India@75: ಚಿತ್ರದುರ್ಗದ ತುರುವನೂರಲ್ಲಿ ಬ್ರಿಟಿಷರಿಗೆ ಈಚಲು ಸತ್ಯಾಗ್ರಹದ ಏಟು
- ತುರುವನೂರಲ್ಲಿ ಬ್ರಿಟಿಷರಿಗೆ ಈಚಲು ಸತ್ಯಾಗ್ರಹದ ಏಟು
- ಚಿತ್ರದುರ್ಗದ ತುರುವನೂರಲ್ಲಿ ಈಚಲು ಮರ ಕಡಿದು ಬ್ರಿಟಿಷರ ವಿರುದ್ಧ ಆಕ್ರೋಶ
- ಎಸ್.ನಿಜಲಿಂಗಪ್ಪ ಭಾಗಿಯಾಗಿದ್ದ ಸವಿನಯ ಕಾನೂನು ಭಂಗ ಚಳವಳಿ ಇದು
ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ತುರುವನೂರು ಈಚಲು ಸತ್ಯಾಗ್ರಹ ದೊಡ್ಡ ಹೆಗ್ಗುರುತಾಗಿ ಇತಿಹಾಸವನ್ನು ದಾಖಲಿಸಿದೆ. ಸವಿನಯ ಕಾನೂನು ಭಂಗ ಚಳವಳಿ ಎಂದೇ ಖ್ಯಾತಿ ಪಡೆದಿದ್ದ ಈಚಲು ಸತ್ಯಾಗ್ರಹ ಬ್ರಿಟಿಷ್ ಸರ್ಕಾರಕ್ಕೆ ಸಲ್ಲಿಕೆಯಾಗುತ್ತಿದ್ದ ಆದಾಯದ ಮೂಲಕ್ಕೆ ಕೊಡಲಿ ಪೆಟ್ಟು ನೀಡುವ ಮೂಲ ಉದ್ದೇಶಹೊಂದಿತ್ತು.
ಜಿನಗಿ ಹಳ್ಳ ಹರಿಯುವ ಸೆಲೆಗೆ ಅಂದಿನ ಚಿತ್ರದುರ್ಗ ಜಿಲ್ಲೆ(ದಾವಣಗೆರೆ, ಹರಿಹರ, ಜಗಳೂರು)ಸಾಕ್ಷಿ ಒದಗಿಸಿತ್ತು. ಹಳ್ಳದ ಎರಡೂ ದಂಡೆ ಸೇರಿದಂತೆ ಉತ್ತಮ ಜಲ ಮೂಲ ಇರುವ ಕಡೆ ಈಚಲು ಮರಗಳು ಬೆಳೆದು ನಿಂತಿದ್ದವು. ತುರುವನೂರಿನಲ್ಲಿ ಈಚಲು ಮರದ ಕಾಡೇ ಸೃಷ್ಟಿಯಾಗಿತ್ತು. ಬ್ರಿಟಿಷರಿಂದ ಮರಗಳ ಗುತ್ತಿಗೆ ಪಡೆದಿದ್ದ ಈಡಿಗರು ಸೇಂದಿ ಇಳಿಸಿ ಮಾರಾಟ ಮಾಡುತ್ತಿದ್ದರು. ಇದರ ಪ್ರಧಾನ ಆದಾಯ ಬ್ರಿಟಿಷ್ ಸರ್ಕಾರಕ್ಕೆ ಹೋಗುತ್ತಿತ್ತು.
ಕಾನೂನು ಓದಿದ್ದ ನಿಜಲಿಂಗಪ್ಪ ಗಾಂಧೀಜಿಯಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. 1937ರಲ್ಲಿ ಸಂಸ್ಥಾನಗಳಲ್ಲಿ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಸೋಲುಂಡಿತ್ತು. ಪುನಶ್ಚೇತನದ ಸಂಬಂಧ ರಚಿಸಲಾದ ಸಮಿತಿ ನಿಜಲಿಂಗಪ್ಪ ಅವರನ್ನು ನೇಮಿಸಿದಾಗ ಸಹಜವಾಗಿಯೇ ಹೋರಾಟದತ್ತ ನಿಜಲಿಂಗಪ್ಪ ಅವರ ಮನಸ್ಸು ಹರಿಯಿತು.
ಇಷ್ಟೊತ್ತಿಗೆ ಉತ್ತರ ಭಾರತದ ಬಾರ್ಡೋಲಿಯಲ್ಲಿ ನಡೆದ ಅರಣ್ಯ ಸತ್ರಾಗ್ರಹದಲ್ಲಿ ಪಾಲ್ಗೊಂಡಿದ್ದ ನಿಜಲಿಂಗಪ್ಪ ಅದೇ ಮಾದರಿ ಹೋರಾಟವನ್ನು ಚಿತ್ರದುರ್ಗ ಜಿಲ್ಲೆಯಲ್ಲಿಯೂ ಆರಂಭಿಸಿದರು. ಇದಕ್ಕಾಗಿ ತುರುವನೂರನ್ನು ಆಯ್ಕೆ ಮಾಡಿಕೊಳ್ಳಲಾಯಿತು.
ಇದು ಸವಿನಯ ಕಾನೂನು ಭಂಗ(ಸಿವಿಲ್ ಡಿಸ್‌ಒಬಿಡಿಯನ್ಸ್) ಚಳವಳಿ ಎಂದೇ ನಿಜಲಿಂಗಪ್ಪ ಎಲ್ಲರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಅಂದರೆ ನಿಮ್ಮ ಕಾನೂನನ್ನು ವಿನಯದಿಂದ ವಿರೋಧಿಸುತ್ತೇವೆ. ಅದೇ ರೀತಿ ಬಂದ ಶಿಕ್ಷೆಯನ್ನು ಅನುಭವಿಸುತ್ತೇವೆ ಎಂಬುದು ಸವಿನಯ ಕಾನೂನು ಭಂಗ ಚಳವಳಿಯ ಮೂಲ ತಿರುಳು.
1939ರಲ್ಲಿ ಈಚಲು ಸತ್ಯಾಗ್ರಹಕ್ಕೆ ನಿಜಲಿಂಗಪ್ಪ ಮುಂದಾದಾಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಎರಡನೇ ದಿನಕ್ಕೆ ನಿಜಲಿಂಗಪ್ಪ ಅವರನ್ನು ಬಂಧಿಸಿ ಕರೆದೊಯ್ದರು. ರಾಜ್ಯದ ಬೇರೆ ಕಡೆಯಿಂದ ಬರುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರರು ತುರುವನೂರಿಗೆ ಬರುವುದು, ಈಚಲು ಮರ ಕಡಿಯುವುದು, ಜೈಲು ಸೇರುವುದು ಮಾಮೂಲಾಗಿ ಹೋಗಿತ್ತು.
ಬಳ್ಳಾರಿಯ ಸಿದ್ದಮ್ಮ, ಎಸ್.ವಾಸುದೇವರಾವ್, ರಾಜಶೇಖರಯ್ಯ ಹಿರೇಮಠ, ನಾಗರತ್ನಮ್ಮ ಹಿರೇಮಠ, ಎನ್.ತಿಪ್ಪಣ್ಣ, ರಾಮರೆಡ್ಡಿ, ಎನ್.ಎನ್.ಚಂದೂರ್, ಪಿ.ಎಸ್.ಶಿವಮೂರ್ತಾಚಾರ್, ಈಚಲು ಸತ್ಯಾಗ್ರಹದಲ್ಲಿ ಪಾಲ್ಗೊಂಡ ಪ್ರಮುಖರು. ಆರಂಭದಲ್ಲಿ ಹದಿನೈದು ಮಂದಿ ಬಂಧಿಸಲಾಯಿತಾದರು ನಂತರ ಬಂಧಿತರ ಪ್ರಮಾಣ ಹೆಚ್ಚಾಯಿತು. ಈಚಲು ಸತ್ಯಾಗ್ರಹ ಸತತ ಒಂದು ವರ್ಷ ನಡೆಯಿತು. ಭಾರತಾದ್ಯಾಂತ ಚಳವಳಿ ಹೆಸರು ಮಾಡಿತು.
ಈಚಲು ಮರ ಕಡಿಯಲು ಹೋದ ಬಳ್ಳಾರಿ ಸಿದ್ದಮ್ಮ ಅವರಿಗೆ ಪೊಲೀಸರು ಬಾಸುಂಡೆ ಬರುವ ಹಾಗೆ ಬೆನ್ನಿಗೆ ಹೊಡೆದಿದ್ದರು. ರಕ್ತ ಬಂದರೂ ಆಕೆ ಹೋರಾಟ ನಿಲ್ಲಿಸಲಿಲ್ಲ. ರಾಜಶೇಖರಯ್ಯ ಹಿರೇಮಠ ಬೆಳಗ್ಗೆ ಮದುವೆಯಾಗಿ ಸಂಜೆ ಈಚಲು ಸತ್ಯಾಗ್ರಹದಲ್ಲಿ ಪಾಲ್ಗೊಂಡು ಜೈಲು ಪಾಲಾಗುತ್ತಾರೆ.
ಹೋಗುವುದು ಹೇಗೆ?
ತುರುವನೂರು ಹೋಬಳಿ ಕೇಂದ್ರವಾಗಿದ್ದು, ಚಿತ್ರದುರ್ಗದಿಂದ 18 ಕಿಮೀ ದೂರವಿದೆ.
ಚಿತ್ರದುರ್ಗದಿಂದ ಸಾರಿಗೆ ಬಸ್ ಮತ್ತು ಖಾಸಗಿ ವಾಹನಗಳ ಸೌಲಭ್ಯ ಇದೆ.
- ಚಿಕ್ಕಪ್ಪನಹಳ್ಳಿ ಷಣ್ಮುಖ