ಕೊರೋನಾ ತಡೆಗೆ ಕಾಂಗ್ರೆಸ್ ‘ಆರೋಗ್ಯ ಸಹಾಯ ಹಸ್ತ’
ಬೆಂಗಳೂರು(ಜು.24): ರಾಜ್ಯದಲ್ಲಿ ಕೊರೋನಾ ಸೋಂಕು ತಡೆಯಲು ಕಾಂಗ್ರೆಸ್ ಹಮ್ಮಿಕೊಂಡಿರುವ ‘ಆರೋಗ್ಯ ಸಹಾಯ ಹಸ್ತ’ ಕಾರ್ಯಕ್ರಮವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ.
ಗುರುವಾರ ಬಿಟಿಎಂ ಲೇಔಟ್‌ನ ಸದ್ದುಗುಂಟೆಪಾಳ್ಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಾಯೋಗಿಕವಾಗಿ ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಪ್ರತಿ ಪಂಚಾಯತಿ ಮತ್ತು ವಾರ್ಡ್‌ಗಳಲ್ಲಿ ಇಬ್ಬರನ್ನು ಆಯ್ಕೆ ಮಾಡಿ ಅವರನ್ನು ಕೊರೋನಾ ಕಾಂಗ್ರೆಸ್ ವಾರಿಯರ್ ಎಂದು ಕಳುಹಿಸಿಕೊಡುತ್ತೇವೆ. ರಾಜ್ಯಾದ್ಯಂತ 15 ಸಾವಿರ ಯುವಕರನ್ನು ಕಾಂಗ್ರೆಸ್ ವಾರಿಯರ್ಸ್ ಎಂದು ಗುರುತಿಸಲಾಗಿದೆ. ಈ ವಾರಿಯರ್ಸ್‌ಗಳ ಆರೋಗ್ಯ ರಕ್ಷಣೆಗೆ ಕಾಂಗ್ರೆಸ್ ಅಗತ್ಯ ಕ್ರಮ ಕೈಗೊಂಡಿದ್ದು ಇವರಿಗೆ ವಿಮೆ ಮಾಡಿಸಲಾಗುತ್ತಿದೆ. ಕೊರೋನಾ ಸೋಂಕು ತಡೆಯುವಲ್ಲಿ ಮುನ್ನೆಚ್ಚರಿಕೆ ಕ್ರಮಗಳು ಮತ್ತು ದೇಹದ ಉಷ್ಣಾಂಶ ಇತ್ಯಾದಿಗಳನ್ನು ತಪಾಸಣೆ ಮಾಡಿ ಜಾಗೃತಿ ಮೂಡಿಸಲಿದ್ದಾರೆ. ಇದೇ ಆರೋಗ್ಯ ಹಸ್ತ ಎಂದು ಅವರು ಹೇಳಿದರು.
ಆರೋಗ್ಯ ಹಸ್ತ ಕಾರ್ಯಕ್ರಮ ಜನರ ಬಳಿಗೆ ಹೋಗಬೇಕು. ಕಾಂಗ್ರೆಸ್ ಪಕ್ಷ ಕೇವಲ ಅಧಿಕಾರಕ್ಕೆ ಮಾತ್ರವಲ್ಲ ಕಷ್ಟದಲ್ಲಿರುವ ಜನರ ಸೇವೆ ಮಾಡಬೇಕೆಂದು ಈ ಕಾರ್ಯಕ್ರಮ ರೂಪಿಸಲಾಗಿದೆ. ವೈದ್ಯ ಘಟಕ ಹಾಗೂ ಮಾಜಿ ಆರೋಗ್ಯ ಸಚಿವರ ಜತೆ ಚರ್ಚಿಸಿ ಈ ಕಾರ್ಯಕ್ರಮ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.
ಕೆಪಿಸಿಸಿ ವೈದ್ಯರ ಘಟಕ ಆರೋಗ್ಯ ಹಸ್ತ ಕಾರ್ಯಕ್ರಮದ ಮೂಲಕ ಇಡೀ ರಾಜ್ಯಕ್ಕೆ ಒಂದು ಹೊಸ ಅಧ್ಯಾಯ ಬರೆದಿದೆ. ಬಿಟಿಎಂ ಹಾಗೂ ಜಯನಗರದಲ್ಲಿ ಈ ಪ್ರಾಯೋಗಿಕ ಕಾರ್ಯಕ್ರಮ ಮಾಡಿ ಅದನ್ನು ಇಡೀ ರಾಜ್ಯಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಲಾಗಿದೆ. ಕೆಪಿಸಿಸಿಗೆ ಕೋವಿಡ್ ನಿರ್ವಹಣೆಗೆಂದು ಶಾಸಕರುಗಳಿಂದ 1.5 ಕೋಟಿ ಹಣ ದೇಣಿಗೆಯಾಗಿ ಬಂದಿದ್ದು, ಈ ಹಣವನ್ನು ಆರೋಗ್ಯ ಹಸ್ತ ಕಾರ್ಯಕ್ರಮಕ್ಕಾಗಿ ಉಪಯೋಗಿಸಲಾಗುವುದು ಎಂದು ತಿಳಿಸಿದರು.
ಕಷ್ಟದ ಸಮಯದಲ್ಲಿ ಎಲ್ಲಾ ವರ್ಗದವರ ನೆರವಿಗೆ ನಿಲ್ಲಬೇಕು ಎಂದು ಈಗಾಗಲೇ ಪಕ್ಷದ ವೈದ್ಯರ ಘಟಕಕ್ಕೆ ಸೂಚನೆ ನೀಡಲಾಗಿದೆ. ಮನುಷ್ಯನಿಗೆ ಆರೋಗ್ಯ ಭಾಗ್ಯ ಕೊಡುವುದು ಸರ್ಕಾರದ ಕರ್ತವ್ಯ. ಆದರೆ, ಕೋವಿಡ್ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇಂದಿನ ಈ ಪರಿಸ್ಥಿತಿಗೆ ಸರ್ಕಾರದ ತಪ್ಪು ತೀರ್ಮಾನಗಳೇ ಕಾರಣ ಎಂದು ಆರೋಪಿಸಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಅಧ್ಯಕ್ಷ ದಿನೇಶ್‌ಗುಂಡೂರಾವ್, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಕೃಷ್ಣಬೈರೇಗೌಡ, ಶಾಸಕರಾದ ಸೌಮ್ಯರೆಡ್ಡಿ, ಯು.ಬಿ.ವೆಂಕಟೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸದ್ದುಗುಂಟೆಪಾಳ್ಯದಲ್ಲಿ ನಡೆದ ಆರೋಗ್ಯ ಹಸ್ತ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಮರೆಯಾಗಿತ್ತು. ಪ್ರತಿಯೊಬ್ಬರ ನಡುವೆ ಮೂರು ಅಡಿಗಳ ಅಂತರ ಇರಬೇಕು ಎಂಬ ನಿಯಮವನ್ನು ಗಾಳಿಗೆ ತೂರಲಾಗಿತ್ತು. ಉದ್ಘಾಟನೆ ಸೇರಿದಂತೆ ಬಲೂನು ಹಾರಿಸುವ ಮತ್ತು ಆರೋಗ್ಯ ಹಸ್ತ ವಾಹನಕ್ಕೆ ಚಾಲನೆ ನೀಡುವಾಗಲೂ ಯಾವ ನಾಯಕರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲಿಲ್ಲ. ಅಲ್ಲದೆ ಕಾರ್ಯಕ್ರಮದ ನಂತರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಜನರು ಮುತ್ತಿಕೊಂಡ ಘಟನೆ ಸಹ ನಡೆಯಿತು.