ರಾಮನಗರದಲ್ಲಿ ತಂತಿಬೇಲಿಗೆ ಸಿಲುಕಿ ನರಳಾಡುತ್ತಿದ್ದ ಚಿರತೆಯ ರಕ್ಷಣೆ
ಕನಕಪುರ ತಾಲೂಕಿನ ತುಳಸಿದೊಡ್ಡಿ ಗ್ರಾಮದಲ್ಲಿ ತಂತಿಬೇಲಿಗೆ ಸಿಲುಕಿದ್ದ ಚಿರತೆಯನ್ನು ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ. ಚಿರತೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ರವಾನಿಸಲಾಗಿದೆ.

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ತುಳಸಿದೊಡ್ಡಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದ ಒಂದು ದುರಂತಕರ ಘಟನೆಯು ಅರಣ್ಯ ಮತ್ತು ಪ್ರಕೃತಿ ಪ್ರೇಮಿಗಳ ಗಮನ ಸೆಳೆಯಿತು. ಗ್ರಾಮದ ಹೊರವಲಯದ ಜಮೀನೊಂದರಲ್ಲಿ ಕಬ್ಬಿಣದ ತಂತಿಬೇಲಿಗೆ ಸಿಲುಕಿದ ಚಿರತೆ ನರಳಾಡುತ್ತಿದ್ದು, ಗ್ರಾಮಸ್ಥರ ನೆರವಿನಿಂದ ರಕ್ಷಣೆಗೊಂಡಿದೆ.
ಪ್ರತಿದಿನದಂತೆ ಬೆಳಿಗ್ಗೆ ತಮ್ಮ ಜಮೀನಿಗೆ ಹೋದ ಗ್ರಾಮಸ್ಥರು ಒಂದು ಚಿರತೆ ತಂತಿಬೇಲಿಗೆ ಸಿಲುಕಿಕೊಂಡು ಪೀಡಿತವಾಗಿ ಓದ್ದಾಡುತ್ತಿರುವ ದೃಶ್ಯವನ್ನು ನೋಡಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಚಿರತೆಯ ಬಾಲ ಕಬ್ಬಿಣದ ತಂತಿಗೆ ಸಿಕ್ಕಿಕೊಂಡಿದ್ದು, ಅದು ಹೊರಬರಲಾಗದೆ ನೋವಿನಿಂದ ಕಿರುಚುತ್ತಿದ್ದುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ತಕ್ಷಣ ಧಾವಿಸಿ ಚಿರತೆಯ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಎಚ್ಚರಿಕೆಯಿಂದ ತಂತಿಬೇಲಿಯನ್ನು ಕತ್ತರಿಸಿ ಚಿರತೆಯನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದರು. ಬಳಿಕ ಚಿರತೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ರವಾನಿಸಲಾಯಿತು.
ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರ ಕಾಳಜಿಯನ್ನು ಶ್ಲಾಘಿಸಿದರು. 'ಗ್ರಾಮಸ್ಥರು ತಕ್ಷಣ ನಮಗೆ ಮಾಹಿತಿ ನೀಡಿದ ಕಾರಣ, ಚಿರತೆಯನ್ನು ಸಮಯಕ್ಕೆ ಸರಿಯಾಗಿ ರಕ್ಷಣೆ ಮಾಡಿದ್ದೇವೆ. ಇಂತಹ ಪ್ರಾಣಿಗಳ ರಕ್ಷಣೆಗೆ ನಾಗರಿಕ ಜವಾಬ್ದಾರಿ ಕೂಡ ಅಗತ್ಯ ಎಂದು ಹೇಳಿದರು.