ಲೈಫ್‌ಸೈನ್ಸ್ ಪಾರ್ಕ್‌ಗೆ ಸಿಎಂ ಭೂಮಿಪೂಜೆ: ಬೆಂಗಳೂರಿಗೆ ಜಾಗತಿಕ ಬಿ.ಟಿ ಹಬ್ ಕಿರೀಟ
ಬೆಂಗಳೂರು(ಜು.30): ‘ಐಟಿ ಸಿಟಿ’ ಎನ್ನಿಸಿಕೊಂಡಿರುವ ಬೆಂಗಳೂರು ‘ಬಿಟಿ ಸಿಟಿ’ ಎಂಬ ಹಿರಿಮೆಗೂ ಇನ್ನು ಪಾತ್ರವಾಗಲಿದೆ. 150ಕ್ಕೂ ಹೆಚ್ಚು ಜೈವಿಕ ತಂತ್ರಜ್ಞಾನ ಸ್ಥಾಪನೆಗೆ ಅನುವು ಮಾಡಿಕೊಡುವ ಲೈಫ್ ಸೈನ್ಸ್ ಪಾರ್ಕ್ ಸ್ಥಾಪನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬುಧವಾರ ಭೂಮಿಪೂಜೆ ನೆರವೇರಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಸಮೀಪ ಲ್ಯಾಬ್‌ಝೋನ್ ಎಲೆಕ್ಟ್ರಾನಿಕ್ ಸಿಟಿ ಪ್ರೈ.ಲಿ ಈ ಪಾರ್ಕ್‌ಅನ್ನು ಅಭಿವೃದ್ಧಿಪಡಿಸಲಿದೆ.
ಬೆಂಗಳೂರು ಲೈಫ್ ಸೈನ್ಸ್ ಪಾರ್ಕ್ ಸ್ಥಾಪನೆಯಿಂದ 150ಕ್ಕೂ ಹೆಚ್ಚು ಕಂಪನಿಗಳು ಈ ಪಾರ್ಕ್‌ನಲ್ಲಿ ನೆಲೆಗೊಳ್ಳಲಿವೆ. ನೂರಕ್ಕೂ ಹೆಚ್ಚು ನವೋದ್ಯಮಗಳು ಸ್ಥಾಪನೆಯಾಗಲಿದ್ದು, ಸುಮಾರು 50 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದ ಸಿಎಂ ಯಡಿಯೂರಪ್ಪ
ರಾಜ್ಯದಲ್ಲಿ ಜೈವಿಕ ತಂತ್ರಜ್ಞಾನ ಕ್ಷೇತ್ರದ ಅಭ್ಯುದಯಕ್ಕೆ ಅಗತ್ಯ ಸೌಕರ್ಯಗಳನ್ನು ಆದ್ಯತೆಯ ಮೇರೆಗೆ ಒದಗಿಸಲಾಗುವುದು ಹಾಗೂ ಕರ್ನಾಟಕವು ಜಾಗತಿಕ ಬಿಟಿ ಹಬ್ ಆಗಿ ಹೊರಹೊಮ್ಮುವುದಕ್ಕೆ ಬೇಕಾದ ಸರ್ವಕ್ರಮಗಳನ್ನು ಕೈಗೊಳ್ಳಲಾಗುವುದು
ಎರಡು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆ ಸಾಕಾರಗೊಳ್ಳುತ್ತಿದೆ. ರಾಜ್ಯ ಬಿಟಿ ಕ್ಷೇತ್ರಕ್ಕೆ ಈ ಪಾರ್ಕ್ ಮೂಲಕ ಮತ್ತಷ್ಟುಬಲ ಬರಲಿದೆ. ಸಂಶೋಧನೆ, ಅಭಿವೃದ್ಧಿ ಎಲ್ಲವೂ ಒಂದೇ ಸೂರಿನಡಿ ಆಗಲಿದ್ದು ಈ ಯೋಜನೆ ಸಾಕಾರಗೊಂಡ ಮೇಲೆ ಜಾಗತಿಕ ಭೂಪಟದಲ್ಲಿ ಬೆಂಗಳೂರಿನ ಪ್ರತಿಷ್ಠೆ ಮತ್ತಷ್ಟುಹೆಚ್ಚಲಿದೆ ಎಂದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ
ಜೈವಿಕ ತಂತ್ರಜ್ಞಾನದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಇಡೀ ದೇಶದ ಶೇ.60ರಷ್ಟು ಜೈವಿಕ ತಂತ್ರಜ್ಞಾನ ಕಂಪನಿಗಳು ರಾಜ್ಯದಲ್ಲಿವೆ. ಇಲ್ಲಿರುವ 380 ಕಂಪನಿಗಳ ಪೈಕಿ ಸುಮಾರು 200 ಬಯೋಟೆಕ್ ಉದ್ಯಮದಡಿ ಕಾರ್ಯ ನಿರ್ವಹಿಸುತ್ತಿವೆ. ಜೈವಿಕ ತಂತ್ರಜ್ಞಾನದ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಯೋಕಾನ್ ಸಂಸ್ಥೆ ಮುಖ್ಯಸ್ಥೆ ಡಾ. ಕಿರಣ್ ಮಜುಂದಾರ್ ಶಾ ಅವರ ನೇತೃತ್ವದ ಜೈವಿಕ ತಂತ್ರಜ್ಞಾನ ವಿಷನ್‌ಗ್ರೂಪ್ ನೀಡಿದ ಶಿಫಾರಸಿನಂತೆ ರಾಜ್ಯದಲ್ಲಿ ಬಯೋ ತಂತ್ರಜ್ಞಾನ ವಿಶೇಷ ಪಾರ್ಕ್‌ಗಳ ಅಭಿವೃದ್ಧಿ
ಜೈವಿಕ ತಂತ್ರಜ್ಞಾನ ಅಭಿವೃದ್ಧಿ ಸಂಶೋಧನಾ ಕಾರ್ಯಗಳ ಕಂಪೆನಿಗಳಿಗೆ ಸುಮಾರು 20 ಎಕರೆ ವಿಸ್ತೀರ್ಣದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಹಾಗೆಯೇ 10 ಎಕರೆ ಪ್ರದೇಶದಲ್ಲಿ ನವೋದ್ಯಮ ಕಂಪನಿಗಳಿಗೆ ಅವಕಾಶ ಮಾಡಿಕೊಡಲಾಗಿದ್ದು, 52 ಎಕರೆ ಪ್ರದೇಶದ ಕೈಗಾರಿಕಾ ಕ್ಲಸ್ಟರ್ ನಿರ್ಮಾಣ ಕಾರ್ಯವೂ ನಡೆದಿದೆ. ಎಲೆಕ್ಟ್ರಾನಿಕ್ ಸಿಟಿ ಬಳಿ ಸುಮಾರು 86 ಎಕರೆ ಬಯೋ ವಿಶೇಷ ಪಾರ್ಕ್ ಅನ್ನು ನಿರ್ಮಿಸಲಾಗುತ್ತಿದೆ. ಈ ಮೂಲಕ ರಾಜ್ಯ ಸರ್ಕಾರ ಜೈವಿಕ ತಂತ್ರಜ್ಞಾನದ ಅಭಿವೃದ್ಧಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬದ್ಧವಾಗಿದೆ ಎಂದು ತಿಳಿಸಿದ ಸಿಎಂ
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್, ಶಾಸಕರಾದ ಎಂ.ಕೃಷ್ಣಪ್ಪ, ಎಂ.ಸತೀಶ್‌ರೆಡ್ಡಿ, ಬೆಂಗಳೂರು ಲೈಫ್‌ಸೈನ್ಸ್ ಪಾರ್ಕ್ ಸಿಇಒ ಚಿರಾಗ್ ಪುರುಷೋತ್ತಮ್, ಐಟಿಬಿಟಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇವಿ. ರಮಣರೆಡ್ಡಿ , ಕರ್ನಾಟಕ ಕೈಗಾರಿಕಾ ತಾಂತ್ರಿಕ ಸಂಸ್ಥೆಯ ನಿರ್ದೇಶಕಿ ಮೀನಾ ನಾಗರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಂಶೋಧನೆ ಮತ್ತು ಹೊಸ ಆವಿಷ್ಕಾರಗಳಿಗಿದ್ದ ಕಾನೂನು ತೊಡಕನ್ನು ನಿವಾರಿಸಲಾಗಿದೆ. ಕರ್ನಾಟಕ ಇನೋವೆಷನ್ ಅಥಾರಿಟಿಯನ್ನು ಸ್ಥಾಪಿಸಲಾಗಿದೆ. ಇನ್‌ವೆಸ್ಟ್ ಕರ್ನಾಟಕ ಮೂಲಕ ಹೂಡಿಕೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ದೇಶದ ಯಾವುದೇ ರಾಜ್ಯ ಕೈಗೊಳ್ಳದಂತಹ ಪರಿಣಾಮಕಾರಿ ಕ್ರಮಗಳನ್ನು ಯಡಿಯೂರಪ್ಪ ನೇತೃತ್ವದ ಸರ್ಕಾರ ಕೈಗೊಂಡಿದೆ ಎಂದು ತಿಳಿಸಿದ ಅಶ್ವತ್ಥ್ ನಾರಾಯಣ