ನಮ್ಮ ಮೆಟ್ರೋ ಸುರಂಗ ಕಾಮಗಾರಿಗೆ ಸಿಎಂ ಯಡಿಯೂರಪ್ಪ ಚಾಲನೆ
ಬೆಂಗಳೂರು(ಜು.31): ಮೆಟ್ರೋ 2ನೇ ಹಂತದ ಎಲ್ಲ ರೀಚ್‌ಗಳ ಕಾಮಗಾರಿಗಳು ಪ್ರಾರಂಭವಾಗಿದ್ದು, 2024ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಗುರುವಾರ ಶಿವಾಜಿನಗರದ ಸುಲ್ತಾನಾ ಗುಂಟಾ ಅಬ್ದುಲ್‌ಬಾರಿ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಳ್ಳಲಾದ ನಮ್ಮ ಮೆಟ್ರೋ 2ನೇ ಹಂತ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಿಂದ ಶಿವಾಜಿನಗರ ಮೆಟ್ರೋ ನಿಲ್ದಾಣಗಳ ನಡುವಿನ ಸುರಂಗ ಮಾರ್ಗದ ಕಾಮಗಾರಿಗೆ ಚಾಲನೆ ನೀಡಿದರು.
ಶಿವಾಜಿನಗರ ನಿಲ್ದಾಣದಿಂದ ಕಂಟೋನ್ಮೆಂಟ್ ಕಡೆಗೆ ಸುರಂಗ ಮಾರ್ಗ 0.855 ಮೀ. ಉದ್ದವಿದ್ದು ಈ ಮಾರ್ಗದ ಕಾಮಗಾರಿಯನ್ನು ಮೆ.ಲಾರ್ಸನ್ ಮತ್ತು ಟಬ್ರೊ ಲಿ. ಸಂಸ್ಥೆಗೆ ವಹಿಸಲಾಗಿದೆ ಎಂದು ಹೇಳಿದರು. ಸುರಂಗ ಕೊರೆಯಲು ಬಳಸುತ್ತಿರುವ ಎರಡು ಟಿಬಿಎಂ ಯಂತ್ರಗಳಿಗೆ ಊರ್ಜಾ ಮತ್ತು ವಿಂಧ್ಯ ಎಂಬ ಹೆಸರಿಡಲಾಗಿದೆ. ಇದರ ಪುನರ್ ಜೋಡಣೆ ಕಾರ್ಯದ ನಂತರ ಸ್ಥಳ ಪರೀಕ್ಷೆ ಪೂರ್ಣಗೊಳಿಸಿ ಸುರಂಗ ಕೊರೆಯಲು ಸಿದ್ಧವಾಗಿದೆ ಎಂದ ಸಿಎಂ
ನಮ್ಮ ಮೆಟ್ರೋ ನಗರದ ಸಂಚಾರಿ ದಟ್ಟಣೆ ಕಡಿಮೆ ಮಾಡಲು ಕ್ಷಿಪ್ರಗತಿಯಲ್ಲಿ ಪ್ರಯಾಣಿಕರನ್ನು ತಮ್ಮ ಗಮ್ಯಕ್ಕೆ ತಲುಪಿಸಲು ಅತ್ಯುತ್ತಮ ಸೇವೆ ಮಾಡುತ್ತಿದೆ. ಮೆಟ್ರೋ ಹಂತ 2ರ ಭಾಗವಾಗಿ ಗೊಟ್ಟಿಗೆರೆಯಿಂದ ನಾಗವಾರದವರೆಗೆ 21.40 ಕಿ.ಮೀ ಹೊಸ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ. ಹೊಸ ಮಾರ್ಗದಲ್ಲಿ 7.5 ಕಿ.ಮೀ. ಉದ್ದದ ಎಲಿವೇಟೆಡ್ ಕಾರಿಡಾರ್ ಇದ್ದು, 6 ಎಲಿವೇಟೆಡ್ ನಿಲ್ದಾಣಗಳನ್ನು ಹೊಂದಿದೆ. 12 ನೆಲದಡಿಯ ನಿಲ್ದಾಣಗಳು ಮತ್ತು 10.37 ಕಿ.ಮೀ ಉದ್ದದ ಅವಳಿ ಸುರಂಗ ಮಾರ್ಗವನ್ನು ಹೊಂದಿದೆ ಎಂದು ತಿಳಿಸಿದ ಯಡಿಯೂರಪ್ಪ
ಸುರಂಗ ಮಾರ್ಗದ ಕಾಮಗಾರಿಯನ್ನು ನಾಲ್ಕು ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದೆ. ಮೆಟ್ರೋ ಹಂತ 2ರ ನಿರ್ಮಾಣದ ವೆಚ್ಚ 30,695 ಕೋಟಿಗಳಾಗಿದ್ದು ಕೇಂದ್ರ, ಸಿಲ್ಕ್‌ಬೋರ್ಡ್ ಜಂಕ್ಷನ್‌ದಿಂದ ಕೆ.ಆರ್.ಪುರಂ ಮಾರ್ಗವಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಾಗುವುದು. ಇದರ ಕಾಮಗಾರಿಯ ವೆಚ್ಚ 9934.58 ಕೋಟಿಗಳಾಗಿದ್ದು ಯೋಜನೆಯ ವಿಸ್ತೃತ ವರದಿಗೆ ಕೇಂದ್ರ ಸರ್ಕಾರದ ಅನುಮೋದನೆ ನಿರೀಕ್ಷಿಸಲಾಗಿದೆ ಎಂದು ಹೇಳಿದರು.
ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರವೆಂದು ಬೆಂಗಳೂರು ಗುರುತಿಸಿಕೊಂಡಿದ್ದು, ಈ ಮಾನ್ಯತೆಗೆ ತಕ್ಕಂತೆ ಮೂಲಸೌಕರ್ಯ ಒದಗಿಸಲಾಗುವುದು. ಬುಧವಾರವಷ್ಟೇ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬೆಂಗಳೂರು ಲೈಫ್‌ಸೈನ್ಸ್ ಪಾರ್ಕ್ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಲಾಗಿದ್ದು ಇದು ಜಾಗತಿಕ ಜೈವಿಕ ತಂತ್ರಜ್ಞಾನದ ಹಬ್ ಆಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಆರ್.ಅಶೋಕ್, ಭೈರತಿ ಬಸವರಾಜ್, ಸ್ಥಳೀಯ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್‌ಸೇಠ್ ಸೇರಿದಂತೆ ಇತರರು ಉಪಸ್ಥಿತರಿದ್ದರು.