ಬೆಂಗಳೂರು: ಕೊರೋನಾ ವಾರ್ ರೂಂ ಸಹಾಯವಾಣಿಗೆ ಚಾಲನೆ
ಬೆಂಗಳೂರು(ಜು.27): ಬೊಮ್ಮನಹಳ್ಳಿ ಹಾಗೂ ದಕ್ಷಿಣ ವಲಯದ ಬಿಬಿಎಂಪಿಯ ಕೊರೋನಾ ವಾರ್ ರೂಂಗೆ ಭೇಟಿ ನೀಡಿದ ಮೇಯರ್ ಗೌತಮ್ ಕುಮಾರ್, ಹೋಂ ಐಸೋಲೇಷನ್‌ನಲ್ಲಿರುವ ಕೊರೋನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಭಾನುವಾರ ಬೊಮ್ಮನಹಳ್ಳಿ ವಲಯ ವ್ಯಾಪ್ತಿಯ ಎಚ್‌ಎಸ್‌ಆರ್ ಲೇಔಟ್‌ನ ಬಿಡಿಎ ಕಾಂಪ್ಲೆಕ್ಸ್ ನಲ್ಲಿ ಸ್ಥಾಪಿಸಿರುವ ಕೋವಿಡ್ ವಾರ್ ರೂಂಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಬೊಮ್ಮನಹಳ್ಳಿ ವಲಯದಲ್ಲಿ ಸೋಂಕು ನಿಯಂತ್ರಣಕ್ಕೆ ಕೋವಿಡ್ ವಾರ್ ರೂಂ ಜತೆಗೆ, ಟ್ವಿಟರ್ ಖಾತೆ BommanahalliBBMP, 24/7 ಕರೆ, ವ್ಯಾಟ್ಸಾಪ್, ಟೆಲಿಗ್ರಾಂ ಸಹಾಯವಾಣಿ ಸಂಖ್ಯೆ 8884666670 ಚಾಲನೆ ನೀಡಲಾಯಿತು.
ವಲಯದ 16 ವಾರ್ಡ್‌ಗಳ ನಾಗರಿಕರು ಸಹಾಯವಾಣಿಯಿಂದ ಕೋವಿಡ್ ಬಗ್ಗೆ ಮಾಹಿತಿ ಪಡೆಯಬಹುದು ಎಂದು ತಿಳಿಸಿದ ಮೇಯರ್ ಗೌತಮ್ ಕುಮಾರ್
ವಾರ್ಡ್ ಮಟ್ಟದ ನೋಡಲ್ ಅಧಿಕಾರಿಗಳು ಸಮರ್ಪಕ ಮಾಹಿತಿ ಪಡೆದು ತ್ವರಿತವಾಗಿ ಕೋವಿಡ್ ಸೋಂಕನ್ನು ನಿಯಂತ್ರಿಸಬೇಕು. ಹೋಂ ಐಸೊಲೇಶನ್‌ನಲ್ಲಿರುವ ಸೋಂಕಿತರನ್ನು ಒಳಗೊಂಡು ಪ್ರತಿಯೊಬ್ಬ ಸೋಂಕಿತರಿಗೂ ಅಗತ್ಯಚಿಕಿತ್ಸೆ ಸಿಗುವಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ದಕ್ಷಿಣ ವಲಯದ ಕಮ್ಯೂನಿಟಿ ಕಾಲೇಜಿನಲ್ಲಿ ಸ್ಥಾಪಿಸಿರುವ ಕೋವಿಡ್-19 ವಾರ್ ರೂಂ ಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಹೋಂ ಐಸೊಲೇಶನ್, ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರು ಕರೆ ಮಾಡಿದರೆ ಅವರ ತಾಪಮಾನ, ಆಕ್ಸಿಜನ್ ಪ್ರಮಾಣ ಹಾಗೂ ಪಲ್ಸ್ ಆಕ್ಸಿ ಮೀಟರ್ ಪಲ್ಸ್ ರೇಟ್ ಪರೀಕ್ಷಿಸಿಕೊಳ್ಳಲು ಸೂಚನೆ ನೀಡಬೇಕು. ಎಲ್ಲ ಸೋಂಕಿತರಿಗೆ ಮನೆಯಲ್ಲಿ ಪ್ರತ್ಯೇಕವಾಗಿದ್ದು, ಸೋಂಕಿನಿಂದ ಗುಣಮುಖರಾಗುವ ಬಗ್ಗೆ ಮನವರಿಕೆ ಹಾಗೂ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಮೇಯರ್ ಗೌತಮ್ ಕುಮಾರ್
ಈ ವೇಳೆ ದಕ್ಷಿಣ ವಲಯ ಜಂಟಿ ಆಯುಕ್ತ ವೀರಭದ್ರಸ್ವಾಮಿ, ಆರೋಗ್ಯಾಧಿಕಾರಿ ಡಾ. ಶಿವಕುಮಾರ್,ವಲಯ ವಲಯ ಮುಖ್ಯ ಇಂಜಿನಿಯರ್ ಸಿದ್ದೇಗೌಡ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.