ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಕೇಂದ್ರ ಸರ್ಕಾರ ಕ್ರಮವಹಿಸಲಿ: ಸಚಿವ ದಿನೇಶ್ ಗುಂಡೂರಾವ್ ಒತ್ತಾಯ
ಮಂಗಳೂರಿನಲ್ಲಿ ಇಂದು ಸಂಭ್ರಮದಿಂದ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಧ್ವಜಾರೋಹಣ ನೆರವೇರಿಸಿ ಗೌರವ ವಂಧನೆ ಸ್ವೀಕರಿಸಿದರು. ರಾಷ್ಟ್ರಪಿತ ಮಹತ್ಮಾ ಗಾಂಧಿಜೀ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪ ಅರ್ಪಿಸಿ ನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ನಾಡಿನ ಜನತೆಗೆ 78 ನೇ ಸ್ವಾತಂತ್ರ್ಯೋತ್ಸವದ ಶುಭಾಶಯ ಸಲ್ಲಿಸಿದರು. ನಮ್ಮ ನೆರೆಯ ಬಾಂಗ್ಲಾದೇಶದಲ್ಲಿ ಇತ್ತಿಚೆಗೆ ನಡೆದ ಘಟನೆಗಳ ಕುರಿತು ಆತಂಕ ವ್ಯಕ್ತಪಡಿಸಿದ ಸಚಿವರು, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದುಗಳ ರಕ್ಷಣೆಗೆ ಕೇಂದ್ರ ಸರ್ಕಾರ ಅಂತರಾಷ್ಟ್ರೀಯ ಮಟ್ಟದ ಕ್ರಮಗಳನ್ನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಭಾರತ ಸೇರಿದಂತೆ ಜಗತ್ತಿನಾದ್ಯಂತ ಅಲ್ಪಸಂಖ್ಯಾತರ ರಕ್ಷಣೆ ಬಹುಸಂಖ್ಯಾತರ ಕರ್ತವ್ಯವಾಗಿದೆ ಎಂದು ಸ್ವಾತಂತ್ರ್ಯೋತ್ಸವದ ತಮ್ಮ ಭಾಷಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರರು.
ಸ್ವಾತಂತ್ರ್ಯೋತ್ತರ ಯುಗದಲ್ಲಿ ದೇಶ ಸಾಗಿ ಬಂದ ಪ್ರಗತಿಯ ಹಾದಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಸಚಿವರು, ಭಾರತೀಯತೆ ಎನ್ನುವ ಒಂದು ಬಂಧ ಎಲ್ಲ ಭಾಷ ಸಂಸ್ಕೃತಿಯ ಜನಜೀವನವನ್ನ ಹಿಡಿದಿಟ್ಟಿದೆ ಎಂದರು. ಭಾರತ ಇಂದು ವಿಶ್ವದ ಅತ್ಯಂತ ಬಲಿಷ್ಠ ರಾಷ್ಟ್ರಗಳಲ್ಲಿ ಒಂದಾಗಿದೆ. ಕರ್ನಾಟಕದ ಸರ್ವಾಂಗೀಣ ಪ್ರಗತಿಯಲ್ಲಿ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆಗಳನ್ನಿಟ್ಟಿದೆ. ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಭಾರತದ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಹೊಸ ಇತಿಹಾಸವನ್ನ ಸೃಷ್ಟಿಸಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಪೂರಕವಾಗಿ ಸ್ಪಂದಿಸುತ್ತಾ ಬಂದಿದೆ. ಪ್ರತಿ ತಿಂಗಳು 2000 ನೀಡುವ ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಯಲ್ಲಿ 3.66 ಲಕ್ಷ ಮಹಿಳೆಯರು ನೊಂದಾಯಿಸಿಕೊಂಡಿದ್ದಾರೆ. 5.06 ಲಕ್ಷ ಫಲಾನುಭವಿಗಳು ಗೃಹಜ್ಯೋತಿ ಯೋಜನೆಯ ಲಾಭ ಪಡೆದಿದ್ದು, 369.87 ಕೋಟಿ ರೂಪಾಯಿಗಳನ್ನ ರಾಜ್ಯ ಸರ್ಕಾರ ಪಾವತಿಸಿದೆ. ಯುವನಿಧಿ ಯೋಜನೆಯಡಿ ಜಿಲ್ಲೆಯ 3153 ಯುವಕ, ಯುವತಿಯರಿಗೆ ಆರ್ಥಿಕ ನೆರವು ಲಭಿಸಿದೆ. ಶಕ್ತಿ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ 5.19 ಕೋಟಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದಾರೆ.
ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ 700 ಕಾಮಗಾರಿಗಳು ಮಂಜೂರಾಗಿದ್ದು, 531 ಕಾಮಗಾರಿಗಳು ಪೂರ್ಣಗೊಂಡಿವೆ. ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹಧನ ನೀಡಲಾಗಿತ್ತಿದೆ. ಜಿಲ್ಲೆಯ ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಭೂತ ಸೌಕರ್ಯ ಮತ್ತು ಉನ್ನತಿಕರಣಕ್ಕಾಗಿ 19 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯಡಿ 3534 ಜನರಿಗೆ ಉಚಿತ ಇಸಿಜಿ ನಡೆಸಲಾಗಿದ್ದು, 61 ಜನರಿಗೆ ಉನ್ನತ ಮಟ್ಟದ ಚಿಕಿತ್ಸೆ ಒದಗಿಸಲಾಗಿದೆ. ಅಂಗಾಂಗ ದಾನ ಕುರಿತು ಜಾಗೃತಿ ಮೂಡಿಸಲಾಗುತ್ತಿದ್ದು, ಸ್ವಾತಂತ್ರ್ಯೋತ್ಸವದ ದಿನವಾದ ಇಂದು ಅಂಗಾಂಗ ದಾನಿಗಳ ಕುಟುಂಬಗಳನ್ನ ಸನ್ಮಾನಿಸಿ ಗೌರವ ಸಲ್ಲಿಸಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ 130 ಕೋಟಿ ಅನುದಾನ ಒದಗಿಸಲಾಗಿದ್ದು, 320 ಕಾಮಗಾರಿಗಳ ಕ್ರೀಯಾ ಯೋಜನೆ ತಯಾರಿಸಲಾಗಿದೆ. ಮಹತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ ರಾಜ್ಯದ 10 ಮಹಾನಗರ ಪಾಲಿಕೆಗಳಿಗೆ 2000 ಕೋಟಿ ಅನುದಾನ ಒದಗಿಸಲು ನಿಶ್ಚಯಿಸಲಾಗಿದ್ದು,
ಮಂಗಳೂರು ಮಹಾನಗರ ಪಾಲಿಕೆಗೆ 200 ಕೋಟಿ ಅನುದಾನ ಹರಿದುಬರಲಿದೆ. ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಉಂಟಾದ ನೆರ ಪರಿಸ್ಥಿತಿಯನ್ನ ಸಮರ್ಪಕವಾಗಿ ನಿರ್ವಹಿಸಲಾಗಿದ್ದು, 1.21 ಕೋಟಿ ಪರಿಹಾರ ಪಾವತಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.