ಹೊಳೆನರಸೀಪುರ [ನ.11]: ಪಟ್ಟಣದ ನಾಲ್ಕನೇ ವಾರ್ಡಿಗೆ ನ.12 ರಂದು ನಡೆಯಲಿರುವ ಉಪ-ಚುನಾವಣೆಯ ಹಿನ್ನೆಲೆಯಲ್ಲಿ ದೋಷಪೂರಿತ ಮತದಾರರ ಪಟ್ಟಿ ಯನ್ನು ಸಿದ್ಧಪಡಿಸಿರುವ ಕುರಿತಂತೆ ಬಿಜೆಪಿ ಅಭ್ಯರ್ಥಿಯ ಆರೋಪದ ಮೇರೆಗೆ ಬಿಎಲ್‌ಒ ಆಗಿ ಕರ್ತವ್ಯ ನಿರ್ವಹಿಸಿದ್ದ ರೇಷ್ಮಾ ಭಾನು ಎಂಬುವವರನ್ನು ತಕ್ಷಣ ಅಮಾನತು ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಇಲ್ಲಿನ 4 ನೇ ವಾರ್ಡಿನಿಂದ ಸ್ಪರ್ಧಿಸಿ ಜಯಗಳಿಸಿದ್ದ ಸುದರ್ಶನ್ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನ.12ರಂದು ಚುನಾವಣೆ ಘೋಷಣೆಯಾಗಿತ್ತು. ಈ ಸಂದರ್ಭದಲ್ಲಿ ವಾರ್ಡಿನಲ್ಲಿಲ್ಲದ ನೂರಾರು ಮತದಾರರನ್ನು ಆಕ್ರಮವಾಗಿ ಪಟ್ಟಿಯಲ್ಲಿ ಸೇರಿಸಿ, ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯ ಗೆಲುವಿಗೆ ಸಹಕರಿಸಲು ನಿಂತಿರುವ ಕುರಿತಂತೆ ಬಿಜೆಪಿ ಅಭ್ಯರ್ಥಿ ಎಚ್.ಜೆ.ನಾಗರಾಜ್ ಮತ್ತು ಇಲ್ಲಿನ ಬಿಜೆಪಿ ಮುಖಂಡರು ಜಿಲ್ಲಾಧಿಕಾರಿಗಳಿಗೆ ದೂರುನೀಡಿದ್ದರು.

ಅಲ್ಲದೆ, ಸುಮಾರು30  ಮೃತ ಮತ ದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡದೆ ಉಳಿಸಿಕೊಂಡಿರುವ ಕುರಿತಂತೆಯೂ ಜಿಲ್ಲಾಧಿಕಾರಿಗಳಿಗೆ ನೀಡಿರುವ ದೂರಿನ ಪಟ್ಟಿಯಲ್ಲಿ ಸೇರಿಸಿದ್ದಲ್ಲದೇ, ನ. 12ರಂದು ಅಕ್ರಮ ಮತದಾನ ನಡೆಯುವ ಶಂಕೆಯನ್ನು ಇಲ್ಲಿನ ಬಿಜೆಪಿಗರು ವ್ಯಕ್ತಪಡಿಸಿದ್ದರು.  

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಹಿನ್ನೆಲೆಯಲ್ಲಿ ಉಪ- ವಿಭಾಗಾ ಧಿಕಾರಿ ನವೀನ್ ಭಟ್, ಹಾಸನ ತಹಸೀಲ್ದಾರ್ ಜಿ.ಮೇಘನಾ ಮತ್ತು 8 ಗ್ರಾಮ ಲೆಕ್ಕಾಧಿಕಾರಿಗಳ ತಂಡವು ಶನಿವಾರದಂದು 4 ನೇ ವಾರ್ಡಿಗೆ ಭೇಟಿ ನೀಡಿ ನಕಲಿ ಮತದಾರರ ಕುರಿತು ಮಾಹಿತಿ ಕಲೆ ಹಾಕಿದ್ದರು. ಮತದಾರರ ಪಟ್ಟಿಯಲ್ಲಿನ ಲೋಪದ ಕುರಿತಂತೆ ಬಿಎಲ್‌ಒ ಅವರ ಅಮಾನತು ಸೇರಿದಂತೆ, ಇದೇ ಪ್ರಕರಣದಲ್ಲಿನ ತಾಲೂಕು ಚುನಾವಣಾ ಶಾಖೆಯ ಸಿಬ್ಬಂದಿ, ತಹಸೀಲ್ದಾರ್ ಕೆ.ಆರ್.ಶ್ರೀನಿವಾಸ್, ಪುರಸಭೆ ಮುಖ್ಯಾಧಿಕಾರಿ ಬಿ.ಸಿ.ಬಸವರಾಜು ಅವರ ಮೇಲೂ ವಿಶೇಷ ತನಿಖಾಧಿಕಾರಿಯ ಮೂಲಕ ತನಿಖೆಯನ್ನು ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿರುವುದಾಗಿ ತಹಸೀಲ್ದಾರ್ ತಿಳಿಸಿದ್ದಾರೆ.