ತುಮಕೂರು ರೈಲು ನಿಲ್ದಾಣದ ಹೆಸರು ಬದಲಾವಣೆ ಪ್ರಸ್ತಾವನೆಗೆ ಅನುಮೋದನೆ ನೀಡಿದ ಸರ್ಕಾರ
Tumakuru Railway Station: ತುಮಕೂರು ರೈಲು ನಿಲ್ದಾಣದ ಹೆಸರನ್ನು ಮರುನಾಮಕರಣ ಮಾಡಲು ಕರ್ನಾಟಕ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ.

ತುಮಕೂರು ರೈಲು ನಿಲ್ದಾಣದ ಹೆಸರು ಬದಲಾವಣೆಯ ಪ್ರಸ್ತಾವನೆ ಕರ್ನಾಟಕ ಸರ್ಕಾರ ಅನುಮೋದನೆಯನ್ನು ನೀಡಿದೆ. ತುಮಕೂರು ನಿಲ್ದಾಣ ಭಾರತೀಯ ರೈಲ್ವೆಯ ನೈಋತ್ಯ ವಲಯಕ್ಕೆ ಒಳಪಡುತ್ತದೆ.

ತುಮಕೂರು ರೈಲು ನಿಲ್ದಾಣವನ್ನು 'TK' ಎಂಬ ಕೋಡ್ ಹೆಸರಿನೊಂದಿಗೆ ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ರೈಲು ನಿಲ್ದಾಣ ಎಂದು ಮರುನಾಮಕರಣ ಮಾಡುವ ಪ್ರಸ್ತಾಪವನ್ನು ಕರ್ನಾಟಕ ಸರ್ಕಾರ ಅನುಮೋದಿಸಿದೆ. ಈ ಸಂಬಂಧ ಏಪ್ರಿಲ್ 8ರಂದು ಗೃಹ ಸಚಿವಾಲಯಕ್ಕೆ ರಾಜ್ಯ ಸರ್ಕಾರ ಪತ್ರ ಬರೆದು, ಪ್ರಸ್ತಾವನೆಯನ್ನು ಸಕಾರಾತ್ಮಕವಾಗಿ ಪರಿಗಣಿಸಬೇಕು. ಈ ನಿಟ್ಟಿನಲ್ಲಿ ಅಗತ್ಯ ಅನುಮೋದನೆಗಳನ್ನು ಪಡೆಯಲು ಅನುಕೂಲ ಮಾಡಿಕೊಡುವಂತೆ ವಿನಂತಿಸಿಕೊಂಡಿದೆ.

ಶ್ರೀ ಸಿದ್ದಗಂಗಾ ರಾಜ್ಯದಲ್ಲಿರುವ ಪ್ರಮುಖ ಮಠಗಳಲ್ಲಿ ಒಂದಾಗಿದೆ. ಈ ಮಠದಲ್ಲಿ ಸೌಲಭ್ಯ ವಂಚಿತರಿಗಗೆ ಉಚಿತವಾಗಿ ಆಹಾರ, ವಸತಿ ಮತ್ತು ಶಿಕ್ಷಣವನ್ನು ಒದಗಿಸುವ ಸೇವೆಯನ್ನು ಮಾಡಿಕೊಂಡು ಬರುತ್ತಿದೆ. 1930ರಲ್ಲಿ ಈ ಮಠಕ್ಕೆ ಪದ್ಮಭೂಷಣ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳು ಪೀಠಾಧಿಪತಿಗಳಾದರು. ಅಂದಿನಿಂದ 87 ವರ್ಷಗಳ ಕಾಲ ಸಮಾಜಕ್ಕೆ ಸೇವೆ ಸಲ್ಲಿಸಿಕೊಂಡು ಬಂದಿದ್ದರು. ಶಿವಕುಮಾರ ಮಹಾಸ್ವಾಮೀಜಿಗಳನ್ನು ನಡೆದಾಡುವ ದೇವರು ಎಂದು ಕರೆಯಲಾಗುತ್ತಿತ್ತು.

ರಾಜ್ಯದ ಎಲ್ಲಾ ಸಮುದಾಯಗಳಿಗೆ ಸೇರಿದ ಜನರ ಹೃದಯದಲ್ಲಿ ಶ್ರೀ ಸಿದ್ದಗಂಗಾ ಮಠವು ಬಹಳ ಪ್ರಮುಖ ಸ್ಥಾನವನ್ನು ಹೊಂದಿದೆ ಎಂಬುದನ್ನು ಎತ್ತಿ ತೋರಿಸಿದ ಅವರು, ಹಲವು ದಶಕಗಳಿಂದ ಸಿದ್ದಗಂಗಾ ಮಠವು ವಂಚಿತರು, ಸೌಲಭ್ಯ ವಂಚಿತರು ಮತ್ತು ದೀನದಲಿತರಿಗೆ ಆಹಾರ, ವಸತಿ ಮತ್ತು ಶಿಕ್ಷಣವನ್ನು ಒದಗಿಸುವ ಮೂಲಕ ಅವರ ಅಭ್ಯುದಯಕ್ಕಾಗಿ ಉತ್ತಮ ಸೇವೆಯನ್ನು ನೀಡುತ್ತಿದೆ.

ಭಾರತ ಸರ್ಕಾರದ ಗೃಹ ಸಚಿವಾಲಯವು ಈ ಪ್ರಸ್ತಾವನೆಯನ್ನು ಸಕಾರಾತ್ಮಕವಾಗಿ ಪರಿಗಣಿಸುವಂತೆ ಕರ್ನಾಟಕ ಸರ್ಕಾರ ಪತ್ರದ ಮೂಲಕ ಮನವಿ ಮಾಡಿಕೊಂಡಿದೆ. ಕರ್ನಾಟಕ ರಾಜ್ಯ ಸರ್ಕಾರವು ಪ್ರಸ್ತಾಪಿಸಿದಂತೆ ತುಮಕೂರು ರೈಲು ನಿಲ್ದಾಣವನ್ನು ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ರೈಲು ನಿಲ್ದಾಣ ಎಂದು ಮರುನಾಮಕರಣ ಮಾಡಲು ಅಗತ್ಯ ಅನುಮೋದನೆಗಳು ಮತ್ತು ಅಧಿಸೂಚನೆಯನ್ನು ಹೊರಡಿಸಲು ವಿನಂತಿಸಲಾಗಿದೆ.

ಈ ಹಿಂದೆ ತುಮಕೂರು ನಗರದ ರೈಲ್ವೆ ನಿಲ್ದಾಣಕ್ಕೆ ಡಾ.ಶಿವಕುಮಾರ ಸ್ವಾಮೀಜಿ ಹೆಸರು ಮತ್ತು ಕ್ಯಾತ್ಸಂದ್ರ ನಿಲ್ದಾಣಕ್ಕೆ ಸಿದ್ಧಗಂಗಾ ನಿಲ್ದಾಣ ಎಂದು ಹೆಸರಿಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮತಿಸಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.

ಗುಬ್ಬಿ ನಿಲ್ದಾಣಕ್ಕೆ ಚನ್ನಬಸವೇಶ್ವರ ಸ್ವಾಮಿ ಹೆಸರು
ಗುಬ್ಬಿ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು ₹16.73 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, ಈಗಾಗಲೇ ನೀಲಿ ನಕ್ಷೆ ಸಿದ್ದಪಡಿಸಲಾಗಿದೆ. ರೈಲ್ವೆ ನಿಲ್ದಾಣದ ಕಾಮಗಾರಿ ಪೂರ್ಣಗೊಂಡ ಬಳಿಕ ನಿಲ್ದಾಣಕ್ಕೆ ಚನ್ನಬಸವೇಶ್ವರ ಸ್ವಾಮಿಗಳ ಹೆಸರನ್ನು ನಾಮಕರಣ ಮಾಡಲಾಗುವುದು ಎಂದು ಕೇಂದ್ರ ಜಲಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು. ರೈಲು ನಿಲ್ದಾಣದ ಹೆಸರು ಬದಲಾಯಿಸುವಾಗ ಎಲ್ಲ ಸಮುದಾಯದ ಧಾರ್ಮಿಕ, ಸಾಂಸ್ಕೃತಿಕ ಅಸ್ಮಿತೆಗೆ ಅವಕಾಶ ಕೊಡಲಿ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.