ಕಾಂಗ್ರೆಸ್ ಶಕ್ತಿ ಯೋಜನೆ ಅನಾವರಣ, ಮಹಿಳೆಯರ ಉಚಿತ ಪ್ರಯಾಣಕ್ಕೆ ಬಸ್ ಫುಲ್ ರಶ್
ಬೆಂಗಳೂರು(ಜೂ.11): ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ಜಾರಿಗೊಳಿಸುತ್ತಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಜೂ.11ರಂದು ಅದ್ದೂರಿ ಚಾಲನೆ ದೊರೆತಿದೆ. ಮಹಿಳೆಯರು ಗುರುತಿನ ಚೀಟಿ ತೋರಿಸಿ ಮುಕ್ತವಾಗಿ ಬಸ್‌ಗಳಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಉಚಿತ ಬಸ್ ಸಂಚಾರದ ಶಕ್ತಿ ಯೋಜನೆಗೆ ರಾಜ್ಯ ಸರಕಾರ 6 ಕಂಡೀಷನ್ ಹಾಕಿ ಈ ಮಾರ್ಗಸೂಚಿಯನ್ನು ಬಿಡುಗಡೆ ಈಗಾಗಲೇ ಮಾಡಿದೆ. ರಾಜ್ಯದೊಳಗೆ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶ ಇದ್ದು, ಐಷಾರಾಮಿ ಬಸ್ ಗಳಲ್ಲಿ ಉಚಿತ ಪ್ರಯಾಣ ಇಲ್ಲ. ಬಿಎಂಟಿಸಿ ಬಸ್ಸುಗಳಲ್ಲಿ ಮಾತ್ರ ಪುರುಷರಿಗೆ ಶೇ. 50 ಮೀಸಲು ಆಸನ ಇಲ್ಲ. ಉಳಿದ ಎಲ್ಲಾ ನಿಗಮಗಳ ಬಸ್ಸುಗಳಲ್ಲಿ ಪುರುಷರಿಗೆ ಶೇ. 50 ಮೀಸಲು ಇಡಲು ಆದೇಶ ಹೊರಡಿಸಿದ್ದು, ಪುರುಷರಿಗೆ ಆಸನ ಮೀಸಲಿಟ್ಟಿರುವುದು ದೇಶದಲ್ಲೇ ಮೊದಲಾಗಿದೆ. ಇನ್ನು ಮಹಿಳೆಯರ ಉಚಿತ ಪ್ರಯಾಣಕ್ಕೆ ಮೂರು ತಿಂಗಳ ಅವಧಿಯೊಳಗೆ ಸ್ಮಾರ್ಟ್ ಕಾರ್ಡ್ ನೀಡಲು ತಿರ್ಮಾನ ತೆಗೆದುಕೊಳ್ಳಲಾಗಿದೆ. ಸ್ಮಾರ್ಟ್ ಕಾರ್ಡ್ ನೀಡುವ ತನಕ ಆಧಾರ ಕಾರ್ಡ್ ಸಹಿತ ಕೇಂದ್ರ ಸರ್ಕಾರ ವಿತರಿಸಿರುವ ಗುರುತಿನ ಕಾರ್ಡ್ ತೋರಿಸಿ ಪ್ರಯಾಣ ಮಾಡಬಹುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ತುಮಕೂರು ಜಿಲ್ಲಾಡಳಿತದಿಂದ ಶಕ್ತಿ ಯೋಚನೆಗೆ ಚಾಲನೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಜಿ ಪರಮೇಶ್ವರ್ ಭಾಗವಹಿಸಿದ್ದರು. ಮಹಿಳಾ ಪ್ರಯಾಣಿಕರಿಗೆ ತಾವೇ ಟಿಕೆಟ್ ನೀಡಿ ಶಕ್ತಿ ಯೋಜನೆಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಈ ಪ್ರಯಾಣಕ್ಕೆ ದೂರದ ಮಿತಿ ಇಲ್ಲ. ನೀವು ಇಲ್ಲಿಂದ ಮಂಗಳೂರಿಗೆ ಹೋಗಬಹುದು. ಬಳ್ಳಾರಿಗೆ ಹೋಗಬಹುದು. ನಾವು ಯಾಕೆ ಗುರುತಿನ ಚೀಟಿ ಕೇಳ್ತಿವಿ ಅಂದ್ರೆ, ಹೊರ ರಾಜ್ಯದವ್ರು ಇದರ ಪ್ರಯೋಜನ ತೆಗೆದುಕೊಳ್ಳಬಾರದು ಅಂತಾ ಅದನ್ನ ಕೇಳ್ತಿದ್ದೀವಿ ಎಂದಿದ್ದಾರೆ.
ಶಕ್ತಿ ಯೋಚನೆಗೆ ಚಾಲನೆ ನೀಡಿದ ಬಳಿಕ ಬಸ್ ಗಳಿಗೆ ಹತ್ತುತ್ತಿರುವ ಮಹಿಳೆಯರ ಗುಂಪು. ಉಚಿತ ಬಸ್ ಪ್ರಯಾಣಕ್ಕೆ ಉತ್ತಮ ಪ್ರತಿಕ್ರಿಯೆ.
ಬಸ್‌ಗಳನ್ನ ಸಿಂಗರಿಸಿರುವ ಸಾರಿಗೆ ಇಲಾಖೆ ಅಧಿಕಾರಿಗಳು. ರಂಗೋಲಿ, ಬಾಳೆದಿಂಡು, ಹೂವಿನ ಮಾಲೆಗಳಿಂದ ಅಲಂಕೃತಗೊಳಿಸಲಾದ ವೇದಿಕೆ ಹಾಗೂ ಬಸ್ ನಿಲ್ದಾಣದ ಪ್ರತಿ ಕಂಬಗಳು.
ರಾಜ್ಯ ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ಹಲವಾರು ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ. ಮೊದಲ ಪ್ರಯತ್ನ ವಾಗಿ ಶಕ್ತಿ ಯೋಜನೆ ಜಾರಿಗೊಳಿಸಲಾಗಿದೆ. ರಾಜ್ಯದ 14.50 ಕೋಟಿ ಹಾಗೂ ಜಿಲ್ಲೆಯ 1.50 ಕೋಟಿ ಮಹಿಳೆಯರು ಈ ಯೋಜನೆಯ ಲಾಭ ಪಡೆಯಲಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದಂತೆ ಅಧಿಕಾರಕ್ಕೆ ಬಂದ ನಂತರ ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಸರ್ಕಾರಿ ಸಾರಿಗೆಯಲ್ಲಿ ಉಚಿತ ಪ್ರಯಾಣ ಕಲ್ಪಿಸುವ ಯೋಜನೆಗೆ ಚಾಲನೆ ನೀಡುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬಳ್ಳಾರಿ ಉಸ್ತುವಾರಿ ಸಚಿವ ನಾಗೇಂದ್ರ ಶಕ್ತಿ ಯೋಜನೆಗೆ ಚಾಲನೆ. ಮೆರವಣಿಗೆ ಮೂಲಕ ನಿಲ್ದಾಣಕ್ಕೆ ಬಂದ ಸಚಿವ, ಬಳ್ಳಾರಿ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿದರು ಈ ವೇಳೆ 6 ಹೊಸ ಬಸ್‌ಗಳ ಉದ್ಘಾಟನೆ ಮಾಡಿದರು.
ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ ಚಾಲನೆ. ದೀಪ ಬೆಳಗಿಸುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್. ಶಕ್ತಿ ಯೋಜನೆಗೆ ಸಿಎಂ ಚಾಲನೆ, ಲೋಗೋ ಲಾಂಛನ , ಸ್ಮಾರ್ಟ್ ಕಾರ್ಡ್ ಮಾದರಿ ಬಿಡುಗಡೆ. ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿರುವ ವೇದಿಕೆ ಕಾರ್ಯಕ್ರಮ.
ಬೆಳಗಾವಿ: ಮಹಿಳೆಯರ ಸಬಲೀಕರಣಕ್ಕಾಗಿ ಚುನಾವಣೆ ಸಮಯದಲ್ಲಿ ಘೋಷಣೆ ಮಾಡಲಾಗಿದ್ದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಶಕ್ತಿ ಯೋಜನೆಯನ್ನು ಘೋಷಣೆ ಮಾಡಲಾಗಿತ್ತು. ನುಡಿದಂತೆ ಇಂದು ರಾಜ್ಯದಾದ್ಯಂತ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದ್ದು, ಈ ಶಕ್ತಿ ಯೋಜನೆಯ ಸದ್ಬಳಕೆ ಮಾಡಿಕೊಂಡು ಮಹಿಳೆಯರು ಸಬಲರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.