ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಮೆದುಳು ಕೇಂದ್ರ ಶುರು: ಸಚಿವ ದಿನೇಶ್ ಗುಂಡೂರಾವ್
ನಿಮ್ಹಾನ್ಸ್ ಸಂಸ್ಥೆಯ ಸಹಯೋಗದಲ್ಲಿ ರಾಜ್ಯದ 32 ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಥಾಪಿಸಿರುವ ಮೆದುಳು ಆರೋಗ್ಯ ಕೇಂದ್ರಗಳ ಸೇವೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.
ಬೆಂಗಳೂರು (ಮಾ.13): ನಿಮ್ಹಾನ್ಸ್ ಸಂಸ್ಥೆಯ ಸಹಯೋಗದಲ್ಲಿ ರಾಜ್ಯದ 32 ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಥಾಪಿಸಿರುವ ಮೆದುಳು ಆರೋಗ್ಯ ಕೇಂದ್ರಗಳ ಸೇವೆಗೆ (ಕಭಿ) ಸೋಮವಾರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.
ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ನೂತನ ಮೆದುಳು ಆರೋಗ್ಯ ಕೇಂದ್ರಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಮೆದುಳು ಆರೋಗ್ಯದ ವಿಚಾರದಲ್ಲಿ ಹೆಚ್ಚು ಒತ್ತು ನೀಡಬೇಕಾಗಿರುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಹಾಗೂ ಆರೋಗ್ಯ ಇಲಾಖೆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ದೇಶದಲ್ಲಿ ಇದೊಂದು ಮಾದರಿ ಕಾರ್ಯಕ್ರಮವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಿಮ್ಹಾನ್ಸ್ ಸಂಸ್ಥೆಯ ಸಹಯೋಗದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ಹಾಗೂ 31 ಜಿಲ್ಲಾ ಆಸ್ಪತ್ರೆ ಸೇರಿ 32 ಸರ್ಕಾರಿ ಆಸ್ಪತ್ರೆಗಳಲ್ಲಿ ಮೆದುಳು ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿದೆ. ಈ ಮೂಲಕ ನಿಮ್ಹಾನ್ಸ್ ಮೇಲಿನ ಒತ್ತಡ ಕಡಿಮೆ ಮಾಡುವ ಜತೆಗೆ ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿಯೇ ಮೆದುಳು ಹಾಗೂ ನರ ಸಮಸ್ಯೆಗಳನ್ನ ಹೊಂದಿರುವ ರೋಗಿಗಳಿಗೆ ಆರೋಗ್ಯ ಸೇವೆ ದೊರೆತಂತಾಗಲಿದೆ ಎಂದರು.
ವೈಶಿಷ್ಟ್ಯತೆಗಳೇನು: ಕರ್ನಾಟಕದ 31 ಜಿಲ್ಲೆ ಮತ್ತು ಬಿಬಿಎಂಪಿಯ ಆಸ್ಪತ್ರೆಗಳಲ್ಲಿ ಸೇರಿ 32 ಮೆದುಳು ಆರೋಗ್ಯ ಚಿಕಿತ್ಸಾಲಯಗಳನ್ನು ಸ್ಥಾಪಿಸಲಾಗಿದೆ. ನರರೋಗಿಗಳಿಗೆ ಸಕಾಲಿಕ ಚಿಕಿತ್ಸೆಯನ್ನು ಖಾತ್ರಿಪಡಿಸುವ ಮತ್ತು ಆರೈಕೆಗಾಗಿ ನೋಡಲ್ ಕೇಂದ್ರಗಳಾಗಿ ಇವು ಕಾರ್ಯನಿರ್ವಹಿಸಲಿವೆ. ಆರೋಗ್ಯ ಕೇಂದ್ರಗಳು ಹಾಗೂ ಆಸ್ಪತ್ರೆಗಳ ನಡುವಿನ ಸಂಬಂಧವನ್ನು ಬಲಪಡಿಸುವ ಮತ್ತು ಪ್ರಾಥಮಿಕ ಹಂತದಲ್ಲಿ ರೋಗ ನಿರ್ಣಯ, ಸಕಾಲಿಕ ಚಿಕಿತ್ಸೆಯನ್ನು ಸುಲಭಗೊಳಿಸಲು ಹಾಗೂ ಮೆದುಳಿನ ಆರೋಗ್ಯ ಕುರಿತು ಜಾಗೃತಿ ಮೂಡಿಸಲು ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಧಾನಪರಿಷತ್ ಸದಸ್ಯರಾದ ಉಮಾಶ್ರೀ, ಯು.ಬಿ. ವೆಂಕಟೇಶ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.