ವಿಶ್ವವೇ ಸಜ್ಜಾಗಿರುವ 5ನೇ ಅಂತಾರಾಷ್ಟ್ರೀಯ ಯೋಗದಿನ ಆಚರಣೆಗೆ ಭಾರತವೇ ಮೂಲ ಎಂಬುದು ಹೆಮ್ಮೆಯ ವಿಚಾರ. ಈ ಹಿನ್ನೆಲೆಯಲ್ಲಿ ಯೋಗಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿದ್ದು ಹೇಗೆ?, ಅನಂತರದಲ್ಲಿ ಯೋಗದ ಪ್ರಾಮುಖ್ಯತೆ ಹೇಗೆ ವಿಸ್ತರಿಸಿದೆ ಈ ಕುರಿತ ಕಿರು ಚಿತ್ರಣ ಇಲ್ಲಿದೆ.

ಯೋಗಕ್ಕೆ ವಿಶ್ವಸಂಸ್ಥೆಯ ಮಾನ್ಯತೆ ಕೊಡಿಸಿದ್ದು ಮೋದಿ

2014ರ ಡಿಸೆಂಬರ್‌ 14ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಯೋಗದ ಪ್ರಾಮುಖ್ಯತೆ ಕುರಿತು ಮಾತನಾಡಿ, ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುವ ಪ್ರಸ್ತಾಪ ಮುಂದಿಟ್ಟಿದ್ದರು. ಅನಂತರ ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿರುವ ಅಶೋಕ್‌ ಕುಮಾರ್‌ ಅಂತಾಷ್ಟ್ರೀಯ ಯೋಗ ದಿನಾಚರಣೆಯ ಕರಡು ಪ್ರಸ್ತಾವನೆ ಮಂಡಿಸಿದ್ದರು.

ವಿಶ್ವಸಂಸ್ಥೆಗೆ ಇದು ಐತಿಹಾಸಿಕ ಕ್ಷಣವಾಗಿದ್ದು, ಅದರ ಸದಸ್ಯ ರಾಷ್ಟ್ರಗಳು ಅಭೂತಪೂರ್ವ ಬೆಂಬಲ ಸೂಚಿಸಿದವು. ವಿಶ್ವಸಂಸ್ಥೆಯ 193 ರಾಷ್ಟ್ರಗಳ ಪೈಕಿ 177 ದೇಶಗಳು ಇದಕ್ಕೆ ಅನುಮೋದನೆ ನೀಡಿದವು. 2015ರ ಜೂನ್‌ 21ರಂದು ಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು ವಿಶ್ವದಾದ್ಯಂತ ಆಚರಿಸಲಾಯಿತು. ಅಲ್ಲಿಂದ ಪ್ರತಿ ವರ್ಷ ಜೂ.21ರಂದು ಅಂತಾರಾಷ್ಟ್ರೀಯ ಯೋಗದಿನವನ್ನಾಗಿಆಚರಿಸಲಾಗುತ್ತಿದೆ. ಇದಕ್ಕೆ ವಿಶ್ವಸಂಸ್ಥೆಯ ಮಾನ್ಯತೆ ಇದೆ.

ಮೊದಲ ಅಂತಾರಾಷ್ಟ್ರೀಯ ಯೋಗದಿನವೇ ವಿಶ್ವ ದಾಖಲೆ!

2015ರ ಜೂನ್‌ 21ರಂದು ಮೊಟ್ಟಮೊದಲ ಬಾರಿಗೆ ಅಂತಾರಾಷ್ಟ್ರೀಯ ಯೋಗ ದಿನಾಚಾರಣೆಯನ್ನು ದೆಹಲಿಯ ರಾಜಪಥದಲ್ಲಿ ಆಯೋಜಿಸಲಾಗಿತ್ತು. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 35,985 ಜನರು ಪಾಲ್ಗೊಂಡು 35 ನಿಮಿಷಗಳ ಕಾಲ 21 ಆಸನಗಳನ್ನು ಮಾಡಿದ್ದರು.

ಈ ವಿಶೇಷ ಕಾರ್ಯಕ್ರಮಕ್ಕೆ ವಿಶ್ವದ 84 ದೇಶಗಳಿಂದ ಅತಿಥಿಗಳೂ ಆಗಮಿಸಿ ದ್ದರು. 35,985 ಜನ ದೆಹಲಿಯ ರಾಜಪಥದ ವೇದಿಕೆಯಲ್ಲಿ ಯೋಗ ಮಾಡಿದ್ದು ಹಾಗೂ 84 ದೇಶಗಳಿಂದ ವಿವಿಧ ಗಣ್ಯರು ಬಾಗವಹಿಸಿದ್ದು ವಿಶ್ವದಾಖಲೆಯಾಗಿತ್ತು. ಇದರಲ್ಲಿ 47 ಇಸ್ಲಾಮಿಕ್‌ ರಾಷ್ಟ್ರಗಳು ಎನ್ನುವುದು ಮತ್ತೊಂದು ವಿಶೇಷ. 2015ರಲ್ಲಿ ದೇಶಾದ್ಯಂತ ಒಟ್ಟು 30,000 ಸ್ಥಳಗಳಲ್ಲಿ ಯೋಗ ಪ್ರದರ್ಶನ ನಡೆದಿತ್ತು. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳೂ ಸೇರಿ ಜಗತ್ತಿನ 175ಕ್ಕೂ ಹೆಚ್ಚು ರಾಷ್ಟ್ರಗಳು ಯೋಗ ದಿನವನ್ನು ಆಚರಣೆ ಮಾಡುವ ಮೂಲಕ ಯೋಗದ ಮಹತ್ವವನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದವು.

ಸಿಯಾಚಿನ್‌ನಿಂದ ದಕ್ಷಿಣ ಚೀನಾ ಸಮುದ್ರದವರೆಗೆ

2015ರ ಮೊಟ್ಟಮೊದಲ ಅಂತಾರಾಷ್ಟ್ರೀಯ ಯೋಗ ದಿನದಂದು ವಿಶ್ವದ ಅತಿ ಎತ್ತರ ರಣಾಂಗಣ ಸಿಯಾಚಿನ್‌ನಿಂದ ಹಿಡಿದು ದಕ್ಷಿಣ ಚೀನಾ ಸಮದ್ರದಲ್ಲಿನ ಸಮರ ನೌಕೆಗಳವರೆಗೂ ಭಾರತೀಯ ಸಶಸ್ತ್ರ ಪಡೆಗಳು ಯೋಗದಿನದಂದು ಸಕ್ರಿಯವಾಗಿ ಪಾಲ್ಗೊಂಡಿದ್ದವು.

ಸಮುದ್ರಮಟ್ಟಕ್ಕಿಂತ ಬರೋಬ್ಬರಿ 18,800 ಅಡಿ ಎತ್ತರದಲ್ಲಿರುವ ಸಿಯಾಚಿನ್‌ನ ನಹಿಮರಾಶಿಯ ಮೇಲೆ ಮ್ಯಾಟ್‌ ಹಾಕಿ ಯೋದರು ಯೋಗಸನ ಮಾಡಿರುವ ಅದ್ಭುತ ದೃಶ್ಯ ಕಣ್ಮನ ಸೆಳೆದಿತ್ತು. ಅನಂತರದ ವರ್ಷದಲ್ಲಿಯೂ ಸಿಯಾಚಿನ್‌ ಪ್ರದೇಶಗಳ್ಲಲಿಯೂ ಯೋಗಾಭ್ಯಾಸ ಮಾಡಲಾಗುತ್ತಿದೆ. ಕಳೆದ ವರ್ಷ ಸದ್ಗುರು ಜಗ್ಗಿ ವಾಸುದೇವ್‌ ಸಿಯಾಚಿನ್‌ಗೆ ತೆರಳಿ ಯೋಧರಿಗೆ ಯೋಗದ ಪಾಠ ಹೇಳಿಕೊಟ್ಟಿದ್ದರು.

1.05 ಲಕ್ಷ ಮಂದಿಯಿಂದ ಯೋಗಭ್ಯಾಸ

ರಾಜಸ್ಥಾನದ ಕೋಟಾ ನಗರದಲ್ಲಿ 2018ರಲ್ಲಿ ನಡೆದ 4ನೇ ಅಂತಾರಾಷ್ಟ್ರೀಯ ಯೋಗ ದಿನದಂದು ಬರೋಬ್ಬರಿ 1.05 ಲಕ್ಷ ಮಂದಿ ಯೋಗಾಸಕ್ತರು ಯೋಗಾಭ್ಯಾಸ ಮಾಡುವ ಮೂಲಕ ಏಕಕಾಲಕ್ಕೆ ಅತಿ ಹೆಚ್ಚು ಮಂದಿ ಯೋಗ ತಾಲೀಮು ನಡೆಸಿ ಗಿನ್ನೆಸ್‌ ದಾಖಲೆ ಬರೆದಿದ್ದಾರೆ.

ಅದಕ್ಕೂ ಮೊದಲು 2017ರಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನದಂದು ಮೈಸೂರಿನ ರೇಸ್‌ಕೋರ್ಸ್‌ ಮೈದಾನದಲ್ಲಿ ಆಯೋಜಿಸಲಾಗಿದ್ದ ಯೋಗ ಪ್ರದರ್ಶನದಲ್ಲಿ 54,101 ಜನರು ಏಕಕಾಲದಲ್ಲಿ ಭಾಗವಹಿಸಿ ಯೋಗ ಮಾಡಿದ್ದರು. ಅದು ಆ ವರ್ಷ ಗಿನ್ನೆಸ್‌ ದಾಖಲೆಗೆ ಸೇರಿತ್ತು. 2015 ಜೂನ್‌ 21ರಂದು ಮೋದಿ ಅವರ ನೇತೃತ್ವದಲ್ಲಿ ರಾಜಪಥದಲ್ಲಿ ನಡೆದ ಯೋಗದಲ್ಲಿ 35,985 ಮಂದಿ ಪಾಲ್ಗೊಂಡಿದ್ದರು.

ಅಮೆರಿಕದಲ್ಲಿ ಯೋಗಾಸಕ್ತರ ಸಂಖ್ಯೆ ಶೇ.80 ರಷ್ಟುಹೆಚ್ಚಳ

ಅಂತಾರಾಷ್ಟ್ರೀಯ ಯೋಗದಿನಕ್ಕೆ ಅಮೆರಿಕದ ಪ್ರಜೆಗಳು ವಾರದಿಂದಲೇ ತಯಾರಿ ನಡೆಸಿದ್ದರು. 5ನೇ ಅಂತಾಷ್ಟ್ರೀಯ ಯೋಗ ದಿನವನ್ನು ಅಮೆರಿಕದಲ್ಲಿ ಈ ಬಾರಿ ಜೂ.16ರಂದೇ ಆಚರಿಸಲಾಗಿದೆ. ಸಾವಿರಾರು ಜನರು ಒಟ್ಟಿಗೆ ಸೇರಿ ಯೋಗ ಮಾಡಿದರು.

ಅಮೆರಿಕದ 100ಕ್ಕೂ ಹೆಚ್ಚು ನಗರಗಳಲ್ಲಿ ಅಂತಾರಾಷ್ಟ್ರೀಯ ಯೋಗ ದಿನದಂದು ‘ಯೋಗಥಾನ್‌’ ಹಮ್ಮಿಕೊಳ್ಳಲಾಗಿತ್ತು. ಅಮೆರಿಕದ ರಾಜಧಾನಿ ವಾಷಿಂಗ್ಟನ್‌ನಲ್ಲಿ 2000ಕ್ಕೂ ಹೆಚ್ಚು ಯೋಗಾಸಕ್ತರು ಯೋಗಾಭ್ಯಾಸ ಮಾಡಿದರು. ವರದಿಯೊಂದರ ಪ್ರಕಾರ 2012-2015ರಿಂದೀಚೆಗೆ ಅಮೆರಿಕದಲ್ಲಿ ಯೋಗಾಸಕ್ತರ ಸಂಖ್ಯೆ ಶೇ.80 ರಷ್ಟುಹೆಚ್ಚಿದೆ.

ಸೌದಿಯಲ್ಲಿ ಯೋಗಕ್ಕೆ ಕ್ರೀಡಾ ಮಾನ್ಯತೆ

ಭಾರತದ ಅತ್ಯದ್ಭುತ ಆರೋಗ್ಯ ಕೊಡುಗೆ ಯೋಗಕ್ಕೆ ಮುಸ್ಲಿಂ ರಾಷ್ಟ್ರ ಸೌದಿ ಅರೇಬಿಯಾ 2017ರ ನವೆಂಬರ್‌ನಲ್ಲಿ ‘ಕ್ರೀಡಾ ಮಾನ್ಯತೆ’ ನೀಡಿದೆ. ಯೋಗವನ್ನು ಹಿಂದೂ ಧರ್ಮದೊಂದಿಗೆ ತಳಕುಹಾಕಿ ಅದರ ಕಲಿಕೆಗೆ ಭಾರತದ ನೆಲದಲ್ಲಿಯೇ ಕೆಲ ಮುಸ್ಲಿಂ ಧರ್ಮ ಗುರುಗಳು ವಿರೋಧ ವ್ಯಕ್ತಪಡಿಸಿದ್ದ ನಿದರ್ಶನಗಳಿರುವಾಗ, ಅಪ್ಪಟ ಮುಸ್ಲಿಂ ರಾಷ್ಟ್ರವೊಂದು ಯೋಗವನ್ನು ‘ಕ್ರೀಡಾ ಚಟುವಟಿಕೆ’ ಎಂದು ಪರಿಗಣಿಸಿರುವುದು ಮಹತ್ವದ ಬೆಳವಣಿಗೆ. ಈ ಮೂಲಕ ಯೋಗಕ್ಕೆ ಮಾನ್ಯತೆ ನೀಡಿದ ಮೊದಲ ಮುಸ್ಲಿಂ ರಾಷ್ಟ್ರ ಎಂಬ ಹೆಗ್ಗಳಿಕೆಗೂ ಸೌದಿ ಅರೇಬಿಯಾ ಪಾತ್ರವಾಗಿದೆ.