ಕೊರೋನಾದಿಂದ ನೆಲಕಚ್ಚಿದ ಪ್ರವಾಸೋದ್ಯಮ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ
ಕೊರೋನಾ ವೈರಸ್ ಬರೀ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿಲ್ಲ. ದೊಡ್ಡ ದೊಡ್ಡ ಉದ್ಯಮ, ವ್ಯಾಪಾರ-ವ್ಯವಹಾರಗಳಿಗೆ ಭಾರೀ ನಷ್ಟವಾಗಿದೆ. ಮಹಾಮಾರಿ ರಣಕೇಕೆಗೆ ರೈತರಿಂದ ಹಿಡಿದು ದೊಡ್ಡ ದೊಡ್ಡ ಉದ್ಯಮಿಗಳೇ ಆರ್ಥಿಕವಾಗಿ ಭಾರೀ ನಷ್ಟ ಅನುಭವಿಸುತ್ತಿದ್ದಾರೆ. ಅದರಲ್ಲೂ ಕೊರೋನಾ ವೈರಸ್‌ನ ಆರ್ಭಟಕ್ಕೆ ಭಾರತೀಯ ಪ್ರವಾಸೋದ್ಯಮ ಕ್ಷೇತ್ರ ನೆಲಕಚ್ಚಿದೆ. ಇದೀಗ ಪ್ರವಾಸೋದ್ಯಮ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ.
ಮುಖ್ಯಮಂತ್ರಿ ಬಿ.ಎಸ್,.ಯಡಿಯೂರಪ್ಪ ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸ್ಮಾರ್ಟ್ ಆಪ್ ಯೋಜನೆಯಡಿ ಕಾರವಾನ್ ಪ್ರವಾಸೋದ್ಯಮದ ಉತ್ತೇಜನಕ್ಕಾಗಿ ಅಭಿವೃದ್ಧಿಪಡಿಸಿರುವ ನೂತನ ಕಾರವಾನ್ (ಮಿನಿ ಬಸ್)ಗಳಿಗೆ ಹಸಿರುನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಪ್ರವಾಸೋದ್ಯಮ ಅತಿ ಹೆಚ್ಚು ಉದ್ಯೋಗಗಳನ್ನು ಸೃಜಿಸುವ ಉದ್ಯಮವಾಗಿದೆ. ಕೋವಿಡ್-19ರ ಹಿನ್ನೆಲೆಯಲ್ಲಿ ಪ್ರವಾಸೋದ್ಯಮಕ್ಕೆ ಭಾರಿ ಹಿನ್ನಡೆ ಉಂಟಾಗಿರುವುದು ಸರ್ವವೇದ್ಯವಾಗಿದೆ. ಈ ಸನ್ನಿವೇಶದಲ್ಲಿ ನಿರುದ್ಯೋಗ ನಿವಾರಣೆಯ ದಿಕ್ಕಿನಲ್ಲಿ ಪ್ರವಾಸೋದ್ಯಮಕ್ಕೆ ಚೇತರಿಕೆ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ರಾಜ್ಯದ ಜಿ.ಡಿ.ಪಿ.ಗೆ ಪ್ರವಾಸೋದ್ಯಮದ ಕೊಡುಗೆ ಶೇಕಡಾ 14 ರಷ್ಟಿದ್ದು, ಮುಂದಿನ ದಿನಗಳಲ್ಲಿ ಈ ಗುರಿಯನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ. ಕೋವಿಡ್-19ರ ನಂತರದ ದಿನಗಳಲ್ಲಿ ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಪುನಶ್ಚೇತನಗೊಳಿಸಲು ಸರ್ಕಾರ ಮುಂದಾಗಿದೆ. ಇದರ ಭಾಗವಾಗಿ ಕಾರವಾನ್ (ಮಿನಿ ಬಸ್) ಪ್ರವಾಸೋದ್ಯಮಕ್ಕೆ ಚಾಲನೆ ನೀಡಲಾಗಿದೆ.
ಪ್ರಾಥಮಿಕ ಹಂತದಲ್ಲಿ ಹಂಪಿ, ಗೋಕರ್ಣ, ಬಾದಾಮಿ, ಕುದುರೆಮುಖ, ಸಕಲೇಶಪುರ, ಬೇಲೂರು, ಹಳೇಬೀಡು, ಸಕ್ರೆಬೈಲು ಹಾಗೂ ಕೊಡಗು ಪ್ರವಾಸಿ ತಾಣಗಳಲ್ಲಿ ಕಾರವಾನ್‍ಗಳನ್ನು ನಿಯೋಜಿಸಲಾಗುವುದು.
ರಾಜ್ಯದ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 20 ಪ್ರಮುಖ ತಾಣಗಳ ಸಮಗ್ರ ಅಭಿವೃದ್ಧಿಗೆ ಯೋಜನಾ ವರದಿ ಸಿದ್ಧವಾಗಿದ್ದು, ಇವುಗಳನ್ನು ಹಂತ ಹಂತವಾಗಿ ಜಾರಿಗೊಳಿಸಲು ಸೂಚನೆ ನೀಡಿದ್ದೇನೆ ಎಂದು ಸಿಎಂ ತಿಳಿಸಿದರು.
ರಾಜ್ಯಕ್ಕೆ ಪ್ರವಾಸಿಗರನ್ನು ಆಕರ್ಷಿಸುವ, ಅತ್ಯುತ್ತಮ ಪ್ರವಾಸಿ ಗಮ್ಯವಾಗಿಸುವ ನಿಟ್ಟಿನಲ್ಲಿ ಎಲ್ಲ ಪಾಲುದಾರರೂ ಕೈಜೋಡಿಸಬೇಕು. ಪ್ರವಾಸೋದ್ಯಮ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದ್ದು, ಕಾರವಾನ್ ಪ್ರವಾಸೋದ್ಯಮ ಇದಕ್ಕೆ ಪೂರಕವಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದರು.