮುನ್ನೆಚ್ಚರಿಕೆ ,ಈ ವರ್ಷ ಇವುಗಳಿಂದ ಬೆಳೆ ನಾಶ: ವಿಶ್ವಸಂಸ್ಥೆ
ನವದೆಹಲಿ/ಮುಂಬೈ(ಮೇ.27): ಕಳೆದೊಂದು ವಾರದಿಂದ ಮಧ್ಯಪ್ರದೇಶ, ಪಂಜಾಬ್, ಹರ್ಯಾಣ, ಗುಜರಾತ್ ಹಾಗೂ ರಾಜಸ್ಥಾನದಲ್ಲಿ ಅನಾಹುತ ಸೃಷ್ಟಿಸುತ್ತಿರುವ ಕೋಟ್ಯಂತರ ಮಿಡತೆಗಳು ಇದೀಗ ಮಹಾರಾಷ್ಟ್ರದಲ್ಲೂ ದಾಂಗುಡಿ ಇಟ್ಟಿವೆ. ಇದರೊಂದಿಗೆ ದಾಳಿಗೆ ತುತ್ತಾದ ರಾಜ್ಯಗಳ ಸಂಖ್ಯೆ 6ಕ್ಕೆ ಏರಿದೆ. ಮತ್ತೊಂದೆಡೆ ದಿಲ್ಲಿ ಹಾಗೂ ಉತ್ತರ ಪ್ರದೇಶಕ್ಕೂ ನುಗ್ಗಿ ದಾಳಿ ಮಾಡುವ ಮುನ್ನೆಚ್ಚರಿಕೆ ನೀಡಲಾಗಿದೆ.
"
ಪಾಶ್ಚಾತ್ಯ ಹವಾಮಾನ ವೈಪರಿತ್ಯದ ಕಾರಣ ಪಾಕಿಸ್ತಾನದಿಂದ ಭಾರತಕ್ಕೆ ಆಗಮಿಸಿರುವ ಮಿಡತೆಗಳು ಮಹಾರಾಷ್ಟ್ರದ ವಿದರ್ಭದ 5 ಗ್ರಾಮಗಳಲ್ಲಿ ದಾಳಿ ನಡೆಸಿವೆ. ಇವು ಬೆಳೆದು ನಿಂತ ಪೈರು ತಿಂದು ವಿನಾಶ ಸೃಷ್ಟಿಸುತ್ತವೆ. ಹೀಗಾಗಿ ಬೆಳೆಗಳು ಹಾಳಾಗದಿರಲಿ ಎಂದು ಬೆಳೆ ಹಾಗೂ ಸಸ್ಯಗಳ ಮೇಲೆ ಕೀಟನಾಶಕಗಳನ್ನು ಸಿಂಪಡಿಸಲಾಗುತ್ತಿದೆ. ವಿದರ್ಭದ ಅಮರಾವತಿ, ವರ್ಧಾ, ನಾಗಪುರ ಜಿಲ್ಲೆಗಳಲ್ಲಿ ದಾಳಿ ನಡೆದ ವರದಿಗಳು ಬಂದಿವೆ.
ಉತ್ತರ ಭಾರತ ಆಯ್ತು ಈಗ ರಾಜ್ಯಕ್ಕೂ ಮಿಡತೆ ಸೇನೆ ಭೀತಿ!
ಉತ್ತರ ಪ್ರದೇಶದ ಮಥುರಾದಲ್ಲಿ ಕೂಡ ಮಿಡತೆ ದಾಳಿಯ ಮುನ್ಸೂಚನೆ ನೀಡಲಾಗಿದ್ದು, ಮುಂಜಾಗ್ರತಾ ಕ್ರಮ ಕೈಗೊಂಡಿರುವ ಜಿಲ್ಲಾಡಳಿತ, ದಾಳಿ ತಡೆಗೆ ಕಾರ್ಯಪಡೆ ರಚಿಸಿದೆ. ಕ್ಲೋರೋಪಿರಿಫೋಸ್ ಕೀಟನಾಶಕವನ್ನು ಸಂಗ್ರಹಿಸಿ ಇಡಲಾಗಿದ್ದು, ಮಿಡತೆ ದಾಳಿ ತಡೆಯಲು ಬಳಸಲಾಗುತ್ತದೆ. ಪಂಜಾಬ್, ಹರ್ಯಾಣ, ಮಧ್ಯಪ್ರದೇಶ, ರಾಜಸ್ಥಾನದಲ್ಲಿ ದಾಳಿ ಮಾಡಿರುವ ಮಿಡತೆ ದಿಲ್ಲಿಯಲ್ಲೂ ದಾಳಿ ನಡೆಸಬಹುದು ಎಂದು ಕೇಂದ್ರ ಪರಿಸರ ಸಚಿವಾಲಯ ಕಟ್ಟೆಚ್ಚರ ಸಾರಿದೆ.
ಈ ನಡುವೆ ಮಿಡತೆ ಸೇನೆಯು ಭಾರತದ ಕೃಷಿ ಮೇಲೆ ಪರಿಣಾಮ ಬೀರಬಹುದು ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.
ಮಿಡತೆ ಏನೀ ನಡತೆ? ಬಿರುಗಾಳಿಯಂತೆ ದಾಳಿ ಮಾಡುವ ಕೀಟಗಳು
ಇದೀಗ ಭಾರತದ ಮೇಲೆ ದಾಳಿ ನಡೆಸಿರುವ ಮರುಭೂಮಿ ಮಿಡತೆಗಳು ಪ್ರತಿ ಚದರ ಕಿ.ಮೀ ವ್ಯಾಪ್ತಿಯಲ್ಲಿ ಸುಮಾರು 15 ಕೋಟಿ ಪ್ರಮಾಣದಲ್ಲಿರುತ್ತವೆ.