ಪ್ಯಾರಿಸ್ ಒಲಿಂಪಿಕ್ಸ್ ನೋಡುವ ಮುನ್ನ ಈ ಮಾಹಿತಿ ನಿಮಗೆ ಗೊತ್ತಿರಲಿ..!
2024ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕ್ಷಣಗಣನೆ ಶುರುವಾಗಿದೆ. ಜಗತ್ತಿನ ಅತಿದೊಡ್ಡ ಕ್ರೀಡಾಜಾತ್ರೆ ಎನಿಸಿಕೊಂಡಿರುವ ಈ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟ ಯಾವ ಚಾನೆಲ್ ಮೂಲಕ ನಾವು ವೀಕ್ಷಿಸಬಹುದು? ಎಷ್ಟು ದೇಶಗಳು ಪಾಲ್ಗೊಳ್ಳುತ್ತಿವೆ. ಭಾರತದಿಂದ ಪಾಲ್ಗೊಂಡಿರುವ ಕ್ರೀಡಾಪಟುಗಳು ಎಷ್ಟು ಇನ್ನಿತರ ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯೋಣ ಬನ್ನಿ
206 ದೇಶಗಳು:
ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ, ಅಮೆರಿಕ, ಸ್ಪೇನ್, ಆಸ್ಟ್ರೇಲಿಯಾ ಸೇರಿದಂತೆ ಒಟ್ಟು 206 ದೇಶಗಳು ಭಾಗವಹಿಸಲಿವೆ.
10,700+ ಅಥ್ಲೀಟ್ಸ್ ಭಾಗಿ
ಈ ಸಲದ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 10,700ಕ್ಕೂ ಹೆಚ್ಚಿನ ಅಥ್ಲೀಟ್‌ಗಳು ಪಾಲ್ಗೊಳ್ಳಲಿದ್ದಾರೆ. ಅಮೆರಿಕದಿಂದ 592 ಅಥ್ಲೀಟ್‌ಗಳು, ಭಾರತದಿಂದ 117 ಅಥ್ಲೀಟ್‌ಗಳು ಪಾಲ್ಗೊಳ್ಳುತ್ತಿದ್ದಾರೆ.
32 ಕ್ರೀಡೆಗಳು
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಒಟ್ಟು 32 ಕ್ರೀಡೆಗಳ 39 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿವೆ. ಅಥ್ಲೆಟಿಕ್ಸ್, ಶೂಟಿಂಗ್, ಬ್ರೇಕ್ ಡ್ಯಾನ್ಸ್, ಹಾಕಿ, ಬೀಚ್ ವಾಲಿಬಾಲ್ ಸೇರಿದಂತೆ 32 ಕ್ರೀಡೆಗಳು ಜರುಗಲಿವೆ.
35 ಕ್ರೀಡಾಂಗಣ
ಪ್ಯಾರಿಸ್ ಹಾಗೂ ಇತರ ಕಡೆಗಳ ಒಟ್ಟು 35 ಕ್ರೀಡಾಂಗಣಗಳು ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಲಿದೆ. 35 ಸ್ಟೇಡಿಯಂನಲ್ಲಿ ಅಥ್ಲೀಟ್‌ಗಳು ತಮ್ಮ ಪ್ರತಿಭ ಪ್ರದರ್ಶಿಸಲಿದ್ದಾರೆ
339 ಪದಕ
ಕ್ರೀಡಾಕೂಟದಲ್ಲಿ ಒಟ್ಟು 339 ಚಿನ್ನದ ಪದಕಗಳನ್ನು ಗೆಲ್ಲುವ ಅವಕಾಶವಿದೆ. ಅಂದರೆ 39 ವಿಭಾಗಗಳಲ್ಲಿ ಪ್ರತ್ಯೇಕ 339 ಸ್ಪರ್ಧೆಗಳು ನಡೆಯಲಿವೆ.
ಅಮೆರಿಕದಿಂದ 592 ಅಥ್ಲೀಟ್ಸ್
ಅಮೆರಿಕದ 592 ಅಥ್ಲೀಟ್‌ಗಳು ಗೇಮ್ಸ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇದು ಗರಿಷ್ಠ. ಇನ್ನು ಪದಕ ಬೇಟೆಯಲ್ಲೂ ವಿಶ್ವದ ದೊಡ್ಡಣ್ಣ ಮತ್ತೊಮ್ಮೆ ಅಗ್ರಸ್ಥಾನ ಕಾಯ್ದುಕೊಳ್ಳುವ ಸಾಧ್ಯತೆಯಿದೆ
17 ದಿನ
ಕ್ರೀಡಾಕೂಟ ಅಧಿಕೃತವಾಗಿ 17 ದಿನಗಳ ಕಾಲ ನಡೆಯಲಿದೆ. ಜುಲೈ 26ರಿಂದ ಆಗಸ್ಟ್ 10ರವರೆಗೆ ಈ ಕ್ರೀಡಾಕೂಟ ಪ್ಯಾರಿಸ್‌ನಲ್ಲಿ ಜರುಗಲಿದೆ.
ಭಾರತದ 117 ಅಥ್ಲೀಟ್‌ಗಳು ಭಾಗಿ
ನೀರಜ್ ಚೋಪ್ರಾ, ಪಿ.ವಿ.ಸಿಂಧು, ಕರ್ನಾಟಕದ ರೋಹನ್ ಬೋಪಣ್ಣ ಸೇರಿದಂತೆ ಭಾರತದ ಒಟ್ಟು 117 ಅಥ್ಲೀಟ್‌ಗಳು ಪಾಲ್ಗೊಳ್ಳುವುದಾಗಿ ಐಒಎ ಮಾಹಿತಿ ನೀಡಿದೆ. ಇದರಲ್ಲಿ 70 ಪುರುಷರು, 47 ಮಹಿಳೆಯರಿದ್ದಾರೆ.
ಭಾರತ ಈ ಬಾರಿ ಒಲಿಂಪಿಕ್ಸ್‌ನ ಒಟ್ಟು 16 ಕ್ರೀಡೆಗಳಲ್ಲಿ ಸ್ಪರ್ಧೆ:
ಭಾರತ ಈ ಬಾರಿ ಒಲಿಂಪಿಕ್ಸ್‌ನ ಒಟ್ಟು 16 ಕ್ರೀಡೆಗಳಲ್ಲಿ ಸ್ಪರ್ಧಿಸಲಿದೆ. ಈ ಪೈಕಿ ಅಥ್ಲೆಟಿಕ್ಸ್‌ನಲ್ಲಿ ಗರಿಷ್ಠ ಅಂದರೆ 29 ಮಂದಿ(18 ಪುರುಷ, 11 ಮಹಿಳೆಯರು) ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಶೂಟಿಂಗ್‌ನಲ್ಲಿ ಸಾರ್ವಕಾಲಿಕ ಗರಿಷ್ಠ 21 ಮಂದಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿದ್ದು, ಟೇಬಲ್ ಟೆನಿಸ್ ತಂಡದಲ್ಲಿ 8, ಬ್ಯಾಡ್ಮಿಂಟನ್‌ನಲ್ಲಿ 7 ಮಂದಿ ಕಣದಲ್ಲಿದ್ದಾರೆ. ವೇಟ್‌ಲಿಫ್ಟಿಂಗ್, ಈಕ್ವೆಸ್ಟ್ರಿಯನ್, ಜುಡೋ ಹಾಗೂ ರೋಯಿಂಗ್ ಸ್ಪರ್ಧೆಯಲ್ಲಿ ತಲಾ ಒಬ್ಬರು ಸ್ಪರ್ಧಿಸಲಿದ್ದಾರೆ.
ಜಿಯೋ ಸಿನಿಮಾ, ಸ್ಪೋರ್ಟ್ಸ್18 ನಲ್ಲಿ ನೇರ ಪ್ರಸಾರ:
ಭಾರತದ ಕ್ರೀಡಾಭಿಮಾನಿಗಳು ಡಿಡಿ ಸ್ಪೋರ್ಟ್ಸ್, ಸ್ಪೋರ್ಟ್ಸ್ 18 ಹಾಗೂ ಮೊಬೈಲ್‌ನಲ್ಲಿ ಜಿಯೋ ಸಿನಿಮಾದಲ್ಲಿ ಒಲಿಂಪಿಕ್ಸ್ ನೇರಪ್ರಸಾರ ವೀಕ್ಷಿಸಬಹುದು. ಇಂದು ರಾತ್ರಿ 11 ಗಂಟೆಗೆ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ ನಡೆಯಲಿದೆ.