ಹಾಸನ [ನ.07]: ಶಾಸಕ ಪ್ರೀತಂಗೌಡ ಅವರು ದೊಡ್ಡ ಹೈಫೈ ಹೋಟೆಲ್‌ನಲ್ಲಿ ಕುಳಿತುಕೊಂಡು ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಎಚ್.ಪಿ. ಸ್ವರೂಪ್ ಗಂಭೀರವಾಗಿ ಆರೋಪಿಸಿದರು. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದಾಗಿ ಹೇಳುತ್ತಾರೆ. ನಾನಾ ಇಲಾಖೆ ಅಧಿಕಾರಿಗಳಿಂದ ದೊಡ್ಡ ದೊಡ್ಡ ಹೋಟೆಲ್‌ನಲ್ಲಿ ಕುಳಿತುಕೊಂಡು ಹಣ ವಸೂಲಿಗೆ ಇಳಿದಿರುವ ಬಗ್ಗೆ ಜನರು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು. 

ಶಾಸಕರು ಇಲ್ಲಸಲ್ಲದ ಸುಳ್ಳು ಆಶ್ವಾಸನೆಯನ್ನು ಬಿಟ್ಟು ದಾಖಲೆ ಸಹಿತ  ತಾವು ತಂದಿರುವ ಕಾಮಗಾರಿ ಹಾಗೂ ಅನುದಾನದ ಬಗ್ಗೆ ಮಾಹಿತಿ ನೀಡಬೇಕು ಎಂದು ಸವಾಲು ಹಾಕಿದರು. 

ನಗರದ ರಿಂಗ್ ರಸ್ತೆ-ಸಾಮಿಲ್ ಹೊರಗಿನ ರಸ್ತೆ ಕಾಮಗಾರಿಗಳಿಗೆ 2018 ನೇ ಸಾಲಿನಲ್ಲಿ ಬಿಡುಗಡೆಯಾಗಿದ ಅನುದಾನಕ್ಕೆ ಶಾಸಕ ಪ್ರೀತಂ ತಮ್ಮ ಹೆಸರು ಹಾಕಿಕೊಳ್ಳುತ್ತಿದ್ದಾರೆ. ಇಂತಹ ಕೀಳು ಮಟ್ಟದ ರಾಜಕೀಯ ಬಿಟ್ಟು ನಗರದ ಅಭಿವೃದ್ಧಿ ಕಡೆ ಗಮನ ಹರಿಸಿದರೇ ಅದಕ್ಕೆ ತಮ್ಮ ಬೆಂಬಲವು ಇದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಳೆದ ಮೈತ್ರಿ ಸರ್ಕಾರದ ಅವಧಿಯಲ್ಲಿ  ಮಾಜಿ ಸಚಿವ ರೇವಣ್ಣ ಅವರು ಜಿಲ್ಲೆಗೆತಂದಿರುವ ಅನುದಾನವನ್ನು ತಮ್ಮ ಸಾಧನೆ ಎಂಬಂತೆ ಬಿಂಬಿಸುತ್ತಿದ್ದಾರೆ. ನಗರದ ರಿಂಗ್ ರಸ್ತೆ ಕಾಮಗಾರಿಗೆ ತಾವು ಚಾಲನೆ ನೀಡಿರುವುದಾಗಿ ಹೇಳಿಕೆ ನೀಡುತ್ತಿದ್ದಾರೆ. ಆದರೆ, ರಿಂಗ್ ರಸ್ತೆ ಅಭಿವೃದ್ಧಿಗೆ ನಮ್ಮ ತಂದೆ ( ದಿ. ಎಚ್. ಎಸ್. ಪ್ರಕಾಶ್) ಶಾಸಕರಾಗಿದ್ದ ಅವಧಿಯಲ್ಲಿಯೇ ಟೆಂಡರ್ ನಡೆದಿದ್ದು. 

ಈ ಕಾಮಗಾರಿಯನ್ನು ಈಗ ಕೈಗೆತ್ತಿಕೊಳ್ಳುತ್ತಿದ್ದಾರೆಂದು ದೂರಿದರು. ಜೆಡಿಎಸ್ ಸಾಧನೆಯನ್ನು ಶಾಸಕರು ನಮ್ಮ ಸಾಧನೆ ಎಂದು ಹೇಳಿಕೊಳ್ಳುತ್ತಾಪ್ರಚಾರ ಪಡೆಯುತ್ತಿದ್ದಾರೆಂದು ವ್ಯಂಗ್ಯವಾಡಿದರು. ಶಾಸಕ ಪ್ರೀತಂ ಗೌಡ ಅವರು ಬಡವರ ಬಗ್ಗೆ ಗಮನ ನೀಡಲಿ. ಜಿಲ್ಲೆಯ ಹಲವು ಕಚೇರಿಗಳಲ್ಲಿ ಜನರು ನರಳುತ್ತಿದ್ದಾರೆ. ನಗರದ ನಾಡಕಚೇರಿ ಮುಂಭಾಗ ಜನರು ಸರತಿಯಲ್ಲಿ ನಿಂತಿದ್ದಾರೆ. ಈ ಬಗ್ಗೆ ಗಮನ ಹರಿಸಿ
ಅವರ ಸಮಸ್ಯೆ ಪರಿಹರಿಸಲು ಮುಂದಾಗದೆ ಜನರಿಗೆ ಮಂಕು ಬೂದಿ ಎರಚುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.