Asianet Suvarna News Asianet Suvarna News

ಯೋಧರ ಸಾಹಸ ನೆನಪಿಸುವ ‘ಕಾರ್ಗಿಲ್‌ ವಿಜಯ ದಿವಸ್‌’

- ಕಾರ್ಗಿಲ್‌ ಬೆಟ್ಟಆಕ್ರಮಿಸಿಕೊಂಡು ಕೂತಿದ್ದ ಪಾಕಿಗಳು

- ಇಂಥ ಕಪಟಿ ಪಾಕ್‌ಗೆ ತಕ್ಕ ಪಾಠ ಕಲಿಸಿ ಹಿಮ್ಮೆಟ್ಟಿಸಿದ ದಿನ

- ಇಂದು 23ನೇ ಕಾರ್ಗಿಲ್‌ ವಿಜಯ ದಿವಸ 

23rd Kargil Vijay Diwas celebrations remember Indias historic victory and homage to martyrs san
Author
Bengaluru, First Published Jul 26, 2022, 7:57 AM IST | Last Updated Jul 26, 2022, 7:57 AM IST

ನವದೆಹಲಿ (ಜುಲೈ 26): ಭಾರತ ತಾನು ಸ್ನೇಹಕ್ಕೆ ಬದ್ಧ, ಸಮರಕ್ಕೂ ಸಿದ್ಧ ಎಂದು ಜಾಗತಿಕ ಮಟ್ಟದಲ್ಲಿ ಸಾಬೀತು ಪಡಿಸಿದ ದಿನವೇ ಕಾರ್ಗಿಲ್‌ ವಿಜಯ ದಿವಸ್‌. ಪಾಕಿಸ್ತಾನಿ ನುಸುಳುಕೋರರ ಹುಟ್ಟಡಗಿಸಿ ಭಾರತೀಯ ಯೋಧರು ವಿಜಯ ಪತಾಕೆ ಹಾರಿಸಿದ ದಿನವಿದು. ‘ಕಾರ್ಗಿಲ್‌ ವಿಜಯ ದಿವಸ್‌’ ಭಾರತೀಯ ಯೋಧರ ತ್ಯಾಗ, ದೇಶ ಪ್ರೇಮ, ಸಾಹಸ, ಪರಾಕ್ರಮ, ಸಮರ್ಪಣೆ ಭಾವವನ್ನು ನೆನಪಿಸುತ್ತದೆ. ಕಾರ್ಗಿಲ್‌ ಯುದ್ಧ ಮುಕ್ತಾಯವಾಗಿ 23 ವರ್ಷಗಳೇ ಕಳೆದರೂ ದೇಶದ ಪ್ರತಿಯೊಬ್ಬ ನಾಗರಿಕನು ಹೆಮ್ಮೆ ಪಡುವಂತಹ ಅವಿಸ್ಮರಣೀಯ ದಿನ ಇದಾಗಿದೆ. ಕಾಶ್ಮೀರದಲ್ಲಿರುವ ಕಾರ್ಗಿಲ್‌ ಪ್ರದೇಶದಲ್ಲಿ ಚಳಿಗಾಲದಲ್ಲಿ ಉಷ್ಣಾಂಶ ಮೈನಸ್‌ 48 ಡಿಗ್ರಿವರೆಗೂ ಕುಸಿಯುತ್ತದೆ. ಈ ಮೈಕೊರೆವ ಚಳಿಯಲ್ಲಿ ಗಡಿ ಕಾಯುವುದು ಭಾರೀ ಸವಾಲಿನ ಕೆಲಸ. ಹೀಗಾಗಿ ಚಳಿಗಾಲದಲ್ಲಿ ಭಾರತೀಯ ಸೈನಿಕರು ಈ ಪ್ರದೇಶದಿಂದ ಸ್ಥಳಾಂತರ ಆಗುತ್ತಿದ್ದರು. ಮತ್ತೆ ಬೇಸಿಗೆ ಆರಂಭವಾದ ಬಳಿಕ ಅಲ್ಲಿಗೆ ತೆರಳುತ್ತಿದ್ದರು. ಆದೆ ಇದನ್ನೇ ದುರ್ಬಳಕೆ ಮಾಡಿಕೊಂಡ ಕಪಟಿ ಪಾಕಿಸ್ತಾನ, 1999ರ ಫೆಬ್ರವರಿ ತಿಂಗಳ ಚಳಿಗಾಲದಲ್ಲಿ ತನ್ನ ಯೋಧರನ್ನು ಭಾರತಕ್ಕೆ ನುಸುಳಿಸಿತು. ಪಾಕ್‌ ನುಸುಳುಕೋರರು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಕಾರ್ಗಿಲ್‌ ಪರ್ವತದ ಶಿಬಿರಗಳನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಭಾರತ-ಪಾಕ್‌ ನಡುವೆ ಕಾರ್ಗಿಲ್‌ ಯುದ್ಧ ಆರಂಭವಾಗಲು ಇದು ಕಾರಣವಾಯಿತು.

ಪಾಕಿಗಳ ಬಗ್ಗು ಬಡಿಯಲು ಆಪರೇಶನ್‌ ವಿಜಯ್‌: ಪಾಕಿಸ್ತಾನವು ಭಾರತ ಸೇನೆಯ ಗಮನಕ್ಕೆ ಬರದಂತೆ ರಹಸ್ಯವಾಗಿ ತನ್ನ 5000 ಸೈನಿಕರನ್ನು ಗಡಿಯೊಳಗೆ ನುಗ್ಗಿಸಿತ್ತು. ಇದಕ್ಕೆ ಪಾಕ್‌ನ ಅಂದಿನ ಸೇನಾ ಮುಖ್ಯಸ್ಥ ಪರ್ವೇಜ್‌ ಮುಷರ್ರಫ್‌ ಕುಮ್ಮಕ್ಕು ನೀಡಿದ್ದರು. ಪಾಕ್‌ ಪಡೆಗಳು ದೇಶದ ಗಡಿಯೊಳಗೆ ನುಗ್ಗಿರುವ ಸುಳಿವನ್ನು ಸ್ಥಳೀಯ ಕುರಿಗಾಹಿಗಳು ಭಾರತೀಯ ಸೈನಿಕರಿಗೆ ನೀಡಿದರು. ಈ ಹಿನ್ನೆಲೆಯಲ್ಲಿ ಭಾರತ 5 ಯೋಧರನ್ನು ಗಸ್ತಿಗಾಗಿ ಕಳುಹಿಸಿದಾಗ, ಪಾಕ್‌ ಐವರನ್ನೂ ನಿಷ್ಕರುಣೆಯಿಂದ ಕೊಂದು ಹಾಕಿತು. ಇದರಿಂದ ಕೆರಳಿದ ಭಾರತ ಸರ್ಕಾರ, ಕೂಡಲೇ ಪಾಕಿಸ್ತಾನಿ ನುಸುಳುಕೋರರನ್ನು ದೇಶದ ಸೀಮೆಯಿಂದ ಹೊರಗಟ್ಟಲು 20,000 ಯೋಧರನ್ನು ಸಜ್ಜುಗೊಳಿಸಿತು. ಈ ಕಾರ್ಯಾಚರಣೆಗೆ ‘ಆಪರೇಶನ್‌ ವಿಜಯ್‌’ ಎಂದು ಹೆಸರಿಡಲಾಯಿತು.

ದುರ್ಗಮ ಸ್ಥಳದಲ್ಲಿ ಯುದ್ಧ: ಶ್ರೀನಗರದಿಂದ ಸುಮಾರು 205 ಕಿ.ಮೀ. ದೂರದಲ್ಲಿರುವ ಸುಮಾರು 16,000 ಅಡಿ ಎತ್ತರದ ಹಿಮಚ್ಛಾದಿತ ಪರ್ವತ ಶ್ರೇಣಿಯಲ್ಲಿ, ಕಡಿದಾದ ಕಣಿವೆ ಪ್ರದೇಶದಲ್ಲಿ ಕಾರ್ಗಿಲ್‌ ಯುದ್ಧ ನಡೆದಿತ್ತು. ಇದು ಜಗತ್ತಿನ ಅತ್ಯಂತ ದುರ್ಗಮ ಸ್ಥಳಗಳಲ್ಲಿ ಒಂದಾಗಿದೆ. ಪರ್ವತ ಶ್ರೇಣಿಯ ಮೇಲಿದ್ದ ಪಾಕ್‌ ಪಡೆಗಳು ಸುಲಭವಾಗಿ ಭಾರತೀಯ ಸೈನಿಕರ ಚಲನವಲನ ಗುರುತಿಸಿ ಅವರ ಮೇಲೆ ಬಾಂಬ್‌, ಶೆಲ್‌ ದಾಳಿ ನಡೆಸುತ್ತಿದ್ದರು. ಪಾಕ್‌ ಯೋಧರ ಕಣ್ಣಿಗೆ ಬೀಳದಂತೆ ಭೀಕರ ಚಳಿಯಲ್ಲಿ, ಶಸ್ತ್ರಾಸ್ತ್ರಗಳೊಂದಿಗೆ ದುರ್ಗಮ ಪರ್ವತಗಳನ್ನು ಏರುವುದು ಭಾರೀ ಸವಾಲಿನ ಕೆಲಸವಾಗಿತ್ತು. ಆದರೆ ಈ ಎಲ್ಲ ಅಡೆ ತಡೆಗಳನ್ನು ಮೀರಿದ ಭಾರತೀಯ ಯೋಧರು ವೀರಾವೇಶದಿಂದ ಹೋರಾಡಿ ಗೆಲುವು ಸಾಧಿಸಿದರು.

ವಾಯುಪಡೆಯ ಸಾಥ್‌: ಪಾಕಿಸ್ತಾನವನ್ನು ಸದೆಬಡೆಯಲು ಕಾರ್ಗಿಲ್‌ ಯುದ್ಧದಲ್ಲಿ ಭೂಸೇನೆಯೊಂದಿಗೆ ವಾಯುಪಡೆ ಕೂಡ ಕೈಜೋಡಿಸಿತು. ಮೇ 26ರಿಂದ ‘ಆಪರೇಶನ್‌ ಸಫೇದ್‌ ಸಾಗರ್‌’ ಹೆಸರಿನಲ್ಲಿ ವಾಯುಪಡೆ ಕಾರ್ಯಾಚರಣೆ ಆರಂಭಿಸಿತು. ಶ್ರೀನಗರ, ಅವಂತಿಪೊರಾ, ಆದಂಪುರದ ವಾಯುನೆಲೆಯಿಂದ ಕಾರ್ಯ ನಿರ್ವಹಿಸಲು ಅರಂಭಿಸಿತು. ವಾಯುಪಡೆಯ ಸಾಥ್‌, ಭೂಸೇನೆಗೆ ಇನ್ನಷ್ಟು ಬಲ ನೀಡಿತು. ಮಿಗ್‌-21 ವಿಮಾನಗಳು, ಬೋಫೋರ್ಸ್‌ ಬಂದೂಕುಗಳನ್ನು ಯುದ್ಧದಲ್ಲಿ ವ್ಯಾಪಕವಾಗಿ ಬಳಸಲಾಯಿತು. ಆದರೆ ಈ ಕಾರ್ಯಾಚರಣೆಯಲ್ಲಿ ಎಂಐಜಿ 21, 27- ಈ ಎರಡು ಯುದ್ಧ ವಿಮಾನಗಳನ್ನು ಭಾರತ ಕಳೆದುಕೊಂಡಿತು.

ನೌಕಾಪಡೆಯ ‘ತಲವಾರ್‌’: ಕಾರ್ಗಿಲ್‌ ಯುದ್ಧದಲ್ಲಿ ನೌಕಾಪಡೆಯೂ ಧುಮುಕಿತು. ‘ಆಪರೇಶನ್‌ ತಲವಾರ್‌’ ಎಂಬ ಹೆಸರಿನಲ್ಲಿ ಅರಬ್ಬೀ ಸಮುದ್ರದಲ್ಲಿ ತನ್ನ ಹಿಡಿತ ಹೆಚ್ಚಿಸಿಕೊಳ್ಳುವ ಮೂಲಕ ಪಾಕಿಸ್ತಾನಕ್ಕೆ ಪೆಟ್ರೋಲಿಯಂ ಉತ್ಪನ್ನಗಳು ತಲುಪದಂತೆ ಮಾಡಿತು. ಆಗಿನ ಪ್ರಧಾನಿ ನವಾಜ್‌ ಷರೀಫ್‌ ಬಹಿರಂಗ ಪಡೆಸಿದಂತೆ ಯುದ್ಧ ಪೂರ್ಣ ಪ್ರಮಾಣದಲ್ಲಿ ಆರಂಭವಾದರೆ ಕೇವಲ 6 ದಿನಗಳಿಗೆ ಸಾಕಾಗುವಷ್ಟುಇಂಧನ ಮಾತ್ರ ಪಾಕಿಸ್ತಾನದಲ್ಲಿತ್ತು. ನೌಕಾಪಡೆಯ ಈ ಅನಿರೀಕ್ಷಿತ ಕ್ರಮಕ್ಕೆ ಪಾಕ್‌ ಅಕ್ಷರಶಃ ತತ್ತರಿಸಿ ಹೋಯಿತು.

ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಶತ್ರುರಾಷ್ಟ್ರದಲ್ಲಿ ತಳಮಳ ಸೃಷ್ಟಿಸಿದ ರಾಜನಾಥ್ ಹೇಳಿಕೆ!

ವಿಜಯದ ಹಾದಿ: ಭಾರತದ ಕೆಚ್ಚೆದೆಯ ಯೋಧರು ಸತತ ಹೋರಾಟದ ಬಳಿಕ ಬೆಟಾಲಿಕ್‌ ಸೆಕ್ಟರ್‌ನ ಪ್ರಮುಖ 2 ಭಾಗಗಳನ್ನು ಮರು ವಶಪಡಿಸಿಕೊಂಡರು. ಟೋಲೋಲಿಂಗ್‌ ಪ್ರದೇಶವೂ ಭಾರತದ ಕೈವಶವಾಯಿತು. ಬಳಿಕ 10 ಪಾಕ್‌ ಯೋಧರ ಹತ್ಯೆಗೈದು ಟೈಗರ್‌ ಹಿಲ್ಸ್‌ ಅನ್ನು ವಶಪಡಿಸಿಕೊಂಡಿತು. ಈ ಕಾರ್ಯಾಚರಣೆಯಲ್ಲಿ ಭಾರತದ 5 ಯೋಧರು ಹತರಾದರು. ಜು. 5 ರಂದು ದ್ರಾಸ್‌ ಸೇರಿದಂತೆ ಇನ್ನಿತರ ಪ್ರದೇಶಗಳು ಭಾರತದ ಸ್ವಾಧೀನವಾದವು. ಒಟ್ಟಾರೆ ಸುಮಾರು 2 ತಿಂಗಳ ಕಾರ್ಯಾಚರಣೆ ಬಳಿಕ ಪಾಕ್‌ ಆಕ್ರಮಿತ ಪ್ರದೇಶದ ಶೇ. 75 ರಿಂದ ಶೇ.80ರಷ್ಟುಭಾಗಗಳು ಮತ್ತೆ ಭಾರತದ ತೆಕ್ಕೆಗೆ ಬಂದಿದ್ದವು. ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿಯವರ ಚತುರ ರಾಜತಾಂತ್ರಿಕ ನಡೆಗಳ ಪರಿಣಾಮಗಾಗಿ ಅಂತಾರಾಷ್ಟ್ರೀಯ ಸಮುದಾಯಗಳ ಒತ್ತಡದಿಂದಾಗಿ ಇನ್ನುಳಿದ ಭಾಗಗಳಿಂದ ಪಾಕ್‌ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವುದು ಅನಿವಾರ್ಯವಾಯಿತು. ಅಂತಿಮವಾಗಿ 1999ರ ಜುಲೈ 26ರಂದು ಪಾಕಿಸ್ತಾನದ ವಿರುದ್ಧ ಭಾರತ ವಿಜಯ ಸಾಧಿಸಿದೆ ಎಂದು ಘೋಷಿಸಲಾಯಿತು. ಈ ಗೆಲುವಿನ ಸ್ಮರಣಾರ್ಥ ‘ಕಾರ್ಗಿಲ್‌ ವಿಜಯ ದಿವಸ’ವನ್ನು ಪ್ರತಿವರ್ಷವೂ ಆಚರಿಸಲಾಗುತ್ತದೆ.

ಕಾರ್ಗಿಲ್ ವಿಜಯ್ ದಿವಸ್: ವೀರ ಯೋಧರಿಗೆ ನುಡಿನಮನ ಸಲ್ಲಿಸಿದ ಟೀಂ ಇಂಡಿಯಾ ಕ್ರಿಕೆಟಿಗರು

ಯುದ್ಧದ ವಿಶೇಷತೆಗಳು: 2ನೇ ವಿಶ್ವಯುದ್ಧದ ಬಳಿಕ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಿದ ಯುದ್ಧ ಎಂದು ಕಾರ್ಗಿಲ್‌ ಯುದ್ಧ ಖ್ಯಾತಿ ಪಡೆದಿದೆ. ಅಲ್ಲದೇ ದೂರದರ್ಶನದಲ್ಲಿ ದೇಶಾದ್ಯಂತ ಪ್ರಸಾರವಾದ ಮೊದಲ ಯುದ್ಧ ಇದಾಗಿದೆ. ಜಗತ್ತಿನ ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ನಡೆದ ಯುದ್ಧಗಳಲ್ಲಿ ಇದು ಕೂಡಾ ಒಂದಾಗಿದೆ. ಕಾರ್ಗಿಲ್‌ ಯುದ್ಧದ ವೇಳೆಯಲ್ಲಿ ಸರ್ಕಾರ ಪ್ರತಿ ನಿತ್ಯ 15 ಕೋಟಿ ರು. ವೆಚ್ಚ ಮಾಡಿದ್ದು, ಒಂದು ದಾಖಲೆಯೆನಿಸಿದೆ. 2 ಪರಮಾಣು ಸಶಸ್ತ್ರ ರಾಷ್ಟ್ರಗಳ ನಡುವೆ ನಡೆದ ಯುದ್ಧ ಇದಾಗಿದೆ.

ನಂಬರ್‌ ಗೇಮ್‌

5000 ಯೋಧರು- ಭಾರತದ ಗಡಿಯೊಳಗೆ ನುಸುಳಿದ ಪಾಕಿಸ್ತಾನಿಗಳ ಸಂಖ್ಯೆ

20000 ಯೋಧರು- ಪಾಕಿಗಳ ಮೇಲೆ ಮುಗಿಬಿದ್ದ ಭಾರತೀಯ ಯೋಧರ ಸಂಖ್ಯೆ

524 ಯೋಧರು- ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಯೋಧರ ಸಂಖ್ಯೆ

700 ಯೋಧರು- ಯುದ್ಧದಲ್ಲಿ ಮೃತಪಟ್ಟಪಾಕಿಸ್ತಾನಿಗಳ ಸಂಖ್ಯೆ (ಸ್ವತಂತ್ರ ಅಂಕಿಅಂಶಗಳ ಪ್ರಕಾರ)

15 ಕೋಟಿ ರು. - ಯುದ್ಧಕ್ಕಾಗಿ ಭಾರತ ಮಾಡಿದ ಪ್ರತಿನಿತ್ಯದ ವೆಚ್ಚ
 

Latest Videos
Follow Us:
Download App:
  • android
  • ios