ಕೊರೋನಾ ನಿಯಂತ್ರಣ, ಸದಸ್ಯರ ಪಾತ್ರ ಮಹತ್ವದ್ದು: BBMP ಆಯುಕ್ತ ಮಂಜುನಾಥ್ ಪ್ರಸಾದ್
ಬೆಂಗಳೂರು(ಜು.29): ನಗರದಲ್ಲಿ ಕೊರೋನಾ ಸೋಂಕು ನಿಯಂತ್ರಣ ಕಾರ್ಯದಲ್ಲಿ ಪಾಲಿಕೆ ಸದಸ್ಯರು ಕೈಜೋಡಿಸಬೇಕೆಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಮನವಿ ಮಾಡಿದ್ದಾರೆ.
ಮಂಗಳವಾರ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ವಾರ್ಡ್ ಮಟ್ಟದಲ್ಲಿ ಕೊರೋನಾ ಸೋಂಕಿತ ಮಾಹಿತಿ ನೀಡಲಾಗುವುದು. ವಾರ್ಡ್ ಸದಸ್ಯರು, ವಾರ್ಡ್ ಕಮಿಟಿ ಸದಸ್ಯರು ಮತ್ತು ಸ್ವಯಂ ಸೇವಕರು ಜೊತೆಗೂಡಿ ಸೋಂಕಿತರನ್ನು ಐಸೋಲೇಷನ್ ಮಾಡಿ ಸಂಪರ್ಕಿತರ ಪತ್ತೆ ಮಾಡುವುದಕ್ಕೆ ಸಹಕಾರ ನೀಡಬೇಕು. ಆಗ ಮಾತ್ರ ಸೋಂಕು ನಿಯಂತ್ರಣ ಸಾಧ್ಯವಾಗಲಿದೆ. ಸೋಂಕಿತರನ್ನು ಆಸ್ಪತ್ರೆಗೆ ದಾಖಲು ಮಾಡಲು ಪ್ರತಿ ವಾರ್ಡ್‌ಗೆ ಎರಡು ಆ್ಯಂಬುಲೆನ್ಸ್ ಸಹ ನೀಡಲಾಗುವುದು ಎಂದ ಎನ್.ಮಂಜುನಾಥ್ ಪ್ರಸಾದ್
ನಗರದಲ್ಲಿ ಪ್ರತಿದಿನ 13 ಸಾವಿರ ಜನರನ್ನು ಪರೀಕ್ಷೆ ಮಾಡಲಾಗುತ್ತಿದೆ. ಮೊದಲು ಆರೋಗ್ಯ ಸಮಸ್ಯೆಇರುವವರು, ಉಸಿರಾಟದ ಸಮಸ್ಯೆ, ಜ್ವರ, ಕೆಮ್ಮುನಿಂದ ಬಳಲುತ್ತಿರುವವರು ಪತ್ತೆ ಮಾಡಿ ಅವರಿಗೆ ಸೋಂಕು ಪರೀಕ್ಷೆ ಮಾಡುವುದರಿಂದ ಸೋಂಕು ಹರಡುವ ಪ್ರಮಾಣ ಕಡಿಮೆ ಮಾಡಬಹುದಾಗಿದೆ.
ನಗರದಲ್ಲಿ ಪತ್ತೆಯಾಗುತ್ತಿರುವ ಸೋಂಕಿತರ ಪೈಕಿ ಹೆಚ್ಚು ಮಂದಿ ಸೋಂಕು ರಹಿತ ಮತ್ತು ಮಧ್ಯಮ ಸೋಂಕಿನ ಲಕ್ಷಣ ಇರುವವರಾಗಿದ್ದಾರೆ. ಶೇ.95 ರಷ್ಟು ಗುಣಮುಖರಾಗಲಿದ್ದಾರೆ. ಈಗ ಶೇ.45ರಷ್ಟು ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ.
ಕಡಿಮೆ ಹಾಸಿಗೆ ವ್ಯವಸ್ಥೆ ಇರುವ ಕೆಲವು ಖಾಸಗಿ ಆಸ್ಪತ್ರೆಗಳು ಶೇ.50ರಷ್ಟುಹಾಸಿಗೆಗಳನ್ನು ಕೊರೋನಾ ಸೋಂಕಿತರಿಗೆ ಮೀಸಲಿಟ್ಟು ಉಳಿದ ಶೇ.50ರಷ್ಟು ಹಾಸಿಗೆಯಲ್ಲಿ ಇತರೆ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ಸಾಧ್ಯವಿಲ್ಲ. ಇಡೀ ಆಸ್ಪತ್ರೆಯನ್ನು ಕೊರೋನಾ ಸೋಂಕಿತರ ಚಿಕಿತ್ಸೆ ನೀಡುತ್ತೇವೆ. ನಮಗೆ ಆಸ್ತಿ ತೆರಿಗೆ ವಿನಾಯಿತಿ ಮಾಡಿಕೊಡಿ ಎಂದು ಮನವಿ ಮಾಡುತ್ತಿದ್ದಾರೆ. ಇನ್ನು ಕೆಲವು ಆಸ್ಪತ್ರೆಗಳು ನಮ್ಮ ಆಸ್ಪತ್ರೆಯಲ್ಲಿ ವೆಂಟಿಲೇಟರ್ ವ್ಯವಸ್ಥೆ ಇಲ್ಲ. ತುರ್ತು ವೆಂಟಿಲೇಟರ್ ಅವಶ್ಯಕತೆ ಇದೆ. ವೆಂಟಿಲೇಟರ್‌ನ್ನು ಬಿಬಿಎಂಪಿಯಿಂದ ಹಾಕಿಸಿ ಕೊಡಿ. ಆಸ್ಪತ್ರೆಯಲ್ಲಿ ಸರ್ಕಾರಿ ಕೋಟಾ ಪ್ರಕಾರ ಸೋಂಕಿತರ ಚಿಕಿತ್ಸೆ ಭರಿಸುವ ವೆಚ್ಚದಲ್ಲಿ ಕಡಿತ ಮಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ ಎಂದು ಸಭೆಗೆ ವಿವರಿಸಿದರು.
ನಗರದಲ್ಲಿ ಮುಂದಿನ ದಿನದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಲಿದೆ. ವೆಂಟಿಲೇಟರ್ ಮತ್ತು ಆಕ್ಸಿಜನ್ ಹಾಸಿಗೆಗಳ ಬೇಡಿಕೆ ಹೆಚ್ಚಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿಸಿದ ಅವರು, ಪಾಲಿಕೆಯ ಬಜೆಟ್‌ನಲ್ಲಿ ಪ್ರತಿವರ್ಷ ಶೇ.2 ರಷ್ಟು ಆರೋಗ್ಯಕ್ಕೆ ಮೀಸಲಿಟ್ಟು ಪಾಲಿಕೆ ಆಸ್ಪತ್ರೆಗಳನ್ನು ಅಭಿವೃದ್ಧಿ ಪಡಿಸುವುದಕ್ಕೆ ಮುಂದಾಗಲಿಲ್ಲ ಎಂದರು.