2.9 ಕೋಟಿ ಭಾರತೀಯರ ವೈಯಕ್ತಿಕ ಮಾಹಿತಿ ಲೀಕ್!
2.9 ಕೋಟಿ ಭಾರತೀಯರ ವೈಯಕ್ತಿಕ ಮಾಹಿತಿ ಲೀಕ್| ಡಾರ್ಕ್ ವೆಬ್‌ನಲ್ಲಿ ಉಚಿತವಾಗಿ ಸೋರಿಕೆ| ಮನೆ ವಿಳಾಸ, ಫೋನ್ ಸಂಖ್ಯೆಯೂ ಲಭ್ಯ| ಕ್ರಿಮಿನಲ್ ಚಟುವಟಿಕೆಗೆ ಬಳಕೆ ಆತಂಕ
ನವದೆಹಲಿ(ಮೇ.24): ಬರೋಬ್ಬರಿ 2.9 ಕೋಟಿ ಭಾರತೀಯರ ವೈಯಕ್ತಿಕ ಮಾಹಿತಿಯನ್ನು ಡಾರ್ಕ್ ವೆಬ್‌ನಲ್ಲಿ ಸೋರಿಕೆ ಮಾಡಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಭಾರತೀಯ ಉದ್ಯೋಗಾಕಾಂಕ್ಷಿಗಳ ಇ-ಮೇಲ್, ದೂರವಾಣಿ ಸಂಖ್ಯೆ, ಮನೆ ವಿಳಾಸ, ಶೈಕ್ಷಣಿಕ ಅರ್ಹತೆ, ಉದ್ಯೋಗ ಅನುಭವ ಮತ್ತಿತರೆ ಮಾಹಿತಿಯನ್ನು ಉಚಿತವಾಗಿ ಲೀಕ್ ಮಾಡಲಾಗಿದೆ ಎಂದು ಆನ್‌ಲೈನ್ ಗುಪ್ತಚರ ಸಂಸ್ಥೆಯಾಗಿರುವ ಸೈಬಲ್ ಬಹಿರಂಗಪಡಿಸಿದೆ.
ಸೋರಿಕೆಯಾಗಿರುವ ಮಾಹಿತಿ ಬಳಸಿಕೊಂಡು ಸೈಬರ್ ಕ್ರಿಮಿನಲ್‌ಗಳು ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸಬಹುದು ಎಂಬ ಆತಂಕ ಕೂಡ ವ್ಯಕ್ತವಾಗುತ್ತಿದೆ.
ಇಂತಹ ಮಾಹಿತಿ ಪದೇ ಪದೇ ಸೋರಿಕೆಯಾಗುತ್ತಿರುತ್ತದೆ. ಆದರೆ ಈ ಬಾರಿ ಸಂದೇಶದ ತಲೆಬರಹದಲ್ಲೇ ಉದ್ಯೋಗಾಕಾಂಕ್ಷಿಗಳ ಮಾಹಿತಿ ಕಾಣಿಸಿರುವುದರಿಂದ ನಮ್ಮ ಗಮನಕ್ಕೆ ಬಂದಿದೆ ಎಂದು ಸೈಬಲ್ ಹೇಳಿದೆ. ಸೋರಿಕೆಯಾಗಿರುವ ವೈಯಕ್ತಿಕ ಮಾಹಿತಿಯ ಫೈಲ್ 2.3 ಜಿಬಿಯಷ್ಟುಗಾತ್ರ ಹೊಂದಿದೆ ಎಂದು ಅದರ ಸ್ಕ್ರೀನ್‌ಶಾಟ್ ಅನ್ನು ಕೂಡ ಶೇರ್ ಮಾಡಿದೆ.
ಸಾಮಾಜಿಕ ಜಾಲತಾಣ ಫೇಸ್‌ಬುಕ್ ಹಾಗೂ ಅಮೆರಿಕದ ವೆಂಚರ ಕ್ಯಾಪಿಟಲ್ ಸಂಸ್ಥೆ ಸೀಖೋರಿಯಾ ಅನುದಾನದಲ್ಲಿ ನಡೆಯುತ್ತಿರುವ ಭಾರತದ ಶೈಕ್ಷಣಿಕ ತಂತ್ರಜ್ಞಾನ ಸಂಸ್ಥೆ ಅನ್‌ಅಕಾಡೆಮಿಯ ಮಾಹಿತಿ ಹ್ಯಾಕ್ ಆಗಿದೆ ಎಂದು ಇದೇ ಸಂಸ್ಥೆ ಇತ್ತೀಚೆಗೆ ಹೇಳಿತ್ತು.