ತುಮಕೂರು ಸುಂದರಿಗೆ ಕಂಟಕವಾದ ರೀಲ್ಸ್; ಪ್ರೇಮಿಯ ಒಂದು ಮಾತಿಗೆ ಪ್ರಾಣವನ್ನೇ ಬಿಟ್ಟಳು!
ಇನ್‌ಸ್ಟಾಗ್ರಾಮ್ ರೀಲ್ಸ್‌ನಿಂದ ಆರಂಭವಾದ ಪ್ರೇಮಿಗಳ ಜಗಳ ಯುವತಿಯ ಆತ್ಮಹತ್ಯೆಯಲ್ಲಿ ಅಂತ್ಯವಾಗಿದೆ. ತುಮಕೂರಿನಲ್ಲಿ ನಡೆದ ಈ ಘಟನೆಯಲ್ಲಿ ಚೈತನ್ಯ ಎಂಬ ಯುವತಿ ನೇಣಿಗೆ ಶರಣಾಗಿದ್ದಾಳೆ.

ಇನ್‌ಸ್ಟಾಗ್ರಾಮ್ ರೀಲ್ಸ್‌ನಿಂದ ಪ್ರೇಮಿಗಳ ನಡುವೆ ಆರಂಭವಾದ ಜಗಳ, ಪ್ರೇಯಸಿಯ ದುರಂತ ಸಾವಿನಿಂದ ಅಂತ್ಯವಾಗಿದೆ. ಪ್ರಿಯಕರನ ಜೊತೆ ಜಗಳ ಮಾಡಿದ ಬಳಿಕ ಯುವತಿ ಚೈತನ್ಯ(22) ನೇಣಿಗೆ ಶರಣಾಗಿದ್ದಾಳೆ.
ತುಮಕೂರು ಗ್ರಾಮಾಂತರ ತಾಲೂಕು ಹೊಸಹಳ್ಳಿ ನಿವಾಸಿ ಚೈತನ್ಯ. ನೆನ್ನೆ ರಾತ್ರಿ 10 ಘಂಟೆ ಸುಮಾರಿಗೆ ಘಟನೆ ನಡೆದಿದೆ. ಮೃತ ಯುವತಿ ಚೈತನ್ಯ ತಾಯಿ ಜೊತೆ ವಾಸವಿದ್ದಳು.
ಯುವತಿ ಚೈತನ್ಯ ಕಾಲೇಜಿನಲ್ಲಿ ಫೈನಲ್ ಇಯರ್ ಡಿಗ್ರಿ ವ್ಯಾಸಂಗ ಮಾಡುತಿದ್ದಳು. ಜೊತೆಗೆ ಮಾಡಲಿಂಗ್‌ನ ಮೇಕಪ್ ಆರ್ಟಿಸ್ಟ್ ಸಹ ಆಗಿದ್ದಳು.
ತಮ್ಮ ಪಕ್ಕದ ಊರಿನ ವಿಜಯ್ ಕುಮಾರ್ ಜೊತೆ ಪ್ರೀತಿಯಲ್ಲಿದ್ದಳು. ವಿಜಯ್ ಕುಮಾರ್ ವೃತ್ತಿಯಲ್ಲಿ ಕಾರು ಚಾಲಕನಾಗಿದ್ದಾನೆ. ಕಳೆದ ಕೆಲವು ವರ್ಷಗಳಿಂದ ಮನೆಯವರಿಗೆ ಗೊತ್ತಾಗದಂತೆ ಕದ್ದು ಮುಚ್ಚಿ ಪ್ರೀತಿಸುತ್ತಿದ್ದರು.
ಇನ್ನು ವಿಜಯ್ ಕುಮಾರ್ ಮತ್ತು ಚೈತನ್ಯಳ ಪ್ರೀತಿ ವಿಚಾರವನ್ನು ತಿಳಿದ ಯುವತಿಯ ಮಾವ ಆಕೆಗೆ ಎಚ್ಚರಿಕೆಯನ್ನು ನೀಡಿದ್ದರು. ನೀನು ಪ್ರೀತಿ-ಪ್ರೇಮ ಇದೆಲ್ಲ ಬಿಟ್ಟುಬಿಡುವಂತೆ ತಿಳಿಸಿದ್ದರು.
ನಿನ್ನೆ ಚೈತನ್ಯ ರೀಲ್ಸ್ ವೊಂದನ್ನು ಸ್ಟೇಟಸ್ ನಲ್ಲಿ ಅಪ್ಲೋಡ್ ಮಾಡಿದ್ದಳು. ಇದೇ ವಿಚಾರವಾಗಿ ಪ್ರಶ್ನಿಸಲು ರಾತ್ರಿ ಚೈತನ್ಯ ಮನೆ ಬಳಿಗೆ ವಿಜಯ್ ಬಂದಿದ್ದನು.
ಆಗ ಚೈತನ್ಯಳ ತಾಯಿ ಸೌಭಾಗ್ಯಮ್ಮ ಮನೆಯ ರೂಮಿನಲ್ಲಿದ್ದರು. ತಾಯಿ ಇದ್ದ ರೂಮಿನ ಬಾಗಿಲನ್ನು ಲಾಕ್ ಮಾಡಿ ಕಿಟಕಿಯ ಬಳಿ ಇಬ್ಬರೂ ಜಗಳ ಮಾಡಲಾರಂಭಿಸಿದ್ದಾರೆ.
ವಿಜಯ್ ಕುಮಾರ್ ಜಗಳ ಮಾಡಿಕೊಂಡು ಹೋದ ಬಳಿಕ ಚೈತನ್ಯಾ ಸಾಯುವುದಾಗಿ ಕರೆ ಮಾಡಿ ಹೇಳಿದ್ದಾಳೆ. ಈ ವಿಚಾರವನ್ನು ವಿಜಯ್ ಕೂಡಲೇ ಚೈತನ್ಯಳ ಸಂಬಂಧಿಗೆ ಕರೆ ಮಾಡಿ ತಿಳಿಸಿದ್ದಾನೆ.
ಚೈತನ್ಯಾ ಸಾವಿಗೆ ಪ್ರಯತ್ನಿಸುವ ಮಾಹಿತಿ ತಿಳಿಯುತ್ತಿದ್ದಂತೆ ಸಂಬಂಧಿಕರು ಬಂದು ನೋಡಿದಾಗ ಯುವತಿ ನೇಣಿಗೆ ಶರಣಾಗಿ ಮೃತಪಟ್ಟಿರುವುದು ಖಚಿತವಾಗಿದೆ.
ಈ ಘಟನೆ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಚೈತನ್ಯಾಳ ಸಾವಿಗೆ ಆಕೆಯ ಪ್ರೇಮಿ ವಿಜಯ್ ಕುಮಾರ ಕಾರಣ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ತುಮಕೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸದ್ಯ ವಿಜಯ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.