ನವದೆಹಲಿ(ಆ.16): ಹೈಸ್ಪೀಡ್‌ ಇಂಟರ್ನೆಟ್‌ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಮುಂದಿನ ಒಂದು ಸಾವಿರ ದಿನಗಳಲ್ಲಿ ದೇಶದ ಎಲ್ಲ ಆರು ಲಕ್ಷ ಹಳ್ಳಿಗಳಿಗೂ ಆಪ್ಟಿಕಲ್‌ ಫೈಬರ್‌ ಸಂಪರ್ಕ ಕಲ್ಪಿಸಲಾಗುವುದು. ಸಬ್‌ಮರೀನ್‌ ಫೈಬರ್‌ ಕೇಬಲ್‌ ಮೂಲಕ ಲಕ್ಷದ್ವೀಪಕ್ಕೂ ಇದೇ ಅವಧಿಯಲ್ಲಿ ಹೈ ಸ್ಪೀಡ್‌ ಇಂಟರ್ನೆಟ್‌ ಸಂಪರ್ಕ ಒದಗಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಅಂದರೆ 2014ರಲ್ಲಿ ದೇಶದ 5 ಡಜನ್‌ ಹಳ್ಳಿಗಳಿಗೆ ಮಾತ್ರ ಆಪ್ಟಿಕಲ್‌ ಫೈಬರ್‌ ಕೇಬಲ್‌ ಸಂಪರ್ಕವಿತ್ತು. ಕಳೆದ 5 ವರ್ಷಗಳಲ್ಲಿ 1.5 ಲಕ್ಷ ಹಳ್ಳಿಗಳನ್ನು ಸಂಪರ್ಕಿಸಲಾಗಿದೆ ಎಂದು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ತಿಳಿಸಿದರು.

ಹೈಸ್ಪೀಡ್‌ ಇಂಟರ್ನೆಟ್‌ ಒದಗಿಸುವ ಸಲುವಾಗಿ ಚೆನ್ನೈನಿಂದ ಅಂಡಮಾನ್‌- ನಿಕೋಬಾರ್‌ ದ್ವೀಪ ಸಮೂಹದ ನಡುವಣ ಆಪ್ಟಿಕಲ್‌ ಫೈಬರ್‌ ಕೇಬಲ್‌ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗಷ್ಟೇ ಉದ್ಘಾಟಿಸಿದ್ದರು.

ಸೈಬರ್‌ ಭದ್ರತೆಗೆ ಹೊಸ ನೀತಿ:

ಸೈಬರ್‌ ಭದ್ರತೆಗೆ ಸಂಬಂಧಿಸಿದ ಹೊಸ ನೀತಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಸೈಬರ್‌ ಜಗತ್ತಿನ ಮೇಲೆ ಭಾರತದ ಅವಲಂಬನೆ ಬದಲಾದ ಪರಿಸ್ಥಿತಿಯಲ್ಲಿ ಹೆಚ್ಚಾಗಿದೆ. ಅಭಿವೃದ್ಧಿ ಹಾಗೂ ಆರ್ಥಿಕತೆಗೆ ತನ್ನದೇ ಆದ ಅಪಾಯವನ್ನು ತಂದೊಡ್ಡಿದೆ ಎಂದು ತಿಳಿಸಿದರು.

Close