ಕರ್ನಾಟಕಕ್ಕೆ ಬರಲು ನನಗೆ ಇಷ್ಟ: ರಾಷ್ಟ್ರಪತಿ ಕೋವಿಂದ್
ಚಾಮರಾಜನಗರ(ಅ.08): ನನಗೆ ಕರ್ನಾಟಕಕ್ಕೆ ಬರಲು ತುಂಬಾ ಇಷ್ಟ, ನಿಮ್ಮ ಜೊತೆ ಇರಲು ತುಂಬಾ ಸಂತೋಷ’. ಹೀಗೆಂದು ಕನ್ನಡದಲ್ಲೇ ಹೇಳಿದ್ದು ರಾಷ್ಟ್ರಪತಿ ರಾಮನಾಥ್ ಕೋವಿಂದ್.

ಚಾಮರಾಜನಗರ ವೈದ್ಯಕೀಯ ಕಾಲೇಜಿನ(ಸಿಮ್ಸ್) 450 ಹಾಸಿಗೆಗಳ ಬೋಧನಾ ಆಸ್ಪತ್ರೆಯನ್ನು ಗುರುವಾರ ಲೋಕಾರ್ಪಣೆ ಮಾಡಿದ ರಾಷ್ಟ್ರಪತಿ ಅವರು ಕನ್ನಡದಲ್ಲೇ ಮಾತನಾಡಿದ ಗಮನ ಸೆಳೆದರು. ನವರಾತ್ರಿ ಆರಂಭದ ಶುಭ ಸಂದರ್ಭದಲ್ಲಿ ಆಸ್ಪತ್ರೆ ಉದ್ಘಾಟನೆಯಾಗುತ್ತಿದ್ದು ಎಲ್ಲರಿಗೂ ಈ ಕೇಂದ್ರ ಉತ್ತಮ ಸೇವೆ ನೀಡಲೆಂದು ಶುಭ ಹಾರೈಸಿದ ಕೋವಿಂದ್
ಚಾಮರಾಜ ಒಡೆಯರ್ ಮತ್ತು ಚಾಮರಾಜೇಶ್ವರ ದೇವರನ್ನು ನೆನೆದ ಕೋವಿಂದ್, ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಆಡಳಿತ ಮಾಡಿದವರು ಮೈಸೂರು ಮಹಾರಾಜರು. ಚಾಮರಾಜೇಂದ್ರ ಒಡೆಯರ್ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಟ್ಟು 1881ರಲ್ಲಿ ಬಾಲಕಿಯರ ಶಾಲೆ ಆರಂಭಿಸಿದರು. ಸ್ವಾಮಿ ವಿವೇಕಾನಂದರು ಸರ್ವ ಧರ್ಮ ಸಮ್ಮೇಳನಕ್ಕೆ ತೆರಳಲು ನೆರವಾದರು. ಜಯಚಾಮರಾಜ ಒಡೆಯರ್ ಸ್ವಾತಂತ್ರ್ಯ ಭಾರತಕ್ಕೆ ಸಂಸ್ಥಾನ ಸೇರಿಸಿದ ಮೊದಲ ರಾಜರು. ವೈದ್ಯಕೀಯ ವಿದ್ಯಾರ್ಥಿಗಳು ಮೈಸೂರು ಮಹಾರಾಜರ ದೃಷ್ಟಿಕೋನದಂತೆ ಮಾನವೀಯ ಮೌಲ್ಯ, ಸೇವಾ ಬದ್ಧತೆ ಇಟ್ಟುಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದ ರಾಷ್ಟ್ರಪತಿ ರಾಮನಾಥ್ ಕೋವಿಂದ್
ಈ ವೇಳೆ ಸಿಮ್ಸ್ ಕಟ್ಟಡದ ಚಿತ್ರ ಇರುವ ಸ್ಮರಣಿಕೆ, ರೇಷ್ಮೆ ಶಾಲನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಅವರ ಪತ್ನಿ ಸವಿತಾ ಕೋವಿಂದ್ ಅವರಿಗೆ ನೀಡಿ ಗೌರವಿಸಲಾಯಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಎಸ್.ಟಿ.ಸೋಮಶೇಖರ್ ಇದ್ದರು.
ಚಾಮರಾಜನಗರಕ್ಕೆ ಬರಬೇಕಾದ್ದು ನನ್ನ ಕರ್ತವ್ಯ. ಆದರೆ, ನಾನು ಬರದಿದ್ದರೇ ಕರ್ತವ್ಯ ಲೋಪವಾಗುತ್ತಿತ್ತು. ಕರ್ತವ್ಯ ಲೋಪವಾಗಲು ನಾನೆಂದು ಒಪ್ಪಲ್ಲ, ಮುಂದಿನ ದಿನಗಳಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಗೆ ಬಂದು ಪ್ರಗತಿ ಪರಿಶೀಲನಾ ಸಭೆ ನಡೆಸಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಜಿಲ್ಲೆ ಬಗ್ಗೆ ಇರುವ ನಂಬಿಕೆಗಳು, ಅಭಿಪ್ರಾಯಗಳು ಅವರವರಿಗೆ ಬಿಟ್ಟದ್ದು, ದೇವರ ಸೃಷ್ಟಿಯಲ್ಲಿ ಪ್ರತಿಯೊಂದು ಘಳಿಗೆ, ಸ್ಥಳವೂ ಒಳ್ಳೆಯವೇ, ಅವನ ಸೃಷ್ಟಿಯಲ್ಲಿ ಕೆಟ್ಟದ್ದು ಎಂಬುದಿಲ್ಲ, ಕೆಟ್ಟದ್ದು ಎಂಬ ಸಂಕುಚಿತ ಮನೋಭಾವದಿಂದ ಹೊರಬಂದಾಗ ಮಾತ್ರ ಆರೋಗ್ಯ, ವೈಜ್ಞಾನಿಕ, ತರ್ಕ ಬದ್ಧವಾದ ಯುವ ಸಮಾಜ ಸ್ಥಾಪಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟ ಸಿಎಂ
ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ನಾಯಕತ್ವದಿಂದಾಗಿ ಆರೋಗ್ಯ ಕ್ಷೇತ್ರದಲ್ಲಿ ಭಾರತ ಗಣನೀಯ ಸಾಧನೆ ಮಾಡುತ್ತಿದ್ದು, 7 ವರ್ಷದಲ್ಲಿ ದೇಶಾದ್ಯಂತ 152 ಮೆಡಿಕಲ್ ಕಾಲೇಜು ತಲೆ ಎತ್ತಿವೆ. 30,000 ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆದು ಹೊರಹೊಮ್ಮುತ್ತಿದ್ದು ಶೇ.50 ರಷ್ಟುವೈದ್ಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಾಗಿದೆ ಎಂದು ತಿಳಿಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ