Bengaluru: ಬ್ರಿಟಿಷ್ ಡೆಪ್ಯುಟಿ ಕಮೀಷನರ್ ಆಗಿ ಅನ್ನಾ ಅಧಿಕಾರ ಸ್ವೀಕಾರ
ಬೆಂಗಳೂರು(ಫೆ.25): ಕರ್ನಾಟಕ(Karnataka) ಮತ್ತು ಕೇರಳ(Kerala) ರಾಜ್ಯಗಳ ಡೆಪ್ಯುಟಿ ಹೈ ಕಮೀಷನರ್ ಆಗಿ ಅನ್ನಾ ಶಾಟ್‌ಬೋಲ್ಟ್ ಬೆಂಗಳೂರಿನಲ್ಲಿ(Bengaluru) ಅಧಿಕಾರ ಸ್ವೀಕರಿಸಿದ್ದಾರೆ. ಅವರು ದಕ್ಷಿಣ ಏಷ್ಯಾದ ಡೆಪ್ಯುಟಿ ಟ್ರೇಡ್ ಕಮೀಷನರ್ ಇನ್ವೆಸ್ಟ್‌ಮೆಂಟ್ ಆಗಿಯೂ ಕಾರ್ಯನಿರ್ವಹಿಸಲಿದ್ದಾರೆ.
ದಕ್ಷಿಣ ಏಷ್ಯಾದೊಂದಿಗಿನ(South Asia) ವ್ಯಾಪಾರ ವಹಿವಾಟು ನಿರ್ವಹಿಸುವ ಹುದ್ದೆಯ ಜೊತೆಗೆ ದಕ್ಷಿಣ ಭಾರತದ(South India) ಎರಡು ಪ್ರಮುಖ ರಾಜ್ಯಗಳ ಡೆಪ್ಯುಟಿ ಹೈ ಕಮೀಷನನರ್(Deputy Commissioner) ಸ್ಥಾನವನ್ನು ಒಬ್ಬರೆ ನಿರ್ವಹಿಸುತ್ತಿರುವುದು ಬ್ರಿಟನ್-ಭಾರತದ(Britain-India) ಸಂಬಂಧದ ವ್ಯಾಪಾರ ಮತ್ತು ಹೂಡಿಕೆಯಲ್ಲಿ ಬೆಂಗಳೂರು ಮತ್ತು ದಕ್ಷಿಣ ಭಾರತದ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಬಣ್ಣಿಸಲಾಗಿದೆ.
ಈ ಹುದ್ದೆಗೆ ಏರುವ ಮೊದಲು ಅನ್ನಾ ಶಾಟ್‌ಬೋಲ್ಟ್(Anna Shotbolt) ಅಂತರರಾಷ್ಟ್ರೀಯ ವ್ಯಾಪಾರ ಇಲಾಖೆಯಲ್ಲಿ ರಫ್ತು ಬೆಂಬಲ ಸೇವೆಯ ಉಪ ನಿರ್ದೇಶಕರಾಗಿದ್ದರು. ಅದಕ್ಕೂ ಮೊದಲು ಭದ್ರತೆ, ರಕ್ಷಣೆ, ಅಭಿವೃದ್ಧಿ ಮತ್ತು ವಿದೇಶಾಂಗ ನೀತಿಯ ಸಮಗ್ರ ವಿಮರ್ಶೆಯ ಕ್ಯಾಬಿನೆಟ್ ಕಚೇರಿಯಲ್ಲಿ ಕೆಲಸ ಮಾಡಿದ್ದರು. ಚೀನಾದಲ್ಲಿ ಮೊದಲ ಕಾರ್ಯದರ್ಶಿಯಾಗಿ ಶಿಕ್ಷಣ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ವ್ಯಾಪಾರ ಮತ್ತು ಹೂಡಿಕೆಯ ಕೆಲಸ ಮಾಡಿದ್ದಾರೆ.
ಬೆಂಗಳೂರಿನಲ್ಲಿರುವ ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನ್ ಕಚೇರಿಯ ಮುಖ್ಯಸ್ಥರಾಗಿ, ಸರ್ಕಾರದೊಂದಿಗೆ ಪಾಲುದಾರಿಕೆಯನ್ನು ಬಲಪಡಿಸುವುದು, ವ್ಯಾಪಾರವನ್ನು ಉತ್ತೇಜಿಸುವುದು ಮತ್ತು ಕರ್ನಾಟಕ, ಕೇರಳ ಮತ್ತು ಯುಕೆ ನಡುವೆ ಜನರ-ಜನರ ಸಂಬಂಧಗಳನ್ನು ಬಲಪಡಿಸುವ ಕರ್ತವ್ಯ ನಿರ್ವಹಿಸಲಿದ್ದಾರೆ.
ಬೆಂಗಳೂರಿನಲ್ಲಿ ಅಧಿಕಾರ ವಹಿಸಿಕೊಳ್ಳುವ ಮೊದಲು, ಅನ್ನಾ ಲಂಡನ್‌ನಲ್ಲಿ ಇತ್ತೀಚೆಗೆ ತೆರೆಯಲಾದ ಎಂಟಿಆರ್ ರೆಸ್ಟೋರೆಂಟ್‌ಗೆ ತೆರಳಿ ಗರಿಗರಿಯಾದ ಮಸಾಲೆ ದೋಸೆ ಸವಿದಿದ್ದರು.