ಕಾಡಿನಿಂದ ಕೆಟ್ಟ ವಾಸನೆ, ನೋಡಲು ಹೋದವರಿಗೆ ಕಂಡಿದ್ದು 110 ಆನೆಗಳ ಕೊಳೆತ ಶವ!
ವಿಶ್ವವ್ಯಾಪಿ ಕೊರೋನಾ ವೈರಸ್ ಹೇಗೆ ಹರಡಿದೆ ಎಂದರೆ, ಪ್ರತಿಯೊಬ್ಬ ಮನುಷ್ಯನೂ ಇದರಿಂದ ಚಿಂತೆಗೀಡಾಗಿದ್ದಾನೆ. ಆದರೆ ಇದನ್ನು ಹೊರತುಪಡಿಸಿ ಇನ್ನೂ ಅನೇಕ ಶಾಕಿಂಗ್ ಘಟನೆಗಳು ಒಂದಾದ ಬಳಿಕ ಮತ್ತೊಂದರಂತೆ ನಡೆಯುತ್ತಿವೆ. ಹೌದು ದಕ್ಷಿಣ ಆಫ್ರಿಕಾದ ಬೋತ್ಸಾವನಾದಲ್ಲಿ ಕಳೆದ ಮಾರ್ಚ್‌ನಿಂದ ಈವರೆಗೆ ಒಟ್ಟು 110 ಆನೆಗಳ ಶವ ಪತ್ತೆಯಾಗಿದೆ. ಈ ಆನೆಗಳು ಹೇಗೆ ಸಾವನ್ನಪ್ಪುತ್ತಿವೆ ಎಂದು ಯಾರಿಗೂ ತಿಳಿದಿಲ್ಲ. ಆನೆಗಳ ದೇಹದಲ್ಲಿ ಯಾವುದೇ ವಿಷ ಸಿಕ್ಕಿಲ್ಲ, ಜೊತೆಗೆ ದಂತಗಳನ್ನೂ ತೆಗೆದಿಲ್ಲ. ಹೀಗಾಗಿ ಇದು ಬೇಟೆಗಾರರ ಕೆಲಸ ಎನ್ನುವ ಮಾತೇ ಬರುವುದಿಲ್ಲ. ಕಾಡಿನಲ್ಲಿ ಪತ್ತೆಯಾದ ಈ ಆನೆಗಳ ಶವ ಸದ್ಯ ಮತ್ತೊಮ್ಮೆ ಇಡೀ ಜಗತ್ತಿನೆಲ್ಲೆಡೆ ಸದ್ದು ಮಾಡುತ್ತಿದೆ. ಆನೆಗಳ ಶವ ಕೊಳೆತು ಅದರಿಂದ ಬಂದ ಕೆಟ್ಟ ವಾಸನೆಯಿಂದ ಈ ವಿಚಾರ ಬಹಿರಂಗಗೊಂಡಿದೆ.
ದಕ್ಷಿಣ ಆಫ್ರಿಕಾದ ಬೋತ್ಸಾವನಾದಲ್ಲಿ ಈ ಶಾಕಿಂಗ್ ಘಟನೆ ನಡೆದಿದೆ. ಇಲ್ಲಿನ ಒಕಾವೋಂಗೋ ಹೆಲ್ಟಾದಲ್ಲಿ ಮೇ ತಿಂಗಳಲ್ಲಿ 54 ಆನೆಗಳ ಶವ ಪತ್ತೆಯಾಗಿತ್ತು. ಒಂದೇ ಬಾರಿ ಇಷ್ಟು ಶವ ನೋಡಿ ಎಲ್ಲರೂ ಬೆಚ್ಚಿಬಿದ್ದಿದ್ದರು.
ಮಾರ್ಚ್ ತಿಂಗಳಲ್ಲೂ ಇದೇ ಸ್ಥಳದಲ್ಲಿ 44 ಆನೆಗಳ ಮೃತದೇಹ ಸಿಕ್ಕಿತ್ತು. ಅಲ್ಲದೇ ಫೆಬ್ರವರಿ ಅಂತ್ಯದಲ್ಲಿ 12 ಆನೆಗಳ ಶವ ಪತ್ತೆಯಾಗಿತ್ತು.
ನಿರಂತರವಾಗಿ ಸಿಗುತ್ತಿರುವ ಆನೆಗಳ ಈ ಶವದ ಹಿಂದಿನ ರಹಸ್ಯವೇನು ಎಂದು ಇವರೆಗೆ ಯಾರಿಗೂ ತಿಳಿದಿಲ್ಲ. ವೈಲ್ಡ್‌ಲೈಫ್ ಡೈರೆಕ್ಟರ್ ದಿಮಾಕಾತ್ಸೋ ನತಶೇಬೆ ಈ ವಿಚಾರ ಕುರಿತಾಗಿ ಪ್ರತಿಕ್ರಿಯಿಸುತ್ತಾ ಆನೆಗಳನ್ನು ಬೇಟೆಗಾಗಿ ಸಾಯಿಸಿಲ್ಲ ಎಂಬುವುದು ಖಚಿತ. ಯಾಕೆಂದರೆ ಆನೆಗಳ ದೇಹದ ಯಾವುದೇ ಅಂಗ ನಾಪತ್ತೆಯಾಗಿಲ್ಲ ಎಂದಿದ್ದಾರೆ.
ಇನ್ನು ಆನೆಗಳ ಶವ ಪರೀಕ್ಷೆ ವರದಿಯಲ್ಲಿ ಅವುಗಳಿಗೆ ವಿಷ ನೀಡಿಲ್ಲ ಎಂಬ ಅಂಶವೂ ತಿಳಿದು ಬಂದಿದೆ.
ಹೀಗಿರುವಾಗ ವಿಶ್ವದಲ್ಲಿ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ದೇಶದಲ್ಲಿ ಒಂದಾದ ಬಳಿಕ ಮತ್ತೊಂದರಂತೆ ಸಿಗುತ್ತಿರುವ ಆನೆಗಳ ಶವ ಜನರನ್ನು ಬೆಚ್ಚಿ ಬೀಳಿಸಿದೆ.
ಈವರೆಗೂ ಈ ಪ್ರದೇಶದಿಂದ ಬರೋಬ್ಬರಿ 110 ಆನೆಗಳ ಶವ ಪತ್ತೆಯಾಗಿದೆ. ಇವುಗಳು ಹೇಗೆ ಸಾವನ್ನಪ್ಪುತ್ತಿವೆ ಎಂಬ ವಿಚಾರವೇ ಈವರೆಗೆ ಬಯಲಾಗದಿರುವುದ ಎಲ್ಲಕ್ಕಿಂತ ಹೆಚ್ಚು ಅಚ್ಚರಿ ಮೂಡಿಸುವ ವಿಚಾರವಾಗಿದೆ.
ಇನ್ನು ಅರಣ್ಯಾಧಿಕಾರಿಗಳಿಗೆ ಈ 110 ಆನೆಗಳ ಶವ ಶೇ. 90ರಷ್ಟು ಕೊಳೆತ ಸ್ಥಿತಿಯಲ್ಲಿ ಸಿಕ್ಕಿದೆ. ಅಂದರೆ ಇವುಗಳು ತುಂಬಾ ಸಮಯದ ಮೊದಲೇ ಸಾವನ್ನಪ್ಪಿವೆ ಎಂಬುವುದು ಸ್ಪಷ್ಟ. ಕೊರೋನಾ ಆತಂಕದ ನಡುವೆ ಆನೆಗಳ ನಡುವೆ ಹಬ್ಬಿಕೊಂಡಿರುವ ಈ ರಹಸ್ಯಮಯ ರೋಗ ಜನರಲ್ಲಿ ಆತಂಕ ಹುಟ್ಟಿಸಿದೆ.