'ತಡೆಗೋಡೆ ಇಲ್ಲದಿರುವುದೇ ಕಟ್ಟಡಗಳು ಕುಸಿಯಲು ಕಾರಣ'
ಬೆಂಗಳೂರು(ಜು.30): ಕಪಾಲಿ ಚಿತ್ರಮಂದಿರದ ಜಾಗದಲ್ಲಿ ಪಾರ್ಕಿಂಗ್‌ಗೆ ನಾಲ್ಕು ತಳಮಹಡಿ ಸೇರಿದಂತೆ ಒಟ್ಟು 10 ಅಂತಸ್ತಿನ ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಸುತ್ತಲಿನ ಕಟ್ಟಡಳಿಗೆ ಧಕ್ಕೆಯಾಗದಂತೆ ತಡೆಗೋಡೆ ನಿರ್ಮಿಸಬೇಕು ಎಂದು ತಾನು ವಿಧಿಸಿದ್ದ ಷರತ್ತನ್ನು ಬಿಬಿಎಂಪಿ ವಿಧಿಸಿದ್ದ ಷರತ್ತನ್ನು ಧರ್ಮ ಕೇಶವ್ ಪ್ಲಾಂಟೇಷನ್ ಸಂಸ್ಥೆ (ರಾಯಚೂರು)ಉಲ್ಲಂಘಿಸಿದೆ. ಇದುವೇ ಮಂಗಳವಾರ ಎರಡು ಕಟ್ಟಡಗಳು ಧರಾಶಾಹಿಯಾಗಲು ಮುಖ್ಯ ಕಾರಣ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಮೆಜೆಸ್ಟಿಕ್ ಬಳಿಯ ಕಪಾಲಿ ಚಿತ್ರಮಂದಿರ ತೆರವುಗೊಳಿಸಿ 55 ಸಾವಿರ ಚ.ಮೀ ವಿಸ್ತೀರ್ಣದ ಜಾಗದಲ್ಲಿ ನಾಲ್ಕು ತಳ ಮಹಡಿ ಸೇರಿದಂತೆ ಒಟ್ಟು ಹತ್ತು ಅಂತಸ್ತುಗಳ ಬೃಹತ್ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಕಟ್ಟಡ ನಿರ್ಮಾಣ ಕಾರ್ಯಕ್ಕೂ ಮುನ್ನ ಸುತ್ತಲೂ ಇರುವ ಕಟ್ಟಡಗಳಿಗೆ ಹಾನಿ ಉಂಟಾಗದಂತೆ ತಡೆ ಗೋಡೆ ನಿರ್ಮಿಸಬೇಕಿತ್ತು. 3 ಕಡೆ ಮಾತ್ರ ತಡೆಗೋಡೆ ನಿರ್ಮಾಣ ಮಾಡಿತ್ತು. ಇನ್ನೊಂದು ಕಡೆ ತಡೆಗೋಡೆ ನಿರ್ಮಾಣ ಬಾಕಿ ಇತ್ತು. ಕಳೆದ ಒಂದು ವಾರದಿಂದ ನಗರದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಡೆಗೋಡೆ ನಿರ್ಮಿಸದ ಕಡೆ ಮಣ್ಣು ಕುಸಿದು ಕಟ್ಟಡಗಳು ದುರಂತಕ್ಕೀಡಾಗಿವೆ ಎಂದು ಬಿಬಿಎಂಪಿ ಅಧಿಕಾರಿಗಳು ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಮಂಗಳವಾರ ಕುಸಿದ ನಾಲ್ಕು ಮಹಡಿಯ ಕಟ್ಟಡದ ನೆಲಮಹಡಿಯಲ್ಲಿ ಬಾಗಲಕೋಟೆ ಮೂಲದವರು ಹೋಟೆಲ್ ನಡೆಸುತ್ತಿದ್ದರು. ಇನ್ನೊಂದು ಕಟ್ಟಡದಲ್ಲಿ ಐಸ್ ಕ್ರೀಮ್ ಕಾರ್ಖಾನೆಯನ್ನು ಮಹಿಳೆಯೊಬ್ಬರು ನಾಲ್ಕು ವರ್ಷದ ಹಿಂದೆ 3.80 ಕೋಟಿ ರು. ಖರೀದಿ ಮಾಡಿದ್ದರು. ಈಗ ಎಲ್ಲವೂ ನಾಶವಾಗಿದೆ. ಕಟ್ಟಡದಲ್ಲಿದ್ದ ಸಾಮಗ್ರಿಗಳನ್ನು ತೆರವು ಮಾಡದ ಕಾರಣ ಸುಮಾರು 3 ಕೋಟಿ ರು. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಕಟ್ಟಡಗಳು ಕುಸಿದ ಸ್ಥಳಕ್ಕೆ ಬುಧವಾರ ಮೇಯರ್ ಎಂ.ಗೌತಮ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ವೇಳೆ ಪಶ್ಚಿಮ ವಲಯ ಜಂಟಿ ಆಯುಕ್ತ ಚಿದಾನಂದ್, ಹೆಚ್ಚುವರಿ ನಿರ್ದೇಶಕ ಪ್ರಸಾದ್ ಇತರೆ ಅಧಿಕಾರಿಗಳು ಇದ್ದರು.
ಕಟ್ಟಡ ಕುಸಿತಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಯೋಜನಾ ವಿಭಾಗ ವಿಶೇಷ ಆಯುಕ್ತರಿಗೆ ತನಿಖೆಗೆ ಸೂಚನೆ ನೀಡಲಾಗಿದೆ. ತಜ್ಞರು ಭೇಟಿ ನೀಡಿ ಮತ್ತೆ ಯಾವುದಾದರೂ ಕಟ್ಟಡಗಳಿಗೆ ಹಾನಿ ಉಂಟಾಗ ಬಹುದಾ ಎಂಬುದನ್ನು ಪರಿಶೀಲನೆ ಮಾಡಿ ವರದಿ ನೀಡಲಿದ್ದಾರೆ. ತದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಯೋಜನಾ ವಿಭಾಗದ ಹೆಚ್ಚುವರಿ ನಿರ್ದೇಶಕ ಪ್ರಸಾದ್ ಕನ್ನಡಪ್ರಭ ಕ್ಕೆ ತಿಳಿಸಿದ್ದಾರೆ.
ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ 2018ರಲ್ಲಿಯೇ ಧರ್ಮ ಕೇಶವ್ ಪ್ಲಾಟೇಷನ್ ಸಂಸ್ಥೆ (ರಾಯಚೂರು) ವಾಣಿಜ್ಯ ಸಂಕೀರ್ಣ ಮತ್ತು ಸಭಾಂಗಣ ಉದ್ದೇಶ ನಿರ್ಮಾಣಕ್ಕೆ ಅನುಮತಿ ಪಡೆದಿತ್ತು. ಐದು ವರ್ಷದಲ್ಲಿ ಕಟ್ಟಡ ನಿರ್ಮಾಣ ಮಾಡಬೇಕು, ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಅಕ್ಕ-ಪಕ್ಕದ ಕಟ್ಟಡಗಳಿಗೆ ಹಾನಿ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಅನಾಹುತ ಉಂಟಾದರೆ ನಷ್ಟಭರಿಸಬೇಕೆಂಬ ಷರತ್ತಿನ ಮೇಲೆ ಪಾಲಿಕೆ ಅನುಮತಿ ಬಿಬಿಎಂಪಿ ನೀಡಿತ್ತು.