ತುಂಗಭದ್ರಾ ಡ್ಯಾಂ ಮೇಲೆ ಪ್ರೀ ವೆಡ್ಡಿಂಗ್ ಶೂಟ್ ಮಾಡಿದ್ದು ಯಾರು? ಟೈಟ್ ಸೆಕ್ಯೂರಿಟಿ ಇದ್ರೂ ಒಳಹೋಗಿದ್ದು ಹೇಗೆ?
ತುಂಗಭದ್ರಾ ಅಣೆಕಟ್ಟೆ ನಿರ್ಬಂಧಿತ ಪ್ರದೇಶವೆಂದು ಘೋಷಿಸಿದ್ದು, ಸಾರ್ವಜನಿಕರ ಸಂಚಾರಕ್ಕೂ ಅವಕಾಶವಿಲ್ಲ. ಆದರೆ ಇಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡಿರುವುದು ಈಗ ತೀವ್ರ ಟೀಕೆಗೆ ಗುರಿಯಾಗಿದೆ.
ಕ್ರಸ್ಟ್ ಗೇಟ್ ಆಪರೇಟರ್ ಸಿಸ್ಟಮ್ ಪಕ್ಕದಲ್ಲಿಯೇ ಶೂಟ್ ಮಾಡಲಾಗಿದೆ. ಅಣೆಕಟ್ಟೆಯ ಮೇಲ್ಭಾಗದಲ್ಲಿಯೇ ಶೂಟ್ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಅಂತಾರಾಷ್ಟ್ರೀಯ ಉಗ್ರಗಾಮಿಗಳ ಕಣ್ಣು ಜಲಾಶಯಗಳ ಮೇಲೆ ಇರುವುದರಿಂದ ತುಂಗಭದ್ರಾ ಜಲಾಶಯ, ಅಣೆಕಟ್ಟೆ ಮೇಲೆಯೂ ಪ್ರವೇಶಕ್ಕೆ ನಿರ್ಬಂಧವಿದೆ. ಪತ್ರಕರ್ತರು ಸೇರಿದಂತೆ ಯಾರಿಗೂ ಹೋಗಲು ಆವಕಾಶವಿಲ್ಲ. ವಿಶೇಷ ಸಂದರ್ಭದಲ್ಲಿ ಮಾತ್ರ ಸಚಿವರು, ಅಧಿಕಾರಿಗಳಿಗೆ ಪ್ರವೇಶ ನೀಡಲಾಗುತ್ತದೆ. ಬಾಗಿನ ಅರ್ಪಿಸುವ ವೇಳೆಯಲ್ಲಿ ಕಟ್ಟೆಚ್ಚರದ ನಡುವೆ ಅವಕಾಶ ನೀಡಲಾಗುತ್ತಿದೆ. ಆದರೆ, ಇಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡಲಾಗಿದೆ. ಬುಧವಾರ ಬೆಳ್ಳಂಬೆಳಗ್ಗೆ ಪ್ರೀ ವೆಡ್ಡಿಂಗ್ ಶೂಟ್ ನಡೆದಿದ್ದು, ಬಗೆ-ಬಗೆಯ ಭಂಗಿಯಲ್ಲಿ ಅಣೆಕಟ್ಟೆಯ ಮೇಲೆ ವಾಹನಗಳೊಂದಿಗೆ ಫೋಟೋ ಶೂಟ್ ಮತ್ತು ವೀಡಿಯೋ ಶೂಟ್ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.
ಈ ಹಿಂದೆ ಇಂಥದ್ದೆ ಪ್ರಯತ್ನ ಆದಾಗ ಶೂಟ್ ಮಾಡಲು ಬಂದಿದ್ದವರನ್ನು ವಿಚಾರಣೆಗೊಳಿಪಡಿಸಿದ್ದು ಅಲ್ಲದೆ, ಅವರ ವಾಹನಗಳನ್ನು ಸೀಜ್ ಮಾಡಲಾಗಿತ್ತು. ಇಷ್ಟೆಲ್ಲ ಇದ್ದರೂ ಈಗ ಶೂಟ್ ಮಾಡಿದ್ದು ಹೇಗೆ ಮತ್ತು ಯಾರ ಪ್ರಭಾವದಿಂದ ಎನ್ನುವುದು ಕುತೂಹಲ ಮೂಡಿಸಿದೆ. ಅದಕ್ಕೆ ಅವಕಾಶವೇ ಇಲ್ಲ ಎನ್ನುವ ಅಧಿಕಾರಿಗಳು ಸಹ ಈ ಶೂಟ್ ಬಗ್ಗೆ ಅಚ್ಚರಿ ವ್ಯಕ್ತಪಡಿಸುತ್ತಾರೆ. ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿಕೊಂಡವರು ಯಾರು ಎನ್ನುವ ಕುತೂಹಲ ಕೆರಳಿದೆ. ಹೊಸಪೇಟೆ ಮೂಲದವರು ಎಂದು ಹೇಳಲಾಗುತ್ತಿದ್ದು, ಇದಕ್ಕೆ ಕೃಪೆ ಯಾರದು ಎನ್ನುವುದು ಪರಿಶೀಲನೆಯ ಬಳಿಕವೇ ಗೊತ್ತಾಗಬೇಕಾಗಿದೆ.
ವಿಜಯನಗರ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಅವರೇನಾದರೂ ಕೃಪೆ ತೋರಿದರೇ ಎನ್ನುವುದು ಈಗ ಚರ್ಚೆಯಾಗುತ್ತಿರುವ ವಿಷಯ. ಸ್ಥಳೀಯ ಅಧಿಕಾರಿಗಳು ಸಹ ಈ ಬಗ್ಗೆ ಬಾಯಿ ಬಿಡುತ್ತಿಲ್ಲ. ತಮಗೇನು ಗೊತ್ತೇ ಇಲ್ಲ ಎನ್ನುವಂತೆ ಇದ್ದಾರೆ. ಅದ್ಹೇಗೆ ಬಿಟ್ಟಿದ್ದಾರೆ ಅಲ್ಲಿಗೆ, ಅಲ್ಲಿ ನಾವೇ ಹೊಗಬೇಕು ಎಂದರೆ ಹತ್ತಾರು ಬಾರಿ ತಪಾಸಣೆ ಮಾಡುತ್ತಾರೆ. ನಿಗದಿತ ವಾಹನಗಳಿಗೆ ಮಾತ್ರ ಪ್ರವೇಶ ಇದೆ. ಅಲ್ಲಿ ಸಂಪೂರ್ಣ ನಿರ್ಬಂಧವಿದೆ. ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ಪರಿಶೀಲಿಸುವೆ ಎಂದು ತುಂಗಭದ್ರಾ ಕಾಡಾದ ಮುಖ್ಯ ಅಭಿಯಂತರ ಹನುಮಂತಪ್ಪ ದಾಸರ ತಿಳಿಸಿದ್ದಾರೆ.