ನವದೆಹಲಿ(ಏ.24): ಇಲ್ಲಿನ ಬಹುದೊಡ್ಡ ಕೋವಿಡ್‌ ಆಸ್ಪತ್ರೆ ಸರ್‌ ಗಂಗಾರಾಮ್‌ ಆಸ್ಪತ್ರೆಯಲ್ಲಿ ಕೇವಲ 24 ಗಂಟೆಗಳ ಅವಧಿಯಲ್ಲಿ 25 ಮಂದಿ ಕೊರೋನಾ ಸೋಂಕಿತರು ಸಾವಿಗೀಡಾಗಿದ್ದಾರೆ. ಅಲ್ಲದೆ ಇತರ 60ಕ್ಕೂ ಹೆಚ್ಚು ಸೋಂಕಿತರ ಜೀವಗಳು ಸಹ ಸಾಯುವ ಆಪತ್ತಿನಲ್ಲಿ ಸಿಲುಕಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಮ್ಲಜನಕದ ಪೂರೈಕೆಯಲ್ಲಾದ ಕೊರತೆಯೇ ಗಂಗಾರಾಮ್‌ ಆಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿತರ ಸಾವಿಗೆ ಕಾರಣವಿರಬಹುದು ಎಂದು ಮೂಲಗಳು ತಿಳಿಸಿವೆ.

ಬೆಡ್ ಸಿಗದೆ ಎಸ್‌ಐ ಸಾವು, ರಾಷ್ಟ್ರ ರಾಜಧಾನಿಯಲ್ಲೇ ಎಂಥ ಸ್ಥಿತಿ!

ಇನ್ನು ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸರ್ಕಾರದ ಮೂಲಗಳು, ‘ಸರ್‌ ಗಂಗಾರಾಮ್‌ ಆಸ್ಪತ್ರೆಗೆ ಅಗತ್ಯವಿರುವಷ್ಟು ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ. ಆಮ್ಲಜನಕದ ಟ್ಯಾಂಕರ್‌ ಅನ್ನು ಶುಕ್ರವಾರವೇ ಕಳಿಸಿಕೊಡಲಾಗಿದ್ದು, ಆಸ್ಪತ್ರೆಯ ಆಮ್ಲಜನಕ ಶೇಖರಣೆ ಹೆಚ್ಚಲಿದೆ’ ಎಂದು ಹೇಳಿವೆ.

ಕೇಂದ್ರ ಸರ್ಕಾರ ರವಾನಿಸಿರುವ ಆಮ್ಲಜನಕವು ಕೇವಲ 5 ಗಂಟೆಗಳಲ್ಲಿ ಬರಿದಾಗುವ ಸಾಧ್ಯತೆಯಿದ್ದು, ಆಸ್ಪತ್ರೆಗೆ ಬೇಕಿರುವಷ್ಟುಆಮ್ಲಜನಕ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದೆ ಸಮಯಕ್ಕೆ ಸರಿಯಾಗಿ ಪೂರೈಸಬೇಕು ಎಂದು ಎಸ್‌ಜಿಆರ್‌ಎಚ್‌ ಅಧ್ಯಕ್ಷ ಡಾ. ಡಿ.ಎಸ್‌ ರಾಣಾ ಹೇಳಿದ್ದಾರೆ.

‘ಆಸ್ಪತ್ರೆಯಲ್ಲಿ ಒಟ್ಟಾರೆ 500ಕ್ಕೂ ಹೆಚ್ಚು ಕೋವಿಡ್‌ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, 150 ಸೋಂಕಿತರಿಗೆ ಆಮ್ಲಜನಕ ನೆರವಿನಿಂದ ಚಿಕಿತ್ಸೆ ನೀಡಲಾಗುತ್ತಿದೆ. ವೆಂಟಿಲೇಟರ್‌ ಮತ್ತು ಬಿಐಪಿಎಪಿ ಸಲಕರಣೆಗಳು ಸರಿಯಾಗಿ ಕಾರ‍್ಯ ನಿರ್ವಹಿಸುತ್ತಿಲ್ಲ. ಇದರಿಂದಾಗಿ ಆಸ್ಪತ್ರೆಯಲ್ಲಿರುವ ಇನ್ನೂ ಗಂಭೀರ ಅನಾರೋಗ್ಯ ಎದುರಿಸುತ್ತಿರುವ 60 ಸೋಂಕಿತರ ಜೀವ ಉಳಿಯುವ ಸಾಧ್ಯತೆಯೇ ಕ್ಷೀಣಿಸುತ್ತಿದೆ’ ಎಂದು ಡಾ. ಡಿ.ಎಸ್‌ ರಾಣಾ ಹೇಳಿದ್ದಾರೆ.

ಇತ್ತೀಚೆಗಷ್ಟೇ ದಿಲ್ಲಿಯಲ್ಲಿ ತೀವ್ರ ಪ್ರಮಾಣದ ವೈದ್ಯಕೀಯ ಆಮ್ಲಜನಕದ ಕೊರತೆ ಉದ್ಭವವಾಗಿದ್ದು, ದಿಲ್ಲಿಗೆ ಅಗತ್ಯವಿರುವಷ್ಟುಆಮ್ಲಜನಕ ಪೂರೈಸಬೇಕು ಎಂದು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಕೇಂದ್ರ ಸರ್ಕಾರಕ್ಕೆ ಕೈಮುಗಿದು ವಿನಂತಿಸಿಕೊಂಡಿದ್ದರು.

ಕೋವಿಡ್ ವಿರುದ್ಧ ಹೋರಾಡೋಣ; ಪ್ಲಾಸ್ಮಾ ದಾನ ಮಾಡಿ ಜೀವ ಉಳಿಸೋಣ