ನವದೆಹಲಿ(ಜ.10): 2019ರ ಫೆ.14ರ ಪುಲ್ವಾಮ ಉಗ್ರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಗಡಿಯಲ್ಲಿದ್ದ ಭಯೋತ್ಪಾದಕ ನೆಲೆಗಳ ಮೇಲಿನ ಭಾರತೀಯ ವಾಯುಪಡೆಯ ದಾಳಿಯಲ್ಲಿ 300 ಉಗ್ರರು ಬಲಿಯಾಗಿದ್ದರು ಎಂದು ಆ ದೇಶದ ಮಾಜಿ ರಾಜತಾಂತ್ರಿಕ ಅಧಿಕಾರಿಯೊಬ್ಬರು ಒಪ್ಪಿಕೊಂಡಿದ್ದಾರೆ.

‘ಇದರಿಂದ ತನ್ನ ಗಡಿ ವ್ಯಾಪ್ತಿಯಲ್ಲಿ ಯಾವುದೇ ಉಗ್ರನೆಲೆಗಳಿಲ್ಲ. ಭಾರತದ ವಾಯುಪಡೆ ದಾಳಿಯಲ್ಲಿ ಯಾವುದೇ ಉಗ್ರರು ಸಾವನ್ನಪ್ಪಿಲ್ಲ’ ಎಂದು ಪ್ರತಿಪಾದಿಸಿಕೊಂಡು ಬಂದಿದ್ದ ಪಾಕಿಸ್ತಾನ ಇದೀಗ ವಿಶ್ವದ ಎದುರು ಬೆತ್ತಲಾದಂತಾಗಿದೆ.

ಪಾಕಿಸ್ತಾನದ ಉರ್ದು ವಾಹಿನಿಯೊಂದರ ಚರ್ಚೆ ವೇಳೆ ಪಾಕಿಸ್ತಾನದ ಮಾಜಿ ರಾಜತಾಂತ್ರಿಕ ಅಧಿಕಾರಿ ಅಘಾ ಹಿಲಾಲಿ ಅವರು, ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

2019ರ ಫೆ.14ರಂದು ಜೈಷ್‌-ಎ-ಮೊಹಮ್ಮದ್‌ ಉಗ್ರರ ದಾಳಿಯಿಂದಾಗಿ 40 ಸಿಆರ್‌ಪಿಎಫ್‌ ಯೋಧರು ಬಲಿಯಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ಫೆ.26ರ ಮಧ್ಯರಾತ್ರಿ ಪಾಕಿಸ್ತಾನದ ಗಡಿ ನುಗ್ಗಿದ ಭಾರತೀಯ ಸೇನೆ ಉಗ್ರನೆಲೆಗಳನ್ನು ಧ್ವಂಸ ಮಾಡಿತ್ತು. ಆದರೆ ಭಾರತದ ದಾಳಿಯಿಂದ ಯಾವುದೇ ಹಾನಿಯಾಗಿಲ್ಲ ಎಂದು ಪಾಕಿಸ್ತಾನ ಹುಸಿ ನುಡಿದಿತ್ತು.

ಪುಲ್ವಾಮ ದಾಳಿ ಸಂಬಂಧವಾಗಿ ಪಾಕಿಸ್ತಾನ ಮತ್ತು ಭಾರತ ನಡುವಿನ ಶೀತಲ ಸಮರದ ವೇಳೆ ಪಾಕಿಸ್ತಾನದಿಂದ ಬಂಧನವಾಗಿದ್ದ ಭಾರತದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ತಮಾನ್‌ ಅವರನ್ನು ಬಿಡುಗಡೆಗೊಳಿಸದೇ ಹೋದಲ್ಲಿ ಭಾರತವು ಅಂದು ರಾತ್ರಿ 9 ಗಂಟೆಯೊಳಗೆ ದಾಳಿ ನಡೆಸಲಿದೆ ಎಂದು ಪಾಕಿಸ್ತಾನ ಸರ್ಕಾರ ಆತಂಕ ವ್ಯಕ್ತಪಡಿಸಿತ್ತು ಎಂದು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪಾಕಿಸ್ತಾನ ಮುಸ್ಲಿಂ ಲೀಗ್‌-ಎನ್‌ ಮುಖಂಡ ಅಯಾಝ್‌ ಸಾದಿಕ್‌ ಅವರು ಬಹಿರಂಗಪಡಿಸಿದ್ದರು.