ದತ್ತಜಯಂತಿಗೆ ಕಾಫಿನಾಡಲ್ಲಿ ಹೈ ಅಲರ್ಟ್; ಬರೋಬ್ಬರಿ 4000 ಪೊಲೀಸರ ಸರ್ಪಗಾವಲು!
ಕರ್ನಾಟಕದ ಅಯೋಧ್ಯೆ ಎಂದೇ ಖ್ಯಾತಿಯಾಗಿರೋ ಹಿಂದೂ-ಮುಸ್ಲಿಮರ ವಿವಾದಿತ ಧಾರ್ಮಿಕ ಭಾವೈಕ್ಯತಾ ಕೇಂದ್ರ ದತ್ತಪೀಠದಲ್ಲಿ ದತ್ತಜಯಂತಿ ಸಂಭ್ರಮ. ಕಾಫಿನಾಡ ದತ್ತಜಯಂತಿ ಸೂಕ್ಷ್ಮ ಸಂಗತಿಯಾಗಿರೋದ್ರಿಂದಜಿಲ್ಲಾಡಳಿತ ಜಿಲ್ಲಾದ್ಯಂತ ಹಾಗೂ ದತ್ತಪೀಠದಲ್ಲಿ ಹೈ ಅಲರ್ಟ್ ಘೋಷಿಸಿದ್ದು, ಹಿಂದಿನ ವರ್ಷಗಳಿಗಿಂತ ಈ ವರ್ಷ ಹೆಚ್ಚಿನ ಪೊಲೀಸರನ್ನ ನಿಯೋಜಿಸಲಾಗಿದೆ.
ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ದತ್ತಜಯಂತಿಗೆ ಕಾಫಿನಾಡಲ್ಲಿ ಹೈ ಅಲರ್ಟ್
ಡಿಸೆಂಬರ್ 12-13-14ರಂದು ಕಾಫಿನಾಡು ಅಕ್ಷರಶಃ ಬೂದಿಮುಚ್ಚಿದ ಕೆಂಡದಂತಿರಲಿದೆ. ಯಾಕಂದ್ರೆ, ಡಿಸೆಂಬರ್ 12 ರಿಂದ 14 ರವರೆಗೆ ಕಾಫಿನಾಡಲ್ಲಿ 4000 ಪೊಲೀಸರ ಸರ್ಪಗಾವನಲ್ಲಿ ದತ್ತಜಯಂತಿ ನಡೆಯುಲಿದೆ. ಡಿಸೆಂಬರ್ 12ರಂದು ಸಾವಿರಾರು ಮಹಿಳೆಯರಿಂದ ಅನುಸೂಯ ಜಯಂತಿ ಇದ್ರೆ, 13ರಂದು 20ಸಾವಿರಕ್ಕೂ ಅಧಿಕ ಭಕ್ತರಿಂದ ಬೃಹತ್ ಶೋಭಾಯಾತ್ರೆ ನಡೆಯಲಿದೆ. 14ರಂದು ರಾಜ್ಯದ ನಾನಾ ಭಾಗಗಳಿಂದ ಬರುವ 25 ಸಾವಿರಕ್ಕೂ ಅಧಿಕ ದತ್ತಭಕ್ತರುದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಮಾಡಲಿದ್ದಾರೆ. ಜಿಲ್ಲಾದ್ಯಂತ 4000ಕ್ಕೂ ಅಧಿಕ ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದು ಜಿಲ್ಲಾಡಳಿತ ಹಿಂದೂ-ಮುಸ್ಲಿಂ ಮುಖಂಡರ ಜೊತೆ ಸಭೆ ಕೂಡ ನಡೆಸಿದೆ. ಯಾರಾದರೂ ಸಮಾಜದ ಶಾಂತಿ ಕದಡಲು ಪ್ರಯತ್ನಿಸಿದರೆ ಅಂತವರ ವಿರುದ್ಧ ಕಠಿಣ-ನಿರ್ದಾಕ್ಷಣ್ಯ ಕ್ರಮಕೈಗೊಳ್ಳೋದಾಗಿ ಡಿಸಿ-ಎಸ್ಪಿ ಎಚ್ಚರಿಕೆ ನೀಡಿದ್ದಾರೆ.
ಪೊಲೀಸರ ಸರ್ಪಗಾವನಲ್ಲಿ ದತ್ತಜಯಂತಿ
ದತ್ತಜಯಂತಿಯ ಹಿಂದೆ-ಮುಂದೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಿಸಿದ್ದು, ಓರ್ವ ಎಸ್ಪಿ. 7 ಜನ ಎಸ್ಪಿ ಗ್ರೇಡ್ ಅಧಿಕಾರಿಗಳು. 28 ಡಿವೈಎಸ್ಪಿ, 65 ಇನ್ಸ್ ಪೆಕ್ಟರ್, 300 ಸಬ್ ಇನ್ಸ್ಪೆಕ್ಟರ್. 250 ಎಎಸ್ಐ. 20 ಕೆ.ಎಸ್.ಆರ್.ಪಿ. 28 ಡಿಎಆರ್. 2 ಟೀಂ ಆರ್.ಎ.ಎಫ್. 500 ಹೋಂ ಗಾರ್ಡ್. 400 ಸಿ.ಸಿ. ಟಿವಿ, 10 ಡ್ರೋನ್ ಕ್ಯಾಮರಾ ಜೊತೆ 29 ಚೆಕ್ ಪೊಸ್ಟ್ ಹಾಕಲಾಗಿದ್ದು 4000 ಸಾವಿರಕ್ಕೂ ಅಧಿಕ ಪೊಲೀಸರ ಸರ್ಪಗಾವಲಿನಲ್ಲಿ ದತ್ತಜಯಂತಿ ನಡೆಯಲಿದ್ದು, ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಪೊಲೀಸರು ಕಾಫಿನಾಡಿಗೆ ಆಗಮಿಸಲಿದ್ದಾರೆ. 14ರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಪಾದುಕೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಭಾರೀ ಮಳೆಯಿಂದ ದತ್ತಪೀಠ ಮಾರ್ಗದ ರಸ್ತೆ ಕುಸಿದಿರೋದ್ರಿಂದ ಲಾಂಗ್ ಚಾರ್ಸಿ ಗಾಡಿಗಳಿಗೆ ಈ ವರ್ಷ ಕಡ್ಡಾಯವಾಗಿ ನಿಷೇಧಿಸಲಾಗಿದೆ.
ದತ್ತಜಯಂತಿ
ಒಟ್ಟಾರೆ, ಗುರುವಾರದಿಂದ ಶನಿವಾರದವರೆಗೆ ಕಾಫಿನಾಡು ಚಿಕ್ಕಮಗಳೂರು ಅಕ್ಷರಶಃ ಬೂದಿ ಮುಚ್ಚಿದ ಕೆಂಡದಂತಿರೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ, ಜಿಲ್ಲಾಡಳಿತ ಶ್ರದ್ಧಾ ಭಕ್ತಿಯಿಂದ ಶಾಂತಿಯುತವಾಗಿ ಪೂಜೆ-ಕೈಂಕರ್ಯಗಳನ್ನ ಮುಗಿಸಿಕೊಳ್ಳುವಂತೆ ಮನವಿ ಮಾಡಿದೆ. ಆದ್ರೆ, ಸದಾ ತಣ್ಣಗಿರೋ ಕಾಫಿನಾಡಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ದತ್ತಜಯಂತಿ ಮುಗಿಯಲಿ ಅಂತ ಕಾಫಿನಾಡಿಗರು ದತ್ತಪೀಠದ ದತ್ತಾತ್ರೇಯರಿಗೆ ಬೇಡಿಕೊಂಡಿದ್ದಾರೆ.